ಮೀರಾಬಾಯಿ ವೆಯಕ್ತಿಕ ಶ್ರೇಷ್ಠ ಸಾಧನೆ

Update: 2019-04-21 18:33 GMT

ನಿಂಗ್‌ಬೋ (ಚೀನಾ), ಎ.21: ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ವೈಯಕ್ತಿಕ ಶ್ರೇಷ್ಠ ಸಾಧನೆ ತೋರಿದರೂ ಕೂದಲೆಳೆ ಅಂತರದಲ್ಲಿ ಏಶ್ಯನ್ ವೇಯ್ಟಿಲಿಫ್ಟಿಂಗ್‌ನ 49 ಕೆಜಿ ವಿಭಾಗದಲ್ಲಿ ಕಂಚಿನ ಪದಕ ತಪ್ಪಿಸಿಕೊಂಡಿದ್ದಾರೆ. ರವಿವಾರ ಇಲ್ಲಿ ನಡೆದ ಫೈನಲ್ಸ್‌ನಲ್ಲಿ ಅವರು ನಾಲ್ಕನೇ ಸ್ಥಾನಿಯಾದರು.

24 ವರ್ಷದ ಮೀರಾಬಾಯಿ ಸ್ನಾಚ್‌ನಲ್ಲಿ 86 ಕೆಜಿ ಹಾಗೂ ಕ್ಲೀನ್ ಆ್ಯಂಡ್ ಜೆರ್ಕ್ ವಿಭಾಗದಲ್ಲಿ 113 ಕೆಜಿ ಸೇರಿದಂತೆ ಒಟ್ಟು ವೈಯಕ್ತಿಕ ಶ್ರೇಷ್ಠ ಸಾಧನೆ 199 ಕೆಜಿ ಭಾರವನ್ನು ಎತ್ತಿದರು. 49 ಕೆಜಿ ವಿಭಾಗದಲ್ಲಿ ಅವರ ಹಿಂದಿನ ಸಾಧನೆ ಥಾಯ್ಲೆಂಡ್‌ನಲ್ಲಿ ನಡೆದ ಇಜಿಎಟಿ ಕಪ್‌ನಲ್ಲಿ ಮೂಡಿಬಂದಿದ್ದು, ಅಲ್ಲಿ ಅವರು 192 ಕೆಜಿ ಭಾರ ಎತ್ತಿದ್ದರು. ಚೀನಾದ ಝಾಂಗ್ ರೊಂಗ್ ಕೂಡ 199 ಕೆಜಿ (88+111 ಕೆಜಿ) ಭಾರ ಎತ್ತಿದರೂ 2017ರಲ್ಲಿ ಜಾರಿಗೆ ಬಂದ ನೂತನ ನಿಯಮಗಳ ಪ್ರಕಾರ ಅವರು ಮೂರನೇ ರ್ಯಾಂಕ್ ಪಡೆದರು. ಈ ನಿಯಮಗಳ ಪ್ರಕಾರ ಒಟ್ಟಾರೆ ಭಾರ ಎತ್ತಿದ ಹಿನ್ನೆಲೆಯಲ್ಲಿ ಅಥ್ಲೀಟ್‌ಗಳನ್ನು ವಿಭಜಿಸಿದಾಗ ಕ್ಲೀನ್ ಆ್ಯಂಡ್ ಜೆರ್ಕ್ ವಿಭಾಗದಲ್ಲಿ ಕಡಿಮೆ ಭಾರ (ಅಂದರೆ ಗರಿಷ್ಠ ಸ್ನಾಚ್ ಫಲಿತಾಂಶ) ಎತ್ತುವ ಸ್ಪರ್ಧಿಗೆ ಉನ್ನತ ರ್ಯಾಂಕ್ ದೊರೆಯುತ್ತದೆ.

ಈ ವಿಭಾಗದಲ್ಲಿ ಚೀನಾದ ಹೌ ಝಿಹ್ಯು 208 ಕೆಜಿ (92 + 116 ಕೆಜಿ) ಭಾರ ಎತ್ತಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಉತ್ತರ ಕೊರಿಯದ ರಿ ಸಾಂಗ್-ಗಮ್ 200 ಕೆಜಿ (86 + 11 ಕೆಜಿ) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಇದು ಒಲಿಂಪಿಕ್ಸ್ ಅರ್ಹತಾ ಟೂರ್ನಿಯಾಗಿದೆ.

ಅದಾಗ್ಯೂ ಮೀರಾಬಾಯಿ ಕ್ಲೀನ್ ಆ್ಯಂಡ್ ಜೆರ್ಕ್‌ನಲ್ಲಿ ಕಂಚಿನ ಪದಕ ಗೆದ್ದರೂ ಸ್ನಾಚ್ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದರು. ವಿಶ್ವ ಚಾಂಪಿಯನ್‌ಶಿಪ್ ಹಾಗೂ ಖಂಡಾಂತರ ಟೂರ್ನಿಗಳಲ್ಲಿ ಸ್ನಾಚ್ ಹಾಗೂ ಕ್ಲೀನ್ ಆ್ಯಂಡ್ ಜೆರ್ಕ್‌ಗೆ ಬೇರೆ ಬೇರೆಯಾಗಿ ಪ್ರಶಸ್ತಿ ನೀಡಲಾಗುತ್ತದೆ. ಆದರೆ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಒಟ್ಟಾರೆ ಎತ್ತಿದ ಭಾರವನ್ನು ಪರಿಗಣಿಸಿ ನೀಡಲಾಗುತ್ತದೆ.

ಅಂತರ್‌ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಒಕ್ಕೂಟವು ಸ್ಪರ್ಧಿಗಳ ತೂಕ ವಿಭಾಗದಲ್ಲಿ ಬದಲಾವಣೆ ಮಾಡಿದ ಬಳಿಕ 48 ಕೆಜಿ ವಿಭಾಗದಿಂದ ಮೀರಾ, 49 ಕೆಜಿಗೆ ಬದಲಾಯಿಸಿಕೊಂಡಿದ್ದರು. 49 ಕೆಜಿ ಅವರು ಸ್ಪರ್ಧಿಸುತ್ತಿರುವ ಎರಡನೇ ಟೂರ್ನಿ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News