ಶ್ರೀಲಂಕಾ ಸರಣಿ ಸ್ಫೋಟಕ್ಕೆ ಬಲಿಯಾದವರಲ್ಲಿ ಆರು ಮಂದಿ ಭಾರತೀಯರು

Update: 2019-04-22 04:05 GMT

ಕೊಲಂಬೊ, ಎ.22: ಶ್ರೀಲಂಕಾ ರಾಜಧಾನಿಯಲ್ಲಿ ರವಿವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಮೃತಪಟ್ವರ ಸಂಖ್ಯೆ 290ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಕನಿಷ್ಠ ಆರು ಮಂದಿ ಭಾರತೀಯರು ಸೇರಿದ್ದಾರೆ. ಒಟ್ಟು 27 ವಿದೇಶಿಯರು ದಾಳಿಯಲ್ಲಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 500 ಮಂದಿಗೆ ಗಾಯಗಳಾಗಿವೆ.

ದಶಕದ ಹಿಂದೆ ಭೀಕರ ನಾಗರಿಕ ಯುದ್ಧ ಕೊನೆಗೊಂಡ ಬಳಿಕ ದೇಶದ ಇತಿಹಾಸದಲ್ಲೇ ಕರಾಳ ದಾಳಿ ಇದಾಗಿದೆ. ಕೊಲಂಬೊದ ಸಂತ ಆಂತೋನಿ ಶ್ರೈನ್ ಎ ಕೆಥೊಲಿಕ್ ಚರ್ಚ್, ಚಿನ್ನಮೋನ್ ಗ್ರಾಂಡ್, ಶಾಂಗ್ರಿ ಲಾ ಮತ್ತು ಕಿಂಗ್ಸ್‌ಬರಿ ಹೋಟೆಲ್‌ಗಳಲ್ಲಿ ಏಕಕಾಲಕ್ಕೆ ಸ್ಫೋಟ ಸಂಭವಿಸಿತ್ತು. ಇದಾದ ಕೆಲ ಗಂಟೆಗಳ ಬಳಿಕ ಉತ್ತರ ಕೊಲಂಬೊದ ಸಂತ ಸೆಬಾಸ್ಟಿಯನ್ ಕೆಥೊಲಿಕ್ ಚರ್ಚ್ ಹಾಗೂ ಬಟ್ಟಿಕೋಲಾ ನಗರದ ಪ್ರೊಟೆಸ್ಟೆಂಟ್ ಝಿಯಾನ್ ಚರ್ಚ್‌ನಲ್ಲಿ ಸ್ಫೋಟ ಸಂಭವಿಸಿತ್ತು.

ದಾಳಿಯಲ್ಲಿ ಮೃತಪಟ್ಟ ಭಾರತೀಯರೆಂದರೆ ಮಂಗಳೂರು ಬೈಕಂಪಾಡಿ ನಿವಾಸಿ ಅಬ್ದುಲ್ ಖಾದರ್ ಕುಕ್ಕಾಡಿ ಎಂಬವರ ಪತ್ನಿ, ಕಾಸರಗೋಡು ಮೂಲದ ಶ್ರೀಲಂಕನ್ ಪ್ರಜೆಯಾಗಿದ್ದ ರಝೀನಾ ಅಬ್ದುಲ್ ಖಾದರ್, ಕೆ.ಜಿ.ಹನುಮಂತರಾಯಪ್ಪ, ಎಂ.ರಂಗಪ್ಪ, ಲಕ್ಷ್ಮೀ, ನಾರಾಯಣ ಚಂದ್ರಶೇಖರ್ ಮತ್ತು ರಮೇಶ್.

"ನ್ಯಾಷನಲ್ ಹಾಸ್ಪಿಟಲ್ ನೀಡಿದ ಮಾಹಿತಿಯನ್ನು ಆಧರಿಸಿ ಮೂವರು ಭಾರತೀಯರು ದಾಳಿಯಲ್ಲಿ ಜೀವ ಕಳೆದುಕೊಂಡಿರುವುದನ್ನು ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನ್ ದೃಢಪಡಿಸಿದೆ. ವಿವರ ನಿರೀಕ್ಷಿಸಲಾಗಿದೆ" ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ಸುರೇಂದ್ರ ಎಂಬ ಭಾರತೀಯರೊಬ್ಬರು ಮತ್ತು ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಭಕ್ತ ಬಲ್ಲಾ ಎಂಬುವವರು ಗಾಯಗೊಂಡಿದ್ದಾರೆ.

ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತಿಲ್ಲವಾದರೂ, ಧಾರ್ಮಿಕ ಭಯೋತ್ಪಾದಕ ಸಂಘಟನೆಗಳ ಕೃತ್ಯ ಇದಾಗಿದೆ ಎಂದು ರಕ್ಷಣಾ ಸಚಿವ ರುವಾನ್ ವಿಜೇವರ್ಧನಾ ಹೇಳಿದ್ದಾರೆ.

ಘಟನೆ ಸಂಬಂಧಿಸಿ ಇದುವರೆಗೆ 24 ಮಂದಿ ಶಂಕಿತರನ್ನು ಬಂಧಿಸಲಾಗಿದೆ. ಕೊಲಂಬೊ ಹೊರವಲಯದ ದೆಮತಗೊಡ ಎಂಬಲ್ಲಿ ಶಂಕಿತರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಮೂವರು ಪೊಲೀಸ್ ಅಧಿಕಾರಿಗಳೂ ಬಲಿಯಾಗಿದ್ದಾರೆ. ತಮ್ಮ ಬಂಧನವನ್ನು ತಡೆಯಲು ಶಂಕಿತರು ಸ್ಫೋಟಕಗಳನ್ನು ಸಿಡಿಸಿದಾಗ ಈ ದುರ್ಘಟನೆ ನಡೆದಿದೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News