ಕಾಂಗ್ರೆಸ್ ನಾಯಕನ ವಿರುದ್ಧ ಮಾನಹಾನಿಕರ ಹೇಳಿಕೆ: ಸ್ಮೃತಿ ಇರಾನಿಗೆ ಸುಪ್ರೀಂ ಕೋರ್ಟ್ ನೋಟಿಸ್

Update: 2019-04-22 18:36 GMT

ಹೊಸದಿಲ್ಲಿ, ಎ. 22: ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಪರಸ್ಪರ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಸೃತಿ ಇರಾನಿ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸು ಜಾರಿ ಮಾಡಿದೆ.

2013ರಲ್ಲಿ ಸ್ಮೃತಿ ಇರಾನಿ ಅವರು ತನ್ನ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸುವಂತೆ ಸಂಜಯ್ ನಿರುಪಮ್ ಕೋರಿದ್ದ ಮನವಿ ಪರಿಶೀಲನೆಗೆ ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿಸಿದೆ. ತನ್ನ ವಿರುದ್ಧ ಜಾರಿಗೊಳಿಸಲಾದ ಸಮನ್ಸ್ ಅನ್ನು ರದ್ದುಗೊಳಿಸುವಂತೆ ಆಗ್ರಹಿಸಿದ ಸಲ್ಲಿಸಿದ ಮನವಿ ತಿರಸ್ಕರಿಸಿ ದಿಲ್ಲಿ ಹೈಕೋರ್ಟ್ ನೀಡಿದ ಆದೇಶವನ್ನು ಸಂಜಯ್ ನಿರುಪಮ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದರೆ, ಸ್ಮತಿ ಇರಾನಿ ವಿರುದ್ಧ ಸಂಜಯ್ ನಿರುಪಮ್ ದಾಖಲಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ಸ್ಮೃತಿ ಇರಾನಿಗೆ ನೀಡಲಾಗಿದ್ದ ಸಮನ್ಸ್ ಅನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಸಂಜಯ್ ನಿರುಪಮ್ ವಿರುದ್ಧದ ಪ್ರಕರಣ ಮುಂದುವರಿಯಲಿದೆ ಎಂದು ಕಳೆದ ವರ್ಷ ಡಿಸೆಂಬರ್‌ನಲ್ಲಿ ಹೈಕೋರ್ಟ್ ಹೇಳಿತ್ತು.

ಗುಜರಾತ್ ವಿಧಾನ ಸಭೆ ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ 2012 ಡಿಸೆಂಬರ್ 20ರಂದು ಖಾಸಗಿ ಟಿ.ವಿ. ವಾಹಿನಿಯೊಂದರ ಚರ್ಚೆಯಲ್ಲಿ ಸಂಜಯ್ ನಿರುಪಮ್ ಹಾಗೂ ಸ್ಮತಿ ಇರಾನಿ ಪಾಲ್ಗೊಂಡಿದ್ದರು. ಈ ಸಂದರ್ಭ ಸ್ಮೃತಿ ಇರಾನಿ ಅವರು ಸಂಜಯ್ ನಿರುಪಮ್ ವಿರುದ್ಧ ಮಾನಹಾನಿಕರ ಹಾಗೂ ಅಶ್ಲೀಲ ಹೇಳಿಕೆ ನೀಡಿದ್ದರು. ಈ ಬಗ್ಗೆ ಸಂಜಯ್ ನಿರುಪಮ್ ಅವರು ಪ್ರಕರಣ ದಾಖಲಿಸಿದ್ದರು.

ಅದಕ್ಕಿಂತ ಮೊದಲು ಸ್ಮೃತಿ ಇರಾನಿ ಅವರು ಸಂಜಯ್ ನಿರುಪಮ್ ವಿರುದ್ಧ ದೂರು ದಾಖಲಿಸಿ, ಟಿ.ವಿ. ವಾಹಿನಿಯ ಇದೇ ಚರ್ಚೆಯಲ್ಲಿ ಸಂಜಯ್ ನಿರುಪಮ್ ತನ್ನ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದರು. ಸ್ಮೃತಿ ಇರಾನಿ ಬಗ್ಗೆ ಮಾನಹಾನಿಕರ ಹಾಗೂ ಅಶಿಸ್ತಿನ ಭಾಷೆ ಬಳಸಿದ ಹಿನ್ನೆಲೆಯಲ್ಲಿ ಸಂಜಯ್ ನಿರುಪಮ್ ವಿರುದ್ಧ ವಿಚಾರಣಾ ನ್ಯಾಯಾಲಯ ಆರೋಪ ಪಟ್ಟಿ ರೂಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News