ಮೋದಿಯ ‘ಹಿಂದುತ್ವ 3.0’ ಎಂಬ ಜಿ.ಎಂ. ತಳಿ

Update: 2019-04-22 18:56 GMT

ಮೋದಿ ಆಧುನಿಕ ತಂತ್ರಜ್ಞಾನದ ಪ್ರಳಯಾಂತಕ ಘಾತಕ ಶಕ್ತಿಯನ್ನು ಅರ್ಥ ಮಾಡಿಕೊಂಡ ಮೊದಲ ಭಾರತೀಯ ರಾಜಕಾರಣಿ. ನಿಜನಾಯಕನೊಬ್ಬ ಇದನ್ನು ನಿಯಂತ್ರಿಸುವ ಬಗ್ಗೆ ಯೋಚಿಸುತ್ತಿದ್ದ. ಆದರೆ ಮೋದಿ ಇದನ್ನು ದೇಶಾದ್ಯಂತ ಛೂ ಬಿಟ್ಟರು. ಅದಕ್ಕೆ ಬೇಕಾಗಿದ್ದ ಕುಲಾಂತರಿ ತಂತ್ರ ಜ್ಞಾನ ಸರಳ. ಹಳೆಯ ಬೇರಿನ ಮೂಲ ಸತ್ವವನ್ನು ಬಳಸುತ್ತಾ ಅದರೊಳಗೆ ಹೊಸ ನಿಯಂತ್ರಕ ಸಂದೇಶವನ್ನು ಅವ್ಯಾಹತವಾಗಿ ಸುರಿದು ಅದನ್ನು ನಂಬುವ ಸಮ್ಮೋಹಿತ ಮನಸ್ಸುಗಳನ್ನು ತಯಾರು ಮಾಡುವುದು.ಇದರ ಭಾಗವಾಗಿಯೇ ಸಾವಿರಾರು ವಾಟ್ಸ್‌ಆ್ಯಪ್ ಗ್ರೂಪ್‌ಗಳು ಹುಟ್ಟಿಕೊಂಡಿದ್ದು. ಹಾಗೇ ಫೇಸ್‌ಬುಕ್‌ನಂತಹ ತಾಣಗಳಲ್ಲೂ ಈ ಒಮ್ಮುಖ ಪ್ರವಾಹವನ್ನು ಭರಪೂರ ಹರಿಸುವ ತಂತ್ರಜ್ಞಾನವನ್ನು ಪರಿಪೂರ್ಣಗೊಳಿಸಿದ್ದು.

ಅಡ್ವಾಣಿಯವರ ಆವೃತ್ತಿಗೆ ಎರಡು ಉದ್ದಿಶ್ಯ ಇತ್ತು.

1. ಹಿಂದುತ್ವವನ್ನು ಅಧಿಕಾರಕ್ಕೇರುವ ಒಂದು ಸಾಧನವಾಗಿ ಬಳಸುವುದು.

2. ಬಹುಸಂಖ್ಯಾತ ಯಜಮಾನಿಕೆಯನ್ನು ದೇಶಾದ್ಯಂತ ಊರಿಸುವುದು. ಇದು ಮೂಲತಃ ನಮ್ಮ ಗ್ರಾಮೀಣ ಜಾತಿ ಪಾಳೇಗಾರಿಕೆಯ ಸುಧಾರಿತ ಯಜಮಾನಿಕೆ. ಊರಿನ ಸಣ್ಣಪುಟ್ಟ ಜಾತಿಗಳವರು ಮಡುಗಿದಲ್ಲಿ ಇರಬೇಕೆನ್ನುವ ಸನ್ನದು ಮೊದಲೇ ಇತ್ತು. ಅದರ ಪಾನ್ ಇಂಡಿಯನ್ ರೂಪ ಇದು. ವ್ಯತ್ಯಾಸ ಎಂದರೆ ಇಲ್ಲಿ ಈ ಸ್ಥಿತಿಯಲ್ಲಿ ಅಲ್ಪಸಂಖ್ಯಾತರು ಮತ್ತು ದಲಿತರು ಮಾತ್ರ ಇರುತ್ತಾರೆ. ನಮ್ಮ ಗ್ರಾಮೀಣ ಪರಿಸರದ ಮೇಲ್ಜಾತಿಗಳಿಗೆ ಇದು ಆಪ್ಯಾಯಮಾನವಾಗಿದ್ದು ಈ ಕಾರಣಕ್ಕೆ. ಆದರೆ ಅಡ್ವಾಣಿಯ ಹಳೆತಲೆಮಾರಿನ ಡ್ಯಾಶ್ ಬೋರ್ಡಿನಲ್ಲಿ ವೈಯಕ್ತಿಕ ಚಾರಿತ್ರ್ಯಕ್ಕೊಂದು ನೆಲೆ ಇತ್ತು. ಅದನ್ನು ಹೆಗ್ಗಳಿಕೆ ಎಂಬಂತೆ ತೋರಿಸಲಾಗುತ್ತಿತ್ತು. ಅದು ಮೊದಲು ಸೋರಿಕೆಯಾದದ್ದು ಕಲ್ಯಾಣ್ ಸಿಂಗ್ ಅವರ ಮೂಲಕ. ಮತ್ತೆ ನಮ್ಮ ಕರ್ನಾಟಕದ ಭಾಜಪ ಇದನ್ನು ಪೂರಾ ಶಿಥಿಲಗೊಳಿಸಲು ಕೈಲಾದ ಸೇವೆ ಮಾಡಿತು. ಆದರೆ ಅಡ್ವಾಣಿಯಂತಹವರಿಗೆ ಕೀರಲು ದನಿಯಲ್ಲಿ ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಚಡಪಡಿಕೆ ಇತ್ತು. ಆದ್ದರಿಂದಲೇ ಕರ್ನಾಟಕದ ಭಾಜಪದ ಕರ್ಮಕಾಂಡಗಳು ಕೇಂದ್ರ ಭಾಜಪವನ್ನು ಮುಜುಗರಕ್ಕೀಡು ಮಾಡಿದೆ ಎಂಬ ಸನ್ನೆಗಳು ದೊರೆತವು. ಇದರಿಂದ ಪಕ್ಷಕ್ಕೆ ಏನು ಲಾಭವಾಯಿತೋ ಗೊತ್ತಿಲ್ಲ. ಭ್ರಷ್ಟಾಚಾರ ರಹಿತ ವೈಯಕ್ತಿಕ ಚಾರಿತ್ರ್ಯಗಳೆಲ್ಲಾ ನಮ್ಮ ವಿಶಿಷ್ಟ ಎದೆಪದಕವೆಂಬಂತೆ ಭಾಜಪ ಬೀಗುತ್ತಿದ್ದ ಕಾಲವೊಂದಿತ್ತು. ಬಂಗಾರು ಲಕ್ಷ್ಮಣರಿಂದ ಹಿಡಿದು ಕರ್ನಾಟಕದ ಹತ್ತು ಹಲವು ಭಾಜಪ ಧುರೀಣರು ಇದನ್ನು ಕೆಡವಲು ಕರಸೇವೆ ಮಾಡಿದರು.

ಅಡ್ವಾಣಿ ಡ್ಯಾಶ್ ಬೋರ್ಡಿನಲ್ಲಿ ಸಾಂವಿಧಾನಿಕ ಶಿಷ್ಟಾಚಾರಗಳಿಗೆ ಗೌರವ ತೋರಿಸುವ ನೆಲೆ ಇತ್ತು. ಇದು ಒಟ್ಟಾರೆ ಆಟದ ನಿಯಮ ಆದ ಕಾರಣ ಅದನ್ನು ಉಲ್ಲಂಘಿಸುವ ಕ್ರಮ ತೀರಾ ಭಂಡಗೆಟ್ಟಿರಲಿಲ್ಲ. ಅಡ್ವಾಣಿ ಕಾಲದಲ್ಲಿ ರಾಜಕೀಯ ಬೆಳವಣಿಗೆಗಳಿಗೆ ಅದೇ ಅಖಾಡಾದಲ್ಲಿ ಪ್ರತಿಕ್ರಿಯಿಸುವ ಕ್ರಮ ಇತ್ತು. ಹಾಗೇ ಸಂದ ಕಾಲದ ಉಪದ್ವಾಪಗಳ ಬಗ್ಗೆಯೂ ಒಂದಷ್ಟು ತರ್ಕಬದ್ಧವಾದ ಮಂಡನೆ ಇತ್ತು.

ಸಾಮಾಜಿಕ ಜಾಲತಾಣಗಳು ಸಕ್ರಿಯವಾಗಿರಲಿಲ್ಲ ಎಂಬುದೇನೋ ನಿಜ. ಮೂಲತಃ ಅಷ್ಟು ಲಜ್ಜೆ ಉಳಿಸಿಕೊಂಡಿದ್ದ ತಲೆಮಾರು ಇದನ್ನು ಪ್ರೋತ್ಸಾಹಿಸುತ್ತಿರಲಿಲ್ಲ. ಆದರೆ ಆರೆಸ್ಸೆಸ್ ಮೂಲತಃ ಇಂತಹ ಕಿಂವದಂತಿಗಳ ಮೂಲಕವೇ ಕೋಮು ಧ್ರುವೀಕರಣವನ್ನು ಹರಡಿದ್ದು. ಉದಾ: ಆ ಊರಲ್ಲಿ ಇಷ್ಟು ಜನರ ಹತ್ಯೆಯಾಯಿತಂತೆ ಎಂದು ಇನ್ನೊಂದು ಊರಲ್ಲಿ ಪಿಸುಗುಟ್ಟುವ ಕ್ರಮ ಇದು. ಸ್ವತಃ ನಾನೇ ಇಂತಹ ಹಲವು ಬಾಯ್ದೆರೆ ಕಥೆಗಳಿಗೆ ಸಾಕ್ಷಿಯಾಗಿದ್ದೇನೆ.

ಇಂತಹ ಸಂಘಟನೆಗೆ, ಸಾಂವಿಧಾನಿಕ ಚೌಕಟ್ಟಿನೊಳಗೆ ಕಾರ್ಯ ನಿರ್ವಹಿಸುವ ಮನಃಸ್ಥಿತಿಯ ಅಡ್ವಾಣಿ ಡೇಟೆಡ್ ವಾಹನದಂತೆ ಕಂಡಿದ್ದು ಅಚ್ಚರಿಯೇನಿಲ್ಲ. ಆಗ ಬಂದಿದ್ದು ಮೋದಿ.

ಮೋದಿಯವರ ಹಿಂದುತ್ವ 3.0:

ಮೋದಿ ಆಧುನಿಕ ತಂತ್ರಜ್ಞಾನದ ಪ್ರಳಯಾಂತಕ ಘಾತಕ ಶಕ್ತಿಯನ್ನು ಅರ್ಥ ಮಾಡಿಕೊಂಡ ಮೊದಲ ಭಾರತೀಯ ರಾಜಕಾರಣಿ. ನಿಜನಾಯಕನೊಬ್ಬ ಇದನ್ನು ನಿಯಂತ್ರಿಸುವ ಬಗ್ಗೆ ಯೋಚಿಸುತ್ತಿದ್ದ. ಆದರೆ ಮೋದಿ ಇದನ್ನು ದೇಶಾದ್ಯಂತ ಛೂ ಬಿಟ್ಟರು. ಅದಕ್ಕೆ ಬೇಕಾಗಿದ್ದ ಕುಲಾಂತರಿ ತಂತ್ರ ಜ್ಞಾನ ಸರಳ. ಹಳೆಯ ಬೇರಿನ ಮೂಲ ಸತ್ವವನ್ನು ಬಳಸುತ್ತಾ ಅದರೊಳಗೆ ಹೊಸ ನಿಯಂತ್ರಕ ಸಂದೇಶವನ್ನು ಅವ್ಯಾಹತವಾಗಿ ಸುರಿದು ಅದನ್ನು ನಂಬುವ ಸಮ್ಮೋಹಿತ ಮನಸ್ಸುಗಳನ್ನು ತಯಾರು ಮಾಡುವುದು.

ಇದರ ಭಾಗವಾಗಿಯೇ ಸಾವಿರಾರು ವಾಟ್ಸ್‌ಆ್ಯಪ್ ಗ್ರೂಪ್‌ಗಳು ಹುಟ್ಟಿಕೊಂಡಿದ್ದು. ಹಾಗೇ ಫೇಸ್‌ಬುಕ್‌ನಂತಹ ತಾಣಗಳಲ್ಲೂ ಈ ಒಮ್ಮುಖ ಪ್ರವಾಹವನ್ನು ಭರಪೂರ ಹರಿಸುವ ತಂತ್ರಜ್ಞಾನವನ್ನು ಪರಿಪೂರ್ಣಗೊಳಿಸಿದ್ದು.

ಪ್ರಾಯಶಃ ಪಕ್ಷವೊಂದು ಫೇಕ್‌ನ್ಯೂಸ್‌ಗಾಗಿಯೇ ಸಾವಿರಾರು ಮಂದಿಯ ಪಡೆ ಕಟ್ಟಿ ಫೇಕ್ ಸುದ್ದಿಗಳನ್ನು ಹರಡಿದ ಮೊದಲ ದೃಷ್ಟಾಂತ ಇದು. ಪ್ರಯೋಗದ ಟಾರ್ಗೆಟ್ passive receivers ಆಶಿಕ್ಷಿತ ಎಂದು ಈ ಹಿಂದೆ ಕರೆಯಲಾಗುತ್ತಿದ್ದ ಯುವ ಸಮೂಹ. ಸ್ಮಾರ್ಟ್ ಫೋನಿನಂತಹ ರೋಮಾಂಚಕ ಆಟಿಕೆ ಸಿಕ್ಕಿದ ಬಳಿಕ ‘‘ಓದು- ಫಾರ್ವರ್ಡ್ ಮಾಡು’’ ಮಾತ್ರ ಇದರ ಲಕ್ಷಣವಾಯಿತು. ಉದಾ: ಇಂದಿಗೂ ನಮ್ಮ ಹಳ್ಳಿಯವರಲ್ಲಿ ಮೊಬೈಲ್ ನಂಬರ್ ಕೇಳಿ ಇಂಗ್ಲಿಷ್‌ನಲ್ಲಿ ‘‘ನೈನ್ ಡಬಲ್ ಫೋರ್ ಸೆವೆನ್ ನೈನ್ ತ್ರೀ....’’ ಎಂದು ಹೇಳುವ ರೂಢಿ ಇದೆ. ಹೆಚ್ಚಿನವರಿಗೆ ಒಂದು ಎಸ್.ಎಂ.ಎಸ್. ಕಳಿಸಲೂ ಬರುವುದಿಲ್ಲ. ಈ ಸ್ಥಿತಿಯ ಪ್ಯಾಸಿವ್ ಮಂದಿಗೆ ಸಿನೆಮಾ, ಟಿವಿಯ ಬಳಿಕ ಈ ತಾಂತ್ರಿಕ ಮಾಯಾಲೋಕ ಹುಚ್ಚು ಹಿಡಿಸಿದೆ. ಒಂದು ಜೋಕು ಹೇಳುವುದು ಬಿಡಿ ಅರ್ಥ ಮಾಡಿಕೊಳ್ಳಲೂ ಏಗುತ್ತಿದ್ದ ಮಂದಿ ತಟಕ್ಕನೆ ಜೋಕುಗಳನ್ನು ಫಾರ್ವರ್ಡ್ ಮಾಡಲು ತೊಡಗಿದ್ದನ್ನು ನಾವು ನೋಡಿದ್ದೇವೆ. ಇದರೊಂದಿಗೇ ವಾಟ್ಸ್‌ಆ್ಯಪ್‌ನ ಕ್ಲೋಸ್ಡ್ ಗ್ರೂಪುಗಳ ಸಂದೇಶ ಹಂಚಿಕ ಬೇರೆ.

ಮೋದಿಯ ಡಯಾಬಾಲಿಕ್ ಯೋಜನೆ ಯಶಸ್ವಿಯಾಗಿದ್ದು ಈ ತಾಂತ್ರಿಕ ಸ್ಫೋಟದಿಂದ. ಮೋದಿಯ 3.0 ಆವೃತ್ತಿಯ ಇತರ ಅಂಶಗಳನ್ನು ಹೀಗೆ ಪಟ್ಟಿ ಮಾಡಬಹುದು.

2. ಸಂಪೂರ್ಣ ಹತೋಟಿಯಲ್ಲಿರುವ ಜನಸ್ತೋಮದ ಬುನಾದಿಯನ್ನು ಸೃಷ್ಟಿಸಿದ ಬಳಿಕ ಅಧಿಕಾರ ರಾಜಕಾರಣದ ಇನ್ನೊಂದು ಹಂತವನ್ನು ಮೋದಿ ಸಲೀಸಾಗಿ ಉದ್ಘಾಟಿಸಿದರು. ಅದು ಸಂಸ್ಥೆಗಳನ್ನು ಬಗ್ಗಿಸುವ ಕೆಲಸ. ಅದಕ್ಕೆ ಉದಾಹರಣೆಗಳು ನಮ್ಮೆದುರು ಚೆಲ್ಲಾಡುತ್ತಿವೆ.

3. ನೈತಿಕ ಮೌಲ್ಯಗಳಿಗೆ ಪೂರಂಪೂರಾ ತಿಲಾಂಜಲಿ. ಅಡ್ವಾಣಿ ಕಾಲದಲ್ಲಿ ಈ ಕುರಿತು ಒಂದು ಅಸ್ಪಷ್ಟ ನಿಲುವಿತ್ತು. ಅಧಿಕಾರಕ್ಕೆ ಬರಲು ಚುನಾವಣಾ ರಾಜಕೀಯದಲ್ಲಿ ಏನನ್ನಾದರೂ ಬಳಸುವ ಬಗ್ಗೆ ಅಡ್ವಾಣಿಗೂ ಭಿಡೆ ಇರಲಿಲ್ಲ. ಮೋದಿ ಈ ಬಗ್ಗೆ ತೀರಾ ಸ್ಪಷ್ಟವಾಗಿದ್ದಾರೆ. ಮೋದಿ ಇನ್ನೂ ಒಂದು ಹೆಜ್ಜೆ ಮುಂದೆ ಹೋದರು. ಘಾತಕ ಸುಳ್ಳುಗಳ ಸರಮಾಲೆಯನ್ನು ಹಂಚುತ್ತಾ ಹೋಗಲು ಪ್ರೋತ್ಸಾಹ ನೀಡಿದರು. ಅಧಿಕಾರಕ್ಕೆ ಬರಲು ಯಾವ ಹಾದಿಯೂ ಸರಿ ಎಂಬುದು ಚುನಾವಣಾ ಕಾಲದ ಸಂಗತಿ ಎಂಬ ನಂಬಿಕೆ ಇತ್ತು. ಆದರೆ ಮೋದಿ ಇದನ್ನು ಅಧಿಕಾರಾವಧಿಯ ನಿತ್ಯ ಪ್ರಸಾರವನ್ನಾಗಿಸಿದರು. ಹಿಟ್ಲರ್‌ನಿಗೆ ಮೋದಿಯನ್ನು ಹೋಲಿಸುವುದಿದೆ. ಆದರೆ ಒಂದು ಮೂಲಭೂತ ವ್ಯತ್ಯಾಸ ಇದೆ.

4. ಹಿಟ್ಲರ್ ಪ್ರಜೆಗಳ ಮಿದುಳನ್ನು ನಿಯಂತ್ರಿಸುತ್ತಿದ್ದಂತೆ ತಂತ್ರಜ್ಞಾನ ವಿಜ್ಞಾನಗಳಲ್ಲಿ ಅಪಾರ ಆವಿಷ್ಕಾರ ಪ್ರಯೋಗಗಳಿಗೆ ವಿಜ್ಞಾನಿಗಳ ದಂಡನ್ನೇ ನಿಯುಕ್ತಿಗೊಳಿಸಿದ. ಜರ್ಮನಿ ಸಾಧಿಸಿದ ವೈಜ್ಞಾನಿಕ ಸಾಧನೆಗಳು ಭೀಕರವಾಗಿದ್ದವು. ಅದರ ಗುರಿ ಕೇವಲ ಸಾಮ್ರಾಜ್ಯದಾಹ ಮಾತ್ರ ಆಗಿದ್ದ ಕಾರಣ ಹಿಟ್ಲರನ ನಾಶದ ಬೀಜ ಈ ಯಶಸ್ಸಿನಲ್ಲೇ ಇತ್ತು.

ನಮ್ಮ ಮೋದಿಯ ಸಂದರ್ಭ ಬೇರೆ. ಸಾಮ್ರಾಜ್ಯ ವಿಸ್ತರಣೆ ಈ ಕಾಲದಲ್ಲಿ ಅಸಾಧ್ಯ. ಹೋಗಲಿ, ಆಂತರಿಕವಾಗಿ ತಾಂತ್ರಿಕ ಆವಿಷ್ಕಾರಗಳ ಕ್ರಾಂತಿಗೆ ಮುನ್ನುಡಿ ಬರೆಯೋಣ ಅಂದರೆ ಮೂಲತಃ ನಮ್ಮಲ್ಲಿ ಪ್ಲಾಸ್ಟಿಕ್ ಸರ್ಜರಿ ಇತ್ತು ಎನ್ನುವಷ್ಟರ ಮಟ್ಟಿಗೆ ಮೋದಿ ಮತ್ತು ಮೋದಿಗ್ಯಾಂಗ್ ಇದೆ. ಮೋದಿ ಅವಲಂಬಿಸಿರುವುದು ಪಶ್ಚಿಮದಿಂದ ಆಮದಾಗಿರುವ ಸಂವಹನ ತಂತ್ರಜ್ಞಾನ ಮತ್ತು ಸಮೂಹ ಉತ್ಪಾದನೆಯ ಗ್ರಾಹಕ ತಂತ್ರಜ್ಞಾನಗಳನ್ನು. ಇವು ಮೂಲತಃ ಭಾರತದ ಸಂದರ್ಭಕ್ಕೆ ದೀರ್ಘ ಕಾಲೀನವಾಗಿ ಊನ ಮಾಡುವಂಥವು.

 5.ಸಾರ್ವಜನಿಕ ಮತ್ತು ಖಾಸಗಿ ಬದುಕಲ್ಲಿ ಯಾವುದೇ ನೈತಿಕ ಲಕ್ಷ್ಮಣ ರೇಖೆಗಳನ್ನು ಉಲ್ಲಂಘಿಸಬಹುದು ಎಂಬ ಮನಃ ಸ್ಥಿತಿ. ನಡೆ-ನುಡಿಗಳಿಗೆ ಸಂಬಂಧ ಇರಬೇಕಿಲ್ಲ ಎಂಬ ನೈತಿಕಾತೀತ ಲಾಲಸೆ ಮತ್ತು ಕ್ರೌರ್ಯದ ನಿಲುಮೆ. ಆದ್ದರಿಂದಲೇ ಒಬ್ಬ ತೇಜಸ್ವಿ ಸೂರ್ಯ ಮಂತ್ರ ಪಠಣದ ಶೋ ಕೊಡುತ್ತಾ ಗೋವಾಕ್ಕೂ ಹೋಗಬಲ್ಲ. ಇವೆರಡೂ ವೈರುಧ್ಯಗಳು ಅನ್ನಿಸದ ಸ್ಥಿತಿ ಇದು. ನಮ್ಮ ಸಂಪ್ರದಾಯಗಳ ಕಪಿ ಮುಷ್ಟಿಯಲ್ಲಿ ಒದ್ದಾಡುತ್ತಾ ಲೌಕಿಕದ ಆಸೆಗಳ ಹಪಾಹಪಿಯಲ್ಲಿದ್ದ ಮಧ್ಯಮವವರ್ಗಕ್ಕೆ ಸಲೀಸಾಗಿದ್ದು ಈ ನಿಲುಮೆ. ಸುಖ ಲೋಲುಪತೆಯ ಲೋಕದಲ್ಲೂ ನಾಲ್ಕು ದಿನ ಇದ್ದು, ಕಚ್ಚೆ ಪಂಚೆ ಶಲ್ಯ ಧರಿಸಿ ಸತ್ಯನಾರಾಯಣ ಕತೆಗೆ ಕೂರಬಹುದು ಎಂಬ ಸಾಧ್ಯತೆ ಇದು. ಒಂದರ್ಥದಲ್ಲಿ ಸಮಾಜ ಶಾಸ್ತ್ರಜ್ಞ ಎಂ.ಎನ್ ಶ್ರೀನಿವಾಸ್ ಅವರು ಹೇಳಿದ ಸಂಸ್ಕೃತೀಕರಣ ಮತ್ತು ಪಾಶ್ಚಿಮಾತ್ಯೀಕರಣಗಳನ್ನು ಹೆಡೆಮುರಿ ಕಟ್ಟಿ ಒಂದಾಗಿಸಿ ತಲೆಕೆಳಗು ಮಾಡಿದ ಪ್ರಮೇಯ ಇದು.

ಮೋದಿಯ ಗಡಣ ನೋಡಿ. ಈ ಹಿಂದೆ ಒಂದಕ್ಕೊಂದು ಸೇರಿಬರದ ಸಂಗತಿಗಳೆಲ್ಲಾ ಸಲೀಸಾಗಿ ಬಳಕೆಯ ಸಂಗತಿಗಳಾದವು. ಕಾವಿ ಧರಿಸಿದವನಿಗೆ ರಾಜಕೀಯ ಹಪಾಹಪಿ ಓಕೆ ಅನ್ನಿಸಿತು. ವ್ಯಾಪಾರ ಓಕೆ ಅನ್ನಿಸಿತು. ಜಗದ್ಗುರುಗಳೆಲ್ಲಾ ಐಫೋನ್ ಬಳಸುವ ನಿಷ್ಣಾತರಾದರು. ಲೌಕಿಕ- ಆಧ್ಯಾತ್ಮಿಕದ ಅಪೂರ್ವ ಘಟಬಂಧನ್ ಸಾಧ್ಯವಾಗಿಸಿದ್ದು ಮೋದಿ.

6. ಲೌಕಿಕವಾಗಿ ಉಳಿದ ದೇಶಗಳಂತೇ ಅಭಿವೃದ್ಧಿ; ಆಧ್ಯಾತ್ಮಿಕವಾಗಿ ನಮ್ಮ ಸಂಸ್ಕೃತಿಯ ನಿಷ್ಠ ಪಾಲನೆ ಜೋಡಿ ಗುರಿಗಳಾದವು. ಇದರ ತಮಾಷೆ ಇರುವುದು ಈ ಲೌಕಿಕದ ಬಿಡುಬೀಸು ಸುಖವನ್ನು ಪ್ರೋತ್ಸಾಹಿಸಿದ ಕ್ರಿಶ್ಚಿಯನ್ ಪಶ್ಚಿಮ ಮತ್ತು ಸಾಂಸ್ಕೃತಿಕ ಆಚರಣೆಯಲ್ಲಿ ಕಡು ಶಠತನವನ್ನು ಮುಂದಿಟ್ಟ ಇಸ್ಲಾಂ ಎರಡೂ ಈ ಹಿಂದುತ್ವದ ಸ್ಫೂರ್ತಿ ಗಂಗೋತ್ರಿಗಳು.

ಮೋದಿಯ ಕಾಲಿಗೆ ತೊಡರಿರುವ ಉರುಳು ಎಂದರೆ ಈ ದೇಶದಲ್ಲಿ ಇವು ಮಹಾ ರಗಳೆಯ ಜೋಡಿ. ಸರ್ವ ಸುಖ ತರುತ್ತೇನೆಂದರೆ ಅದಕ್ಕೆ ಬೇಕಾದ ಸಂಪನ್ಮೂಲ ಇಲ್ಲ. ಸಾಂಸ್ಕೃತಿಕವಾಗಿ ಏಕಾಕೃತಿಯ ಶಠ ಮಾದರಿ ತರುತ್ತೇನೆಂದರೆ ನಮ್ಮ ಅಸಂಖ್ಯಾತ ಜಾತಿಗಳು ಅತ್ತಿತ್ತ ಚದುರಿ ಹೆಡೆ ಎತ್ತಲು ಶುರು ಮಾಡುತ್ತವೆ.

ಈ ಅಪರೂಪದ ಜಿ.ಎಂ. ತಂತ್ರಜ್ಞಾನದ ಮೂಲಕ ಮೋದಿಗೆ ಸದ್ಯಕ್ಕೆ ಸಾಧ್ಯವಾಗಿರುವುದು ಸಂಕಷ್ಟಗಳಿಗೆ ಅನ್ಯನೊಬ್ಬ ಕಾರಣ ಎಂದು ಅಲ್ಪಸಂಖ್ಯಾತರ ಮೇಲೆ ಗೂಬೆ ಕೂರಿಸುವುದು. ಇದು ಆರೆಸ್ಸೆಸ್‌ನ ಅಜೆಂಡಾ..ಆರೆಸ್ಸೆಸ್‌ನ ಮಿದುಳು ಇದರಿಂದಾಚೆಗೆ ಓಡಿದ್ದೇ ಇಲ್ಲ. ಭಾವನಾತ್ಮಕ ಕಾದಾಟದ ಮನಃಸ್ಥಿತಿಯಲ್ಲಿ ಇಡೀ ದೇಶವನ್ನು ಇಡುವುದಷ್ಟೇ ಅದರ ಕೆಲಸ. ದೇಶದ ಅಭಿವೃದ್ಧಿಗೆ ಬೇಕಾದ ವಿಜ್ಞಾನ ತಂತ್ರಜ್ಞಾನದ ಸ್ವಾವಲಂಬನೆ, ಶಿಕ್ಷಣ ಇವೆಲ್ಲಾ ಆರೆಸ್ಸೆಸ್‌ನ ಮಸ್ತಕದೊಳಗೆ ಊರಿಯೇ ಇಲ್ಲ. ಅಲ್ಪಸಂಖ್ಯಾತರನ್ನು ಶತ್ರುವಾಗಿಸಿ ಉಳಿದವರನ್ನು ಏಕ ಗುಂಪಾಗಿ ನಿತ್ಯ ಕಲಹೋನ್ಮಾದದಲ್ಲಿ ನಿಲ್ಲಿಸುವ ತಂತ್ರ ಇದು.

7. ಆಹಾರದ ಯಜಮಾನಿಕೆ. ಯಾರು ಏನು ತಿನ್ನಬೇಕು ಎಂಬ ಬಗ್ಗೆ ವೈದಿಕ ಪ್ರಣೀತ ಆಹಾರದ ಸೂಚಿಯನ್ನು ರಾಜಕೀಯ ಆಯುಧವಾಗಿ ಬಳಸಿ ಅದರ ಹೆಸರಿನಲ್ಲಿ ಘಾತಕ ಗುಂಪುಗಳನ್ನು ಛೂ ಬಿಟ್ಟಿದ್ದು. ಇದು ದೀರ್ಘಕಾಲೀನವಾಗಿ ದೇಶದ ಗ್ರಾಮೀಣ ಅರ್ಥವ್ಯವಸ್ಥೆ/ ಉತ್ಪಾದನಾ ವ್ಯವಸ್ಥೆಯನ್ನು ಛಿದ್ರಗೊಳಿಸುತ್ತದೆ ಎಂದು ಮೋದಿಗೂ ಗೊತ್ತು. ಆದರೆ ಭೀತಿಯ ಮೂಲಕ ಯಜಮಾನಿಕೆಯನ್ನು ಪ್ರಭುತ್ವದ ಬೆಂಬಲದ ಮೂಲಕ ಸಾಮಾಜಿಕವಾಗಿ ಹೇರಿದರೆ ಅದನ್ನು ಸದಾ ರೂಢಿಗೊಳಿಸುವುದು ಸಾಧ್ಯ.

8. ಸಾರ್ವಜನಿಕ ಬದುಕಿನ ನಿರೀಕ್ಷೆ ಸಾಂವಿಧಾನಿಕ ರಿವಾಜುಗಳನ್ನು ಹೊಸಕಿ ಎಗ್ಗಿಲ್ಲದ ಅಜೆಂಡಾವನ್ನು ಮುಂದಿಡುವುದು. ಈಗ ಚುನಾವಣಾ ಸಂದರ್ಭದಲ್ಲಿ ಭಯೋತ್ಪಾದಕ ಚಟುವಟಿಕೆಯ ಆಪಾದನೆ ಇರುವ ಸಾಧ್ವಿಯೊಬ್ಬಳನ್ನು ಸಮರ್ಥಿಸಿಕೊಳ್ಳುವುದು ಒಂದಾದರೆ ಹಿಂದುತ್ವದ ಕರ್ಕಶ ಪಡೆಯನ್ನು ಚುನಾವಣಾ ವೇದಿಕೆ ಮೂಲಕ ಮುನ್ನೆಲೆಗೆ ತರುವುದು. ನಾಳೆ ಇವರು ಆಯ್ಕೆಯಾದರೆ ಸಂಸದೀಯ ಮನ್ನಣೆ ಬೇರೆ ದೊರೆಯುತ್ತದೆ. ಅಡ್ವಾಣಿ ಪ್ರತಿನಿಧಿಸಿದ್ದ ಸೂಚಿಗಳನ್ನೆಲ್ಲಾ ಮುರಿದು ಎಸೆದು ಹೊಸ ಭಯಾವಹ ತಂಡವೊಂದರ ನಾಯಕತ್ವ ಮೋದಿ ವಹಿಸಲಿದ್ದಾರೆ. ಇದರ ಸಮಸ್ಯೆ ಎಂದರೆ ದೇಶದ ಹತ್ತು ಇಲಾಖೆಗಳು ಪ್ರತಿನಿಧಿಸುವ ಸಮಸ್ಯೆಗಳ ಬಗ್ಗೆ ಆಳ ಅರಿವು ಸಾಯಲಿ, ಓನಾಮವೂ ಇಲ್ಲದ ಪ್ರತಿನಿಧಿ ಸಭಾ ಕಿಕ್ಕಿರಿಯುತ್ತದೆ. ಈ ರಕ್ಕಸ ಪಡೆಗೆ ‘ಸಬ್ ಕಾ ಸಾಥ್’ ಬಿಡಿ ವಿಕಾಸದ ಅಕ್ಷರ ಜ್ಞಾನವೂ ಇಲ್ಲದೇ ದೇಶ ಕುಸಿಯುತ್ತದೆ. ಆಗ ಮತ್ತೆ ಉಗ್ರ ಧ್ರುವೀಕರಣದ ಭಾಷೆಯಲ್ಲೇ ಜನರನ್ನು ಉದ್ರೇಕಿಸುವ ಛೂಬಿಡುವ ಕೆಲಸ ಮುಂದುವರಿಯುತ್ತದೆ. ತಾಲಿಬಾನೀಕರಣ ಆಗುವುದು ಹೀಗೆ. ಆಡಳಿತಕ್ಕೆ ಬಂದ ಮೇಲೆ ಆಳುವ ದಾರಿ ಮಬ್ಬಾದಾಗ, ಮತ್ತೆ ರಣ ಹಿಂಸೆಯ ಮೂಲಕ ಹಿಡಿತ ಹೆಚ್ಚಿಸುತ್ತಾ ಹೋಗುವು ಕ್ರಮ ಇದು. ಹಲವಾರು ದೇಶಗಳು ಚಿಂದಿಯಾದದ್ದು ಇಂತಹ ಪ್ರಕ್ರಿಯೆ ಮೂಲಕ. ಆದರೆ ನಿತ್ಯ ಗಲಾಟೆ ಮಾಡಿ ಬೆಂಕಿ ಹಚ್ಚುವವನೂ ಉಣ್ಣಬೇಕಲ್ಲ, ದುಡಿಯಬೇಕಲ್ಲ, ಕಾಯಿಲೆ ಬಂದರೆ ಆಸ್ಪತ್ರೆ ಬೇಕಲ್ಲ. ನಿರ್ವಹಣೆಯಲ್ಲಿ, ಕಲ್ಯಾಣ ಕಾರ್ಯಕ್ರಮಗಳ ಪರಿಕಲ್ಪನೆಯಲ್ಲಿ ಪೂರಾ ಕುಂದಿದ ಮಿದುಳಿರುವ ಈ ಮೋದಿ ಪಡೆಗೆ ದಿಕ್ಕೆಡಲು ಒಂದೆರಡು ಸಂಗತಿಗಳು ಸಾಕು. ತೈಲ ಬೆಲೆ ಏರಿಕೆಯಾದರೂ ಈಗ ಹತ್ತು ಕಡೆ ತೂತು ಬಿದ್ದಿರುವ ಆರ್ಥಿಕತೆ ರಣಗಾಯವಾಗಿ ಮಾರ್ಪಡುತ್ತದೆ. ಆಂತರಿಕವಾಗಿ ಒಂದು ಬರ ಈಗಾಗಲೇ ಬಸವಳಿದಿರುವ ಗ್ರಾಮೀಣ ಭಾರತವನ್ನು ದಿವಾಳಿಯಂಚಿಗೆ ತಂದು ನಿಲ್ಲಿಸುತ್ತದೆ. ಸದ್ಯ ಮೋದಿಯ ಪರ ನಡೆದಾಡುವ ಯಂತ್ರಗಳಂತಿರುವ ಭಕ್ತಪಡೆಗೆ ವಾಸ್ತವದ ಅರಿವಾಗಲು ಇಷ್ಟು ಸಾಕು. ಆಗಲೂ ಉಳಿದುಕೊಳ್ಳುವ ಒಂದಷ್ಟು ಪಡೆ ಇರುತ್ತಾರೆ. ಉದಾ: ಅದು ಮೂಲತಃ ಸಾಂಸ್ಕೃತಿಕ ಯಜಮಾನಿಕೆಯ ವೈದಿಕ ಪಡೆ. ಮತ್ತು ಇದರ ಆಚರಣೆಗಳ ಮೂಲಕವೇ ಅವರ ಮೆಚ್ಚುಗೆ ಪಡೆಯುವ ಕಾತುರದಲ್ಲಿರುವ ಒಂದಷ್ಟು ನವೋದಿತ ಶೂದ್ರಪಡೆ. ಮೂಲತಃ ಎಲ್ಲಾ ಜಿ.ಎಂ. ತಳಿಗಳ ಹಾಗೆ ಧಾಂಧೂಂ ಪ್ರಚಾರದೊಂದಿಗೆ ಬರುತ್ತವೆ. ಅವು ಮಾಡುವ ಮೊದಲ ಕೆಲಸ ಈ ಹಿಂದಿನ ತಳಿಗಳೆಲ್ಲಾ ಅಪ್ರಯೋಜಕ. ಅವುಗಳಿಂದಲೇ ಗಂಡಾಂತರ ಬಂದಿದ್ದು ಎಂದು ನಂಬಿಸಿ ಅವುಗಳನ್ನು ಮೂಲೆಗೆ ತಳ್ಳುವುದು. ಆ ಸ್ಥಾನವನ್ನು ತಾನು ಆಕ್ರಮಿಸಿಕೊಳ್ಳುವುದು.

ಆದರೆ ಕ್ರಮೇಣ ಇವು ಪೊಳ್ಳು ಭರವಸೆ ಎಂಬ ಪುರಾವೆ ಕಣ್ಣೆದುರೇ ಕಂಡಾಗ ಜನ ತಿರಸ್ಕರಿಸುತ್ತಾರೆ. ಆದರೆ ಇಷ್ಟರಲ್ಲೇ ಆದ ಆತ್ಯಂತಿಕ ನಾಶ, ನಷ್ಟ ಭರಿಸಲು ಮಾತ್ರ ಹರಸಾಹಸ ಮಾಡಬೇಕಾಗುತ್ತೆ. ಸಂಕಷ್ಟಗಳ ಪಂಡೋರಾ ಪೆಟ್ಟಿಗೆಯನ್ನು ಪ್ರಜ್ಞಾ ಪೂರ್ವಕ ತೆರೆದ ಮೋದಿ ಆಗ ಇರುವುದಿಲ್ಲ. ಆತನ ಭಕ್ತ ಪಟಲಾಂ ಕೂಡಾ ಮಾಯವಾಗಿರುತ್ತದೆ.

ನಾವು ತಯಾರಾಗಬೇಕಾಗಿರುವುದು ಈ ಮತ್ತೆ ಕಟ್ಟುವ ಕೆಲಸಕ್ಕೆ.

Writer - ಸುರೇಶ ಕಂಜರ್ಪಣೆ

contributor

Editor - ಸುರೇಶ ಕಂಜರ್ಪಣೆ

contributor

Similar News