ಹರಿದ ರಕ್ತದ ಕೋಡಿ,ಗೋಡೆ ಮೇಲೆಲ್ಲಾ ಮಾಂಸದ ತುಣುಕು

Update: 2019-04-21 17:31 GMT

ಕೊಲಂಬೊ,ಎ.21: ಶ್ರೀಲಂಕಾದಲ್ಲಿ ರವಿವಾರ ನಡೆದ ಸರಣಿ ಸ್ಫೋಟಕ್ಕೆ ತುತ್ತಾದ ಚರ್ಚ್‌ಗಳಲ್ಲೊಂದಾದ, ನೆಬಾಂಬೊ ಪಟ್ಟಣದ ಸೈಂಟ್ ಸೆಬಾಸ್ಟಿಯನ್ ಚರ್ಚ್‌ನಲ್ಲಿ ರಕ್ತದ ಕೋಡಿಯೇ ಹರಿದಿದೆ. ಚರ್ಚ್‌ನೊಳಗೆ ಬಿದ್ದಿರುವ ಶವಗಳು, ಗೋಡೆಗಳಲ್ಲಿ ಚೂರುಚೂರಾಗಿ ಅಂಟಿಕೊಂಡಿರುವ ಮಾನವ ಮಾಂಸದ ತುಣುಕುಗಳು ಈ ಭೀಕರ ಘಟನೆಗೆ ಮೂಕಸಾಕ್ಷಿಗಳಾಗಿವೆ.

ಈಸ್ಟರ್ ರವಿವಾರದ ಪ್ರಾರ್ಥನಾ ಸಭೆ ನಡೆದ ಕೆಲವೇ ನಿಮಿಷಗಳ ಬಳಿಕ ಸ್ಫೋಟ ಸಂಭವಿಸಿದೆಯೆಂದು ಕೊಲಂಬೊದ ಅರ್ಚ್‌ಡಯೋಸಿಸ್‌ನ ಸಾಮಾಜಿಕ ಸಂಪರ್ಕ ನಿರ್ದೇಶಕ ಫಾದರ್ ಎಡ್ಮಂಡ್ತಿಲಕರತ್ನೆ ತಿಳಿಸಿದ್ದಾರೆ. ಸ್ಪೋಟದಿಂದಾಗಿ ಸ್ಥಳದಲ್ಲಿ ಕನಿಷ್ಠ 30 ಮಂದಿ ಸಾವನ್ನಪ್ಪಿದ್ದಾರೆಂದು ಆತ ಹೇಳಿದ್ದಾರೆ. ಸ್ಫೋಟದ ವೇಳೆ ಇಬ್ಬರು ಕ್ರೈಸ್ತ ಪಾದ್ರಿಗಳಿಗೂ ಗಾಯಗಳಾಗಿವೆ.

ಈಸ್ಟರ್ ರವಿವಾರದ ಪ್ರಯುಕ್ತ ಸಾವಿರಕ್ಕೂ ಆಧಿಕ ಮಂದಿ ಚರ್ಚ್‌ನ ಆವರಣದಲ್ಲಿ ಜಮಾಯಿಸಿದ್ದರು. ಅವರಲ್ಲಿ ಅನೇಕ ಮಂದಿ ಗ್ರಾಮಾಂತರ ಪ್ರದೇಶಗಳಿಂದ ಬಂದವರಾಗಿದ್ದರೆಂದು ಆತ ತಿಳಿಸಿದ್ದಾರೆ. 1946ರಲ್ಲಿ ಸ್ಥಾಪನೆಯಾದ ಸೈಂಟ್ ಸೆಬಾಸ್ಟಿಯನ್ ಚರ್ಚ್, ಶ್ರೀಲಂಕಾದ ಪ್ರಮುಖ ಚರ್ಚ್‌ಗಳಲ್ಲೊಂದೆನಿಸಿದೆ.

ಸರಣಿ ಸ್ಫೋಟ ಘಟನೆಯನ್ನು ಕೊಲಂಬೊದ ಅರ್ಚ್ ಬಿಶಪ್ ಕಾರ್ಡಿನಲ್ ಮಾಲ್ಕಂ ರಂಜಿತ್ ಪ್ರಬಲವಾಗಿ ಖಂಡಿಸಿದ್ದು, ಈವಿಧ್ವಂಸಕ ಕೃತ್ಯಗಳಿಗೆ ಕಾರಣರಾದವರಿಗೆ ನಿಷ್ಕರಣೆಯಿಂದ ಶಿಕ್ಷೆವಿಧಿಸಬೇಕೆಂದು ಅವರು ಹೇಳಿದ್ದಾರೆ.

ಸರಣಿ ಸ್ಫೋಟದ ಹಿನ್ನೆಲೆಯಲ್ಲಿ ಕೊಲಂಬೊ ಜಿಲ್ಲೆಯ ಎಲ್ಲಾ ಚರ್ಚ್‌ಗಳಲ್ಲಿಯೂ ರವಿವಾರದ ಪ್ರಾರ್ಥನಾಸಭೆಗಳನ್ನು ರದ್ದುಪಡಿಸಲಾಗಿದೆಯೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News