ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಮಿಲಿಂದ್ ದೆವೋರಾ ವಿರುದ್ಧ ಎಫ್‌ಐಆರ್ ದಾಖಲು

Update: 2019-04-21 16:54 GMT

ಮುಂಬೈ, ಎ. 21: ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಮುಂಬೈಯ ಕಾಂಗ್ರೆಸ್ ಅಧ್ಯಕ್ಷ ಮಿಲಿಂದ್ ದೆವೋರಾ ವಿರುದ್ಧ ಎಲ್‌ಟಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೈನ ಸಮುದಾಯದ ಬಗ್ಗೆ ಹೇಳಿಕೆ ನೀಡಿದ ಬಳಿಕ ದೆವೋರಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಎಲ್ ಮಾರ್ಗ್ ಪೊಲೀಸರಿಗೆ ಮಹಾರಾಷ್ಟ್ರ ಚುನಾವಣಾ ಆಯೋಗ ಸೂಚಿಸಿದ ಎರಡು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಶಿವಸೇನೆ ನಾಯಕನಿಂದ ದೂರು ಸ್ವೀಕರಿಸಿದ ಬಳಿಕ ಚುನಾವಣಾ ಆಯೋಗ ಈ ವಿಷಯದ ಬಗ್ಗೆ ಗಮನ ಹರಿಸಿದೆ. ಎಪ್ರಿಲ್ 4ರಂದು ಝವೇರಿ ಬಜಾರ್‌ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು ಜೈನ ಅನುಯಾಯಿಗಳ ಧಾರ್ಮಿಕ ಭಾವನೆಗಳಿಗೆ ಶಿವಸೇನೆ ಘಾಸಿ ಉಂಟು ಮಾಡಿದೆ ಎಂದು ಆರೋಪಿಸಿದ್ದರು.

ಲೋಕಸಭಾ ಚುನಾವಣೆಯಲ್ಲಿ ಶಿವಸೇನೆಗೆ ಮತ ಹಾಕದೆ ಪಾಠ ಕಲಿಸುವಂತೆ ಮುಂಬೈ ಕಾಂಗ್ರೆಸ್ ಅಧ್ಯಕ್ಷ ಜೈನ ಸಮುದಾಯವನ್ನು ಆಗ್ರಹಿಸಿದ್ದರು. ‘‘ಶಿವಸೇನೆ ಅಲ್ಪಸಂಖ್ಯಾತರ ವಿರುದ್ಧವಾಗಿದೆ. ಕೆಲವು ವರ್ಷಗಳ ಹಿಂದೆ ಪರ್ಯುಶನ ಉತ್ಸವದ ಸಂದರ್ಭ ಜೈನ ಬಸದಿಯ ಹೊರಗೆ ಮಾಂಸ ಬೇಯಿಸುವ ಮೂಲಕ ಶಿವಸೇನೆ ಜೈನ ಧರ್ಮಕ್ಕೆ ಅವಮಾನ ಮಾಡಿದೆ. ಅವರಿಗೆ ಮತದಾನ ಮಾಡದಿರುವ ಮೂಲಕ ನೀವು ಪಾಠ ಕಲಿಸಬೇಕು’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News