ಆತ್ಮಹತ್ಯಾ ದಾಳಿಗಳ ಹಿಂದಿನ ಶ್ರೀಮಂತ ಕುಟುಂಬ

Update: 2019-04-25 17:20 GMT

ಕೊಲಂಬೊ, ಎ. 25: ಶ್ರೀಲಂಕಾದ ರಾಜಧಾನಿ ಕೊಲಂಬೊದ ಸರಳ ಉಪನಗರವೊಂದರಲ್ಲಿ ಬದುಕುತ್ತಿರುವ ಗೃಹಿಣಿ ಫಾತಿಮಾ ಫಝ್ಲಿ ಅವರಿಗೆ ತನ್ನ ಮನೆಯ ಎದುರಿನ ರಸ್ತೆಯ ಇನ್ನೊಂದು ಬದಿಯಲ್ಲಿರುವ ಮೂರು ಅಂತಸ್ತಿನ ಭವ್ಯ ಮನೆಯಲ್ಲಿ ವಾಸಿಸುತ್ತಿದ್ದವರ ಬಗ್ಗೆ ವಿಶೇಷ ಕುತೂಹಲ. ಅವರು ಈ ಸರಳ ಉಪನಗರದ ಶ್ರೀಮಂತ ಖ್ಯಾತನಾಮರು ಎಂಬುದಾಗಿ ಅವರು ಭಾವಿಸಿದ್ದರು. ಆದರೆ, ಒಂದು ದಿನ ಅವರು ಏನು ಮಾಡುತ್ತಾರೆ ಎನ್ನುವ ಕಲ್ಪನೆ ಮುಗ್ಧ ಫಾತಿಮಾರಲ್ಲಿರಲಿಲ್ಲ.

 ಮಹವೇಲ ಗಾರ್ಡನ್ಸ್‌ನಲ್ಲಿರುವ ಬಿಳಿಯ ಮನೆಯಲ್ಲಿ ವಾಸಿಸುತ್ತಿದ್ದ ಇಬ್ಬರು ಸಹೋದರರು, ಶ್ರೀಲಂಕಾದಲ್ಲಿ ರವಿವಾರ ನಡೆದ ಸರಣಿ ಆತ್ಮಹತ್ಯಾ ಬಾಂಬ್ ದಾಳಿಗಳ ಸೂತ್ರಧಾರರು ಎನ್ನುವುದು ಈಗ ಹೊರಬಿದ್ದಿದೆ. ದ್ವೀಪ ರಾಷ್ಟ್ರದಲ್ಲಿ ಒಂದು ದಶಕದ ಅವಧಿಯಲ್ಲಿ ನೆಲೆಸಿದ್ದ ಶಾಂತಿಯನ್ನು ಈ ಸರಣಿ ಬಾಂಬ್ ಸ್ಫೋಟಗಳು ಛಿದ್ರಗೊಳಿಸಿವೆ.

ಮೂರು ಚರ್ಚ್‌ಗಳು ಮತ್ತು ನಾಲ್ಕು ವಿಲಾಸಿ ಹೊಟೇಲ್‌ಗಳ ಮೇಲೆ ನಡೆದ ಸಂಘಟಿತ ದಾಳಿಯ ಹೊಣೆಯನ್ನು ಭಯೋತ್ಪಾದಕ ಸಂಘಟನೆ ಐಸಿಸ್ ವಹಿಸಿಕೊಂಡಿದೆ.

33 ವರ್ಷದ ತಾಮ್ರ ಕಾರ್ಖಾನೆ ಮಾಲೀಕ ಇನ್ಶಾಫ್ ಇಬ್ರಾಹೀಂ ವಿಲಾಸಿ ಶಾಂಗ್ರೀಲಾ ಹೊಟೇಲ್‌ನ ಬಫೆಯಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡನು ಎಂದು ಅವನ ಕುಟುಂಬಕ್ಕೆ ನಿಕಟವಾಗಿರುವ ಮೂಲವೊಂದು ಹೇಳಿದೆ.

ಬಳಿಕ, ಅವನ ಮನೆಯ ಮೇಲೆ ದಾಳಿ ನಡೆಸಲು ಪೊಲೀಸರು ಹೋದಾಗ, ಅವನ ತಮ್ಮ ಇಲ್ಹಾಮ್ ಇಬ್ರಾಹೀಂ ಮನೆಯಲ್ಲಿ ಬಾಂಬೊಂದನ್ನು ಸ್ಫೋಟಿಸಿದನು. ಈ ಸ್ಫೋಟದಲ್ಲಿ ಅವನು, ಅವನ ಪತ್ನಿ ಮತ್ತು ಅವರ ಮೂವರು ಮಕ್ಕಳು ಮೃತಪಟ್ಟರು ಎಂದು ಮೂಲವೊಂದು ‘ರಾಯ್ಟರ್ಸ್’ಗೆ ಹೇಳಿದೆ.

‘‘ಅವರು ಒಳ್ಳೆಯ ಜನರಂತೆ ಕಾಣುತ್ತಿದ್ದರು’’ ಎಂದು ಫಝ್ಲಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ಹೇಳಿದರು.

ದಾಳಿಯ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಆ ಸಹೋದರರ ತಂದೆ ಮುಹಮ್ಮದ್ ಇಬ್ರಾಹೀಂರನ್ನು ಬಂಧಿಸಿದ್ದಾರೆ. ಶ್ರೀಮಂತ ಸಾಂಬಾರ ಪದಾರ್ಥಗಳ ವ್ಯಾಪಾರಿ ಹಾಗೂ ವಾಣಿಜ್ಯ ಸಮುದಾಯದ ಆಧಾರಸ್ತಂಭವಾಗಿರುವ ಇಬ್ರಾಹೀಮ್‌ಗೆ ಆರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳು.

ಪರೋಪಕಾರಿ ಕುಟುಂಬ!

‘‘ಅವರು ತನ್ನ ಊರಿನ ಬಡವರಿಗೆ ಆಹಾರ ಮತ್ತು ಹಣದ ರೂಪದಲ್ಲಿ ನೆರವು ನೀಡುತ್ತಿದ್ದರು. ಅವರ ಮಕ್ಕಳು ಇಂಥ ಕೃತ್ಯವನ್ನು ನಡೆಸಿದ್ದಾರೆ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ’’ ಎಂದು ಫಝ್ಲಿ ಹೇಳುತ್ತಾರೆ.

‘‘ಅವರು ಮಾಡಿರುವ ಕೆಲಸದಿಂದಾಗಿ, ಈಗ ಎಲ್ಲ ಮುಸ್ಲಿಮರನ್ನು ಶಂಕಿತರನ್ನಾಗಿ ಕಾಣಲಾಗುತ್ತಿದೆ’’ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

‘‘ನನಗೆ ಆಘಾತವಾಗಿದೆ. ಅವರು ಈ ರೀತಿಯ ಜನರೆಂದು ನಾವು ಯಾವತ್ತೂ ಯೋಚಿಸಿಲ್ಲ’’ ಎಂದು ಇಬ್ರಾಹೀಂ ಕುಟುಂಬದ ಮನೆಯ ಪಕ್ಕದ ಕಟ್ಟಡದಲ್ಲಿ ಕೆಲಸ ಮಾಡುತ್ತಿರುವ ನೆಟ್‌ವರ್ಕ್ ಕೇಬಲ್ ಇಂಜಿನಿಯರ್ ಸಂಜೀವ ಜಯಸಿಂೆ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News