ಪ್ರಧಾನಿಯಿಂದ ನೀತಿ ಸಂಹಿತೆ ಉಲ್ಲಂಘನೆ

Update: 2019-04-23 18:31 GMT

ದೇಶದಲ್ಲಿ ಚುನಾವಣಾ ಪ್ರಚಾರ ಬಿರುಸಾಗಿ ಸಾಗಿದೆ. ಈ ಹಿಂದೆಂದೂ ಬಳಕೆಯಾಗದ ಭಾಷೆ, ಪ್ರಸ್ತಾಪವಾಗದ ಸೂಕ್ಷ್ಮ ವಿಷಯಗಳು ಈ ಚುನಾವಣೆಯಲ್ಲಿ ಬಳಕೆಯಾಗುತ್ತಿವೆ. ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರತಿನಿತ್ಯವೂ ನಡೆದಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಬಾಯಿಗೆ ಬಂದಂತೆ ಮಾತಾಡುತ್ತ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಗುರುವಿನ ದಾರಿಯಲ್ಲೇ ಸಾಗಿದ ಅವರ ಶಿಷ್ಯವರ್ಗ ಅಂದರೆ ಬಿಜೆಪಿಯ ಇತರ ನಾಯಕರು ಸಿಕ್ಕ ಸಿಕ್ಕಲ್ಲಿ ನಾಲಿಗೆ ಹರಿ ಬಿಡುತ್ತಿದ್ದಾರೆ. ಚುನಾವಣಾ ಆಯೋಗ ಕಾಟಾಚಾರಕ್ಕೆ ಕೆಲವರಿಗೆ ನೋಟಿಸ್ ಜಾರಿ ಮಾಡಿದಂತೆ ಮಾಡಿ ತನ್ನ ಪಾಡಿಗೆ ತಾನಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಂತೂ ಅತ್ಯಂತ ಪ್ರಚೋದನಕಾರಿಯಾಗಿ ಮಾತನಾಡುತ್ತಿದ್ದಾರೆ. ಪ್ರತಿನಿತ್ಯವೂ ಅವರು ತಮ್ಮ ಭಾಷಣದಲ್ಲಿ ಸರಕಾರದ ಸಾಧನೆಗಳ ಬಗ್ಗೆ ಮಾತಾಡದೆ ಕೋಮು ಪ್ರಚೋದಕ ಮಾತುಗಳನ್ನು ಆಡುತ್ತಿದ್ದಾರೆ. ದೇಶದ ಸೇನಾಪಡೆಯ ಸಾಹಸಗಳನ್ನು ತನ್ನದೇ ಸ್ವಂತದ ಸಾಹಸಗಳೆಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಪಕ್ಷದ ಪ್ರಣಾಳಿಕೆ, ಕಾರ್ಯಕ್ರಮಗಳ ನಿವೇದನೆಗಿಂತ ಈ ದೇಶಕ್ಕೆ ತನ್ನಂತಹ ಬಲಿಷ್ಠ ಪ್ರಧಾನಿಯ ಅಗತ್ಯವಿದೆ ಎಂದು ಸ್ವತಃ ಅವರೇ ಹೇಳಿಕೊಂಡು ಓಡಾಡುತ್ತಿದ್ದಾರೆ. ಪದೇ ಪದೇ ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುವ ಮಾತನ್ನಾಡುತ್ತಿದ್ದಾರೆ.

ಈ ಮೊದಲು ಪ್ರಧಾನಿ ಮತ್ತು ಅವರ ಪಕ್ಷದ ನಾಯಕರು ಬಾಲಕೋಟ್ ನಂತರದ ಸನ್ನಿವೇಶವನ್ನು ಚುನಾವಣಾ ಉದ್ದೇಶಕ್ಕೆ ಬಳಸಿಕೊಳ್ಳಲು ಯತ್ನಿಸಿದರು.ಮಿಶನ್ ಶಕ್ತಿ ಯಶಸ್ಸನ್ನು ಪ್ರಧಾನಮಂತ್ರಿ ಪ್ರಕಟಿಸಿರುವುದು ಕೂಡ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಪ್ರಧಾನಿ ತನ್ನ ಪ್ರಚಾರ ಭಾಷಣದಲ್ಲಿ ತಾನು ನೆಲ, ಮತ್ತು ವಾಯುವಿನಲ್ಲಿ ಮಾತ್ರವಲ್ಲ ಅಂತರಿಕ್ಷದಲ್ಲೂ ಒಬ್ಬ ಚೌಕಿದಾರನೇ ಎಂದು ಹೇಳಿಕೊಂಡರು ಇದರ ಅರ್ಥವೇನು? ಚುನಾವಣಾ ಆಯೋಗ ಯಾಕೆ ಮೌನವಾಗಿದೆ

ಪ್ರಧಾನ ಮಂತ್ರಿ ರವಿವಾರ ರಾಜಸ್ಥಾನದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡುತ್ತ ‘‘ಭಾರತ ತನ್ನ ಪರಮಾಣು ಅಸ್ತ್ರಗಳನ್ನು ದೀಪಾವಳಿಯಲ್ಲಿ ಪಟಾಕಿಯಂತೆ ಹಾರಿಸಲು ಇಟ್ಟುಕೊಂಡಿಲ್ಲ’’ ಎಂದು ಹೇಳಿದರು. ಪಾಕಿಸ್ತಾನದಿಂದ ಪರಮಾಣು ಬೆದರಿಕೆ ಇದೆ ಎಂದು ಹೇಳುತ್ತ ಈ ಮಾತನ್ನು ಅವರು ಹೇಳಿದರು, ರಕ್ಷಣೆ, ಪರಮಾಣು ಅಸ್ತ್ರದಂತಹ ಸೂಕ್ಷ್ಮ ವಿಷಯಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವುದು ಪ್ರಧಾನಿ ಸ್ಥಾನದಲ್ಲಿರುವ ಅವರಿಗೆ ಶೋಭೆ ತರುವುದಿಲ್ಲ. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು.

ಭಾರತದ ಪರಮಾಣು ಕಾರ್ಯಕ್ರಮಕ್ಕೆ ಭವ್ಯ ಇತಿಹಾಸವಿದೆ. ದೇಶದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂ ಕಾಲದಿಂದಲೂ ಇದನ್ನು ಅಭಿವೃದ್ಧಿ ಪಡಿಸಿಕೊಂಡು ಬರಲಾಗುತ್ತಿದೆ. ಆನಂತರ ಬಂದ ಎಲ್ಲಾ ಪ್ರಧಾನ ಮಂತ್ರಿಗಳು ಇದಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಯಾರೂ ಮೋದಿಯಂತೆ ಚುನಾವಣಾ ರಾಜಕಾರಣಕ್ಕೆ ಇದನ್ನು ಬಳಸಿಕೊಂಡಿಲ್ಲ. ಒಂದು ಪಕ್ಷದ ಚುನಾವಣಾ ಪ್ರಚಾರಕ್ಕೆ ದೇಶದ ಪರಮಾಣು ಕಾರ್ಯಕ್ರಮದ ಸಾಧನೆಯನ್ನು ಬಳಸಿಕೊಳ್ಳುವುದು ಕೀಳುಮಟ್ಟದ ರಾಜಕಾರಣವಾಗುತ್ತದೆ.

ಪ್ರಧಾನ ಮಂತ್ರಿ ಈ ರೀತಿ ಮಾತಾಡಿದರೆ ಅವರ ಪಕ್ಷದ ಅಧ್ಯಕ್ಷ ಅಮಿತ್ ಶಾ ಭಾರತದ ವಾಯುಪಡೆಯನ್ನು ‘‘ಮೋದಿ ವಾಯುಪಡೆ’’ ಎಂದು ಹೇಳಿದ್ದಾರೆ. ಈ ಮುಂಚೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಭಾರತದ ಸೇನೆಯನ್ನು ‘ಮೋದಿ ಸೇನೆ’ ಎಂದು ಕರೆದಿದ್ದರು. ಆಗ ಚುನಾವಣಾ ಆಯೋಗ ಅವರಿಗೆ ನೋಟಿಸ್ ನೀಡಿತ್ತು. ಇಂತಹ ಪ್ರಚೋದನಕಾರಿ ಮಾತುಗಳು ಬಿಜೆಪಿ ನಾಯಕರಿಂದಲೇ ಹೆಚ್ಚಾಗಿ ಕೇಳಿಬರುತ್ತಿವೆ. ಸಾಧ್ವಿ ಪ್ರಜ್ಞಾ ಸಿಂಗ್, ಹುತಾತ್ಮ ಹೇಮಂತ ಕರ್ಕರೆ ಬಗ್ಗೆ ಮಾತನಾಡುತ್ತ ‘‘ನಾನು ಶಾಪ ಕೊಟ್ಟೆ, ಆತ ಸತ್ತ’’ ಎಂದು ಹೇಳಿದ್ದಾರೆ. ಮಹಾರಾಷ್ಟ್ರದ ಬಿಜೆಪಿ ಸಚಿವೆ ಪಂಕಜಾ ಮುಂಢೆ ಸೋಮವಾರ ಮಾತಾಡುತ್ತಾ, ‘‘ರಾಹುಲ್ ಗಾಂಧಿಗೆ ಬಾಂಬ್ ಕಟ್ಟಿ ದೇಶದಿಂದ ಹೊರಗೆ ಎಸೆಯಬೇಕು’’ ಎಂದು ಹೇಳಿದರು. ಬಿಜೆಪಿಯ ಇನ್ನೊಬ್ಬ ಸಂಸದ ಸಾಕ್ಷಿ ಮಹಾರಾಜ ಇನ್ನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನಗೆ ಮತ ಹಾಕದವರಿಗೆ ಶಾಪ ಕೊಡುವುದಾಗಿ ಹೇಳಿದರು.

ಚುನಾವಣಾ ಆಯೋಗ ಈಗ ಸುಮ್ಮನಿರಬಾರದು. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಪ್ರಚೋದನಕಾರಿ ಮಾತುಗಳನ್ನಾಡುವ ಎಲ್ಲರ ಬಾಯಿಗೂ ಬೀಗ ಹಾಕಬೇಕು. ಈ ಬಗ್ಗೆ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಮತ್ತು ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಆದರೂ ಆಯೋಗ ಮೌನವಾಗಿದೆ. ಇದು ಸರಿಯಲ್ಲ. ಪ್ರಧಾನಿ ಇರಲಿ ಯಾರೇ ಇರಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದವರ ಮೇಲೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿ.

ಎಪ್ರಿಲ್ 9ರಂದು ಮಹಾರಾಷ್ಟ್ರದ ಲಾತೂರ್‌ನಲ್ಲಿ ಪ್ರಧಾನಮಂತ್ರಿ ಮೊದಲ ಬಾರಿ ಮತದಾನ ಮಾಡುವವರನ್ನು ಉದ್ದೇಶಿಸಿ ಮಾತನಾಡುತ್ತ ‘‘ನಿಮ್ಮ ಮತಗಳನ್ನು ಬಾಲ ಕೋಟ್‌ನಲ್ಲಿ ವಾಯುದಾಳಿ ನಡೆಸಿದವರಿಗೆ ಸಮರ್ಪಿಸಬೇಕು’’ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಪಕ್ಷಗಳು ದೂರು ನೀಡಿದರೂ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿಲ್ಲ. ಆಗ ಕ್ರಮ ಕೈಗೊಂಡಿದ್ದರೆ ಉಳಿದವರು ಹದ್ದು ಮೀರಿ ಮಾತಾಡುತ್ತಿರಲಿಲ್ಲ.

ಈಗಂತೂ ಬಿಜೆಪಿ ನಾಯಕರಿಂದ ನಿತ್ಯವೂ ನೀತಿ ಸಂಹಿತೆ ಉಲ್ಲಂಘನೆ ನಡೆದಿದೆ.ಅಸ್ಸಾಮ್‌ನ ಬಿಜೆಪಿ ಸಚಿವನೊಬ್ಬ ‘‘ಧೋತಿಗಳು ಹಾಗೂ ಲುಂಗಿಗಳನ್ನು ಧರಿಸಿರುವವರ ಅಗತ್ಯವಿಲ್ಲ’’ ಎಂದು ಹೇಳಿದ್ದಾರೆ. ಈ ಮೂಲಕ ಆತ ರಾಜ್ಯದ ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರ ಬಗ್ಗೆ ತಮ್ಮ ಪಕ್ಷದ ತಿರಸ್ಕಾರದ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲೂ ಬಿಜೆಪಿ ನಾಯಕರ ಬಾಯಿ ಬೊಂಬಾಯಿ ಆಗಿದೆ. ಪಕ್ಷದ ಹಿರಿಯ ನಾಯಕ ಈಶ್ವರಪ್ಪ‘‘ಮುಸಲ್ಮಾನರು ಮತ್ತು ಕ್ರೈಸ್ತ ರಿಗೆ ರಾಷ್ಟ್ರ ಭಕ್ತಿ ಇಲ್ಲ, ಆದ್ದರಿಂದ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡುವುದಿಲ್ಲ’’ ಎಂದು ಬಹಿರಂಗವಾಗಿ ಹೇಳಿದರು. ತನಗೆ ಮುಸಲ್ಮಾನರ ಮತ್ತು ದಲಿತರ ಮತಗಳು ಬೇಡ ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹೇಳಿದ್ದಾರೆ. ಇಂತಹವರನ್ನು ಚುನಾವಣಾ ಆಯೋಗ ಸುಮ್ಮನೆ ಬಿಡಬಾರದು.

ಲೋಕಸಭಾ ಚುನಾವಣೆ ನ್ಯಾಯಸಮ್ಮತವಾಗಿ ಮುಕ್ತವಾಗಿ ನಡೆಯಬೇಕೆಂದರೆ ಚುನಾವಣಾ ಆಯೋಗ ಯಾವುದೇ ಒತ್ತಡಕ್ಕೆ ಒಳಗಾಗದೆ ಕಾರ್ಯ ನಿರ್ವಹಿಸಬೇಕು. ಕೋಮು ಸಾಮರಸ್ಯವನ್ನು ಕೆಡಿಸುವಂತಹ ಪ್ರಚೋದನಕಾರಿ ಭಾಷಣ ಮಾಡುವವರು ಯಾರೇ ಆಗಿರಲಿ ಅಂತಹವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News