"ಬಡತನ ನನ್ನೊಳಗೆ ಓದಿನ ಕಿಚ್ಚನ್ನು ಹೊತ್ತಿಸಿತ್ತು"

Update: 2019-04-24 08:51 GMT
ಹೆತ್ತವರೊಂದಿಗೆ ಕುಸುಮಾ

ಕೊಟ್ಟೂರು (ಬಳ್ಳಾರಿ), ಎ.23: ಪಂಕ್ಚರ್ ಶಾಪ್ ನಡೆಸುತ್ತಿರುವ ಪಟ್ಟಣದ ದೇವೇಂದ್ರಪ್ಪ-ಜಯಮ್ಮ ದಂಪತಿಯ ಐವರು ಪುತ್ರಿಯರಲ್ಲಿ ಒಬ್ಬರಾದ ಕುಸುಮಾ ಉಜ್ಜಿನಿ, ಅಂಗಡಿಯಲ್ಲಿ ತಂದೆಯೊಂದಿಗೆ ಕೆಲಸ ಮಾಡುತ್ತಲೇ ಓದಿದವರು. ಇತ್ತೀಚೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಲಾ ವಿಭಾಗದಲ್ಲಿ 594(99 ಶೇ.) ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ಕುಸುಮಾ ಕಾಲೇಜು ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಪ್ರಥಮ ಸ್ಥಾನ ಗಳಿಸಿದ ಸಂತಸವನ್ನು ಹಂಚಿಕೊಂಡಿದ್ದಾರೆ.

ನಿಮ್ಮ ಮುಂದಿನ ಗುರಿ ಏನು?

ಕುಸುಮಾ:   ಪದವಿ ಮತ್ತು ಉನ್ನತ ಶಿಕ್ಷಣದಲ್ಲೂ ಕೂಡ ಇದೇ ರೀತಿಯಾಗಿ ಉತ್ತಮ ಅಂಕಗಳನ್ನು ಗಳಿಸಬೇಕು. ಐಎಎಸ್ ಅಥವಾ ಕೆಎಎಸ್ ಪಾಸ್ ಮಾಡಿಕೊಳ್ಳುವ ಮೂಲಕ ಉತ್ತಮ ಆಡಳಿತ ಅಧಿಕಾರಿಯಾಗಬೇಕು ಎಂಬ ಕನಸಿದೆ. ಯಾಕೆಂದರೆ, ದಿನ ಬೆಳಗಾದರೆ, ಹೆಣ್ಣು ಮಕ್ಕಳು ಮತ್ತು ದಲಿತರು ಹೆಚ್ಚು ತುಳಿತಕ್ಕೆ ಒಳಗಾಗುತ್ತಿದ್ದಾರೆ. ಎಲ್ಲೆಡೆಯೂ ಭ್ರಷ್ಟಾಚಾರ ನಡೆಯುತ್ತಿದೆ. ನಮ್ಮಂತಹ ಬಡವರಿಗೆ ಮೂಲಭೂತ ಸೌಕರ್ಯ ಒದಗಿಸಲು ಹಿಂದೇಟು ಹಾಕಲಾಗುತ್ತಿದೆ. ಲಿಂಗ ಅಸಮಾನತೆ ಮತ್ತು ಜಾತಿ ತಾರತಮ್ಯಗಳನ್ನು ಕಾನೂನಾತ್ಮಕವಾಗಿ ತಡೆಯಲು ಆಡಳಿತಾಧಿಕಾರಿ ಆಗಬೇಕೆಂದಿದ್ದೇನೆ.

ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದೀರಿ ಏನನಿಸುತ್ತಿದೆ? ಈ ಬಗ್ಗೆ ನಿರೀಕ್ಷೆ ಮಾಡಿದ್ರಾ?

ಕುಸುಮಾ: ತುಂಬಾ ಖುಷಿ ಆಗಿದೆ. ನನ್ನ ಸಾಧನೆಗೆ ಊರು ಮತ್ತು ಕಾಲೇಜಿನಲ್ಲಿ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ. ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದೆ. ಯಾಕೆಂದರೆ, ನಾನು ನಡೆಸಿದ ಪರೀಕ್ಷಾ ಸಿದ್ಧತೆ ಮತ್ತು ಬರೆದ ಉತ್ತರಗಳು ಅಂತಹ ವಿಶ್ವಾಸ ಮೂಡಿಸಿತ್ತು.

594 ಅಂಕ ಗಳಿಸಲು ಹೇಗೆ ಸಾಧ್ಯ ಆಯ್ತು?

ಕುಸುಮಾ: ಸಾಧನೆ ಎನ್ನುವುದು ನಿರಂತರ ಪರಿಶ್ರಮವನ್ನು ಬಯಸುತ್ತದೆ. ಹಾಗಾಗಿ, ಶಿಕ್ಷಕರು ಯಾವುದೇ ಒಂದು ವಿಷಯದ ಬಗ್ಗೆ ಪಾಠ ಮಾಡುವಾಗ ಗಮನವಿಟ್ಟು ಕೇಳಿಸಿಕೊಳ್ಳುವುದು ಮತ್ತು ಮನೆಗೆ ಬಂದು ಅಷ್ಟೇ ಶ್ರದ್ಧೆಯಿಂದ ಓದುವುದು ಅಭ್ಯಾಸ ಮಾಡಿಕೊಂಡಿದ್ದೆ. ಇದು ಉತ್ತಮ ಅಂಕ ಗಳಿಸಲು ಸಹಾಯಕವಾದವು. ಶ್ರದ್ಧೆಯಿಂದ ಓದಿದರೆ ಎಲ್ಲ ವಿದ್ಯಾರ್ಥಿಗಳಿಗೂ ಇದು ಸಾಧ್ಯ.

ದಿನದ ಎಷ್ಟು ಗಂಟೆ ಓದಲು ಮೀಸಲಿಡುತ್ತಿದ್ದೀರಿ?

ಕುಸುಮಾ: ದಿನಕ್ಕೆ ಇಷ್ಟೇ ಗಂಟೆ ಎಂದು ನಿಗದಿಪಡಿಸಿ ಓದುತ್ತಿರಲಿಲ್ಲ. ಆದರೆ, ಓದಬೇಕೆನಿಸಿದರೆ ಇಡೀ ದಿನ ಅಥವಾ ರಾತ್ರಿ ಕುಳಿತು ಓದಿಬಿಡುತ್ತಿದ್ದೆ. ಅಲ್ಲದೆ, ಮನೆಯಲ್ಲಿನ ತೀವ್ರ ಬಡತನ ನನ್ನೊಳಗೆ ಒಂದು ರೀತಿಯ ಓದುವ ಕಿಚ್ಚನ್ನು ಹೊತ್ತಿಸಿತ್ತು. ಹೀಗಾಗಿ ಓದಿನ ಹೊರತು ಬೇರೆ ವಿಷಯಗಳ ಕಡೆಗೆ ಆಕರ್ಷಣೆಗೊಂಡದ್ದು ಮತ್ತು ಯೋಚಿಸಿದ್ದು ತುಂಬ ಕಡಿಮೆ.

ಓದಿನ ಜೊತೆಗೆ ನಿಮ್ಮ ತಂದೆಯ ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನೀವು, ಹೇಗೆ ಸಮಯವನ್ನು ಹೊಂದಿಸಿಕೊಳ್ಳುತ್ತಿದ್ರಿ?

ಕುಸುಮಾ: ಕಾಲೇಜಿನ ಬಿಡುವಿನ   ೇಳೆಯಲ್ಲೆಲ್ಲ ತಂದೆಯ ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡುವ ಮೂಲಕ ಅವರಿಗೆ ನೆರವಾಗುತ್ತಿದ್ದೆ. ಈ ಮುಂಚೆ ಡ್ರೈವರ್ ಆಗಿದ್ದ ನಮ್ಮ ತಂದೆ, ಒಂದು ಅಪಘಾತದಲ್ಲಿ ಕಾಲಿಗೆ ತೀವ್ರ ಗಾಯಗಳಾದವು. ಆಮೇಲೆ ಅವರು ಈ ಟಯರ್ ಪಂಕ್ಚರ್ ಅಂಗಡಿ ಆರಂಭಿಸಿದರು. ಹಾಗಾಗಿ, ಚಿಕ್ಕಂದಿನಿಂದಲೇ ತಂದೆಯ ಜೊತೆಗೆ ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡಲಾರಂಭಿಸಿದ್ದೇನೆ. ತಂದೆಯೊಡನೆ ಕೆಲಸ ಮಾಡುತ್ತಿರುವಾಗ ಓದಿನ ಕಡೆ ಹೆಚ್ಚು ಗಮನ ಕೊಡುವಂತೆ ತಂದೆಯು ಆಗಾಗ ಸಲಹೆ ನೀಡುತ್ತಿದ್ದರು. ತಂದೆಯ ಸಲಹೆಯು ಓದಲು ಮತ್ತಷ್ಟು ಪ್ರೇರಣೆ ನೀಡಿತ್ತು.

ಕಲಿಕೆಯಲ್ಲಿ ಶಿಕ್ಷಕರ ಪಾತ್ರ ಹೇಗಿತ್ತು?

ಕುಸುಮಾ: ನಮ್ಮ ಕಾಲೇಜಿನ ಎಲ್ಲ ವಿಷಯದ ಶಿಕ್ಷಕರು ಕೂಡ ವಿದ್ಯಾರ್ಥಿಗಳಿಗೆ ತುಂಬ ಪ್ರೋತ್ಸಾಹ ನೀಡುತ್ತಿದ್ದರು.

ಪೋಷಕರ ಬೆಂಬಲ ಹೇಗಿತ್ತು?

ಕುಸುಮಾ: ನಮ್ಮ ತಂದೆ, ತಾಯಿ ಮತ್ತು ಮನೆಯವರೆಲ್ಲ ಯಾವಾಗಲೂ ನನ್ನ ಓದಿನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದರು ಮತ್ತು ಮನೆಯಲ್ಲಿ ಓದಿಗೆ ಪೂರಕವಾದ ವಾತಾವರಣವಿತ್ತು. ನನ್ನ ಸಾಧನೆಯ ಎಲ್ಲ ಶ್ರೇಯಸ್ಸು ನಮ್ಮ ಪೋಷಕರು ಮತ್ತು ಗುರುಗಳಿಗೆ ಸಲ್ಲಬೇಕು.

ಕಲಾವಿಭಾಗದ ಬಗ್ಗೆ ಒಂದು ರೀತಿಯ ತಾತ್ಸಾರ ಮನೋಭಾವವಿದೆ? ಈ ಬಗ್ಗೆ ಏನಂತೀರಿ?

ಕುಸುಮಾ: ಹೌದು. ಈ ತರದ ಮನೋಭಾವನೆ ಎಲ್ಲ ಕಡೆಯೂ ಇದೆ. ನನಗೂ ಮೊದಲು ವಿಜ್ಞಾನ ವಿಭಾಗ ಸೇರಬೇಕೆಂದಿತ್ತು. ಆದರೆ, ಆರ್ಥಿಕ ಸಮಸ್ಯೆಯಿಂದಾಗಿ ಅನಿವಾರ್ಯವಾಗಿ ಕಲಾ ವಿಭಾಗ ಆಯ್ಕೆ ಮಾಡಿಕೊಂಡೆ. ಆದರೆ, ಆಯ್ಕೆ ಮಾಡಿಕೊಂಡ ವಿಷಯಗಳ ಬಗ್ಗೆ ತಾತ್ಸಾರ ಮನೋಭಾವ ಬೆಳೆಸಿಕೊಂಡಿರದ ಕಾರಣ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದೆ. ಎಲ್ಲ ವಿಷಯಗಳಿಗೂ ಅದರದೇ ಆದ ಮಹತ್ವವಿದೆ. ಹಲವರು ಕಲಾ ವಿಭಾಗದಲ್ಲಿ ರ್ಯಾಂಕ್ ಗಳಿಸುವುದು ಸುಲಭ ಎನ್ನುವುದಿದೆ. ಆದರೆ, ಹಾಗೆನಿಲ್ಲ, ಓದದಿದ್ದರೆ, ಕನ್ನಡ ವಿಷಯದಲ್ಲೂ ಅನುತ್ತೀರ್ಣರಾಗುತ್ತೇವೆ.

ಕಿರಿಯ ವಿದ್ಯಾರ್ಥಿಗಳಿಗೆ ನಿಮ್ಮ ಸಲಹೆ ಏನು?

ಕುಸುಮಾ: ಸಾಧನೆ ಎನ್ನುವುದು ಒಂದು ದಿನಕ್ಕೆ ಸಾಧ್ಯವಾಗುವಂತಹದ್ದಲ್ಲ, ಅದಕ್ಕೆ ಸತತ ಪರಿಶ್ರಮ ಪಡಬೇಕಾಗುತ್ತದೆ. ಹೀಗೆ ಪ್ರಯತ್ನಿಸಿದಲ್ಲಿ ಯಾರು ಬೇಕಾದರೂ ರ್ಯಾಂಕ್ ಗಳಿಸಬಹುದು. ಅದೃಷ್ಟಕ್ಕಿಂತ ನಿಮ್ಮ ಪರಿಶ್ರಮದ ಮೇಲೆ ನಂಬಿಕೆ ಇಡಿ.

  ಪಂಕ್ಚರ್ ಅಂಗಡಿಯಲ್ಲಿ ಕಾರ್ಯನಿರತ ಕುಸುಮಾ

ಅಡುಗೆ, ಮನೆಗೆಲಸ ಎಲ್ಲ ಮಾಡಿಕೊಂಡು ಓದುತ್ತಿದ್ದ ಮಗಳು ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ್ದು ತುಂಬ ಖುಷಿ ತಂದಿದೆ. ನಾವು ಕೂಲಿ ಮಾಡಿ ನಾಲ್ವರು ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಿದ್ದು ಈಗ ಸಾರ್ಥಕ ಅನಿಸುತ್ತಿದೆ.

- ಜಯಮ್ಮ, ಕುಸುಮಾ ತಾಯಿ

Writer - ಸಂದರ್ಶನ: ಕಳಕೇಶ್ ಗೊರವರ

contributor

Editor - ಸಂದರ್ಶನ: ಕಳಕೇಶ್ ಗೊರವರ

contributor

Similar News