ಸಮಾವೇಶದಲ್ಲಿ ಬಿಜೆಪಿ ಜಾಹೀರಾತಿನ ಬಂಡವಾಳ ಬಯಲು ಮಾಡಿದ ರಾಜ್ ಠಾಕ್ರೆ!

Update: 2019-04-24 14:04 GMT

ಮುಂಬೈ, ಎ.24: ಮಹಾರಾಷ್ಟ್ರ ನವನಿರ್ಮಾಣ್ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಐಟಿ ಸೆಲ್ ನ ‘ಸುಳ್ಳುಗಳನ್ನು’ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಮಂಗಳವಾರ ಮುಂಬೈಯಲ್ಲಿ ತಮ್ಮ ಮೊದಲ ರ್ಯಾಲಿ ನಡೆಸಿದ ರಾಜ್ ಠಾಕ್ರೆ, ಮೋದಿ ಸರಕಾರದ ಬಡತನ ನಿರ್ಮೂಲನೆ ಕಾರ್ಯಕ್ರಮದ ಯಶಸ್ಸನ್ನು ಸಾಬೀತುಪಡಿಸಲು ಕುಟುಂಬವೊಂದರ ಫೋಟೋವನ್ನು ಬಿಜೆಪಿ ಜಾಹೀರಾತಿನಲ್ಲಿ ಬಳಸಲಾಗಿದ್ದು, ಅದರ ಹಿಂದಿನ ವಾಸ್ತವಾಂಶವನ್ನು ಬಹಿರಂಗಪಡಿಸಿದರು.

ನೆರೆದಿದ್ದ ಅಪಾರ ಜನಸ್ತೋಮವನ್ನು ಮರಾಠಿ ಭಾಷೆಯಲ್ಲಿ ಉದ್ದೇಶಿಸಿ ಮಾತನಾಡಿದ ಠಾಕ್ರೆ ಈ ಸಂದರ್ಭ ಕುಟುಂಬವೊಂದನ್ನು ವೇದಿಕೆಗೆ ಆಹ್ವಾನಿಸಿದರು. ಜತೆಗೆ ನೆರೆದಿದ್ದ ಸಭಿಕರಿಗೆ ವೇದಿಕೆಯಲ್ಲಿದ್ದ ದೊಡ್ಡ ಪರದೆಯಲ್ಲಿ ಮೂಡುವ ಚಿತ್ರವನ್ನು ಗಮನಿಸಲು ಹೇಳಿದರು. ಈ ಚಿತ್ರ ಮೋದಿ ಫಾರ್ ನ್ಯೂ ಇಂಡಿಯಾ ಫೇಸ್ ಬುಕ್ ಪುಟದ್ದಾಗಿತ್ತು.

“ಬಡವರಿಗೆ ಒಳ್ಳೆಯ ಬದುಕನ್ನು ನೀಡುವುದು ಮೋದಿ ಅವರ ಕೇವಲ ಘೋಷಣೆಯಾಗಿಲ್ಲ, ಬದಲಾಗಿ ಅದೊಂದು ಧ್ಯೇಯ. ಕಾಂಗ್ರೆಸ್ ಬಡತನ ನಿರ್ಮೂಲನೆ ಬಗ್ಗೆ ಘೋಷಣೆ ಮಾತ್ರ ನೀಡಬಹುದೇ ಹೊರತು ಬೇರೇನನ್ನೂ ಮಾಡಲು ಅದಕ್ಕೆ ಸಾಧ್ಯವಿಲ್ಲ'' ಎಂದು ಅಲ್ಲಿ ಬರೆಯಲಾಗಿತ್ತು. ಈ ಬರಹದ ಜತೆ ಏಳು ಮಂದಿ ಸದಸ್ಯರ ಕುಟುಂಬವೊಂದರ ಫೋಟೋ ಕೂಡ ಇತ್ತು. “ಕಳೆದ ಮೂರು ವರ್ಷಗಳಲ್ಲಿ 7.5 ಕೋಟಿ  ಭಾರತೀಯರನ್ನು ಬಡತನದಿಂದ ಹೊರ ತರಲಾಗಿದೆ” ಎಂದು ಅಲ್ಲಿ ಬರೆಯಲಾಗಿತ್ತು, ಜತೆಗೆ  ಅಲ್ಲಿ ಕಾಣಿಸಿಕೊಂಡ ಕುಟುಂಬ ಕೂಡ ಮೋದಿ ಸರಕಾರದ ಯೋಜನೆಯ ಫಲಾನುಭವಿ ಎಂಬಂತೆ ಬಿಂಬಿಸಲಾಗಿತ್ತು.

ಠಾಕ್ರೆ ಪ್ರಕಾರ ಬಿಜೆಪಿಯ ಐಟಿ ಸೆಲ್ ಈ ಫೋಟೋವನ್ನು ಆ ಕುಟುಂಬದ ಅನುಮತಿಯಿಲ್ಲದೆಯೇ ಬಳಸಿದೆ. ಕುಟುಂಬ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ ಫೋಟೋವನ್ನು ಬಿಜೆಪಿ ಐಟಿ ಸೆಲ್ ಬಳಸಿತ್ತೆಂದು ಕುಟುಂಬವನ್ನು ವೇದಿಕೆಗೆ ಕರೆದ ರಾಜ್ ಠಾಕ್ರೆ ಹೇಳಿದರು. ಬಿಜೆಪಿಯ `ಲಾವಾರಿಸ್' ಪಡೆಗೆ ನಾಚಿಕೆಯಿಲ್ಲ ಎಂದೂ ಠಾಕ್ರೆ ಹೇಳಿದರು.

“ನೀವೇ ಏಕೆ ಪರಿಶೀಲಿಸಬಾರದು ? ವೇದಿಕೆಯಲ್ಲಿರುವ ಕುಟುಂಬವನ್ನು ಹಾಗೂ ಮೋದಿ ಫೋಟೋ ಪಕ್ಕದಲ್ಲಿರುವ ಕುಟುಂಬದ ಚಿತ್ರವನ್ನು ಗಮನಿಸಿ. ಬಿಜೆಪಿ ಜಾಹೀರಾತಿನಲ್ಲಿ ತಾವು ಕಾಣಿಸಿಕೊಂಡಿದ್ದೇವೆಂದು ಈ ಜನರಿಗೆ ಗೊತ್ತೇ ಇರಲಿಲ್ಲ'' ಎಂದು ಸಭೆಯನ್ನುದ್ದೇಶಿಸಿ ರಾಜ್ ಠಾಕ್ರೆ ಹೇಳಿದಾಗ ಸಭಿಕರಿಂದ ಭಾರೀ ಕರತಾಡನ ವ್ಯಕ್ತವಾಯಿತು.

2014ರ ಚುನಾವಣೆಗಿಂತ ಮೊದಲು ಟಿವಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮೋದಿ ತಾವು ಅಧಿಕಾರಕ್ಕೆ ಬಂದರೆ ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪು ಹಣವನ್ನು  ವಾಪಸ್ ತಂದು ಶೇ 5ರಿಂದ 10ರಷ್ಟು ಹಣವನ್ನು ತೆರಿಗೆದಾರರಿಗೆ ನೀಡುವುದಾಗಿ ತಿಳಿಸಿದ ವೀಡಿಯೋ ಕ್ಲಿಪ್ಪಿಂಗ್ ಅನ್ನೂ ಠಾಕ್ರೆ  ಪ್ರದರ್ಶಿಸಿ ನಂತರ  ಚುನಾವಣೆ ಗೆಲ್ಲಲು ಮೋದಿ ಸುಳ್ಳು ಆಶ್ವಾಸನೆ ನೀಡಿದ್ದರೆಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಒಪ್ಪಿಕೊಳ್ಳುವ ಇನ್ನೊಂದು ವೀಡಿಯೋ ತುಣುಕನ್ನು ಪ್ರದರ್ಶಿಸಿದ್ದಾರೆ.

ರಾಜ್ ಠಾಕ್ರೆ ಅವರ ರ್ಯಾಲಿಗಳು ಮಹಾರಾಷ್ಟ್ರದಾದ್ಯಂತ ಜನಪ್ರಿಯವಾಗಿದ್ದು, ಮೋದಿಯ ಸುಳ್ಳು ಆಶ್ವಾಸನೆಗಳನ್ನು ಅವರು ಈ ಮೂಲಕ ಬಯಲಿಗೆಳೆದಿದ್ದಾರೆ. ಮೋದಿ ಕಳೆದ ಚುನಾವಣೆಗಿಂತ ಮೊದಲು ಹೇಳಿದ ಮಾತುಗಳು ಹಾಗೂ ಅಧಿಕಾರಕ್ಕೆ ಬಂದ ನಂತರ ಹೇಳಿದ ಮಾತುಗಳ ವೀಡಿಯೋ ತುಣುಕುಗಳನ್ನು ಪ್ರದರ್ಶಿಸುತ್ತಿರುವ ರಾಜ್ ಠಾಕ್ರೆ ರ್ಯಾಲಿಗಳು ದೊಡ್ಡ ಹಿಟ್ ಆಗಿವೆ.

ಕೃಪೆ: jantakareporter.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News