‘ಬಾಯಿ ತಪ್ಪಿ ಹಾಗೆ ಹೇಳಿದ್ದೆ’: ಜಿನ್ನಾ ಹೆಸರಿನ ಉಲ್ಲೇಖಕ್ಕೆ ಶತ್ರುಘ್ನ ಸಿನ್ಹಾ ಸ್ಪಷ್ಟನೆ

Update: 2019-04-27 14:08 GMT

ಛಿಂದ್ವಾಡಾ(ಮ.ಪ್ರ),ಎ.27: ಇತ್ತೀಚಿಗಷ್ಟೇ ಬಿಜೆಪಿಯನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿರುವ ನಟ-ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ಶುಕ್ರವಾರ ತನ್ನ ಹೊಸಪಕ್ಷವನ್ನು ಹೊಗಳುವ ಭರದಲ್ಲಿ ಮಹಾತ್ಮಾ ಗಾಂಧಿ,ಸರ್ದಾರ್ ಪಟೇಲ್ ಮತ್ತು ಜವಾಹರಲಾಲ ನೆಹರು ಅವರೊಂದಿಗೆ ಪಾಕಿಸ್ತಾನದ ಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಅವರ ಹೆಸರನ್ನೂ ಉಲ್ಲೇಖಿಸಿದ್ದು ವಿವಾದ ಸೃಷ್ಟಿಸಿದೆ.

ಶುಕ್ರವಾರ ಛಿಂದ್ವಾಡಾದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಅವರ ಪುತ್ರ ನಕುಲನಾಥ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಸಿನ್ಹಾ,ಮಹಾತ್ಮಾ ಗಾಂಧಿಯಿಂದ ಹಿಡಿದು ಸರ್ದಾರ್ ಪಟೇಲ್,ಮುಹಮ್ಮದ್ ಅಲಿ ಜಿನ್ನಾ,ಜವಾಹರಲಾಲ ನೆಹರು,ಇಂದಿರಾ ಗಾಂಧಿ,ರಾಜೀವ ಗಾಂಧಿ,ರಾಹುಲ್ ಗಾಂಧಿ ಮತ್ತು ನೇತಾಜಿ ಸುಭಾಷಚಂದ್ರ ಬೋಸ್‌ವರೆಗೆ ಎಲ್ಲರೂ ಕಾಂಗ್ರೆಸ್ ಕುಟುಂಬದವರಾಗಿದ್ದಾರೆ. ಕಾಂಗ್ರೆಸ್ ಅವರ ಪಕ್ಷ. ಅವರೆಲ್ಲ ದೇಶದ ಅಭಿವೃದ್ಧಿ ಮತ್ತು ಸ್ವಾತಂತ್ರ್ಯದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ. ಇದೇ ಕಾರಣದಿಂದ ತಾನು ಕಾಂಗ್ರೆಸ್‌ಗೆ ಸೇರಿದ್ದೇನೆ ಎಂದು ಹೇಳಿದ್ದರು.

ಸಿನ್ಹಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್,ಅವರು ಇದಕ್ಕೆ ವಿವರಣೆ ನೀಡಲೇಬೇಕು ಎಂದು ಹೇಳಿದೆ. ಸಿನ್ಹಾರ ಅಭಿಪ್ರಾಯಗಳೇನೇ ಇರಲಿ,ಅವುಗಳನ್ನು ಅವರು ವಿವರಿಸಬೇಕು. ಆದರೆ ಕೆಲವೇ ದಿನಗಳ ಹಿಂದೆ ಅವರು ಬಿಜೆಪಿಯ ಭಾಗವಾಗಿದ್ದರು. ಹೀಗಾಗಿ ಅವರು ಅಷ್ಟೆಲ್ಲ ವರ್ಷಗಳ ಕಾಲ ಏಕೆ ತನ್ನ ಭಾಗವಾಗಿದ್ದರು ಎನ್ನುವುದನ್ನು ಬಿಜೆಪಿ ವಿವರಿಸಲಿ. ಕಾಂಗ್ರೆಸ್‌ನ ಪ್ರತಿಯೊಬ್ಬ ಸದಸ್ಯರ ಹೇಳಿಕೆಗೂ ತಾನು ವಿವರಣೆ ನೀಡಬೇಕಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹೇಳಿದರು.

ಶನಿವಾರ ಸ್ಪಷ್ಟೀಕರಣವನ್ನು ನೀಡಿರುವ ಸಿನ್ಹಾ,ನಿನ್ನೆ ತಾನು ಬಾಯಿತಪ್ಪಿ ಹಾಗೆ ಹೇಳಿದ್ದೆ. ತಾನು ಮೌಲಾನಾ ಆಝಾದ್ ಅವರ ಹೆಸರನ್ನು ಹೇಳಲು ಬಯಸಿದ್ದೆ,ಆದರೆ ತಪ್ಪಿ ಜಿನ್ನಾರ ಹೆಸರು ಹೇಳಿದ್ದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಬೆನ್ನಿಗೇ ಸಿನ್ಹಾ ಪಕ್ಷದಲ್ಲಿ ಹಲವು ಗೊಂದಲಗಳನ್ನು ಹುಟ್ಟುಹಾಕಿದ್ದಾರೆ. ಲಕ್ನೋ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿದ್ದರೂ ಅಲ್ಲಿ ಎಸ್‌ಪಿ ಅಭ್ಯರ್ಥಿಯಾಗಿರುವ ಪತ್ನಿ ಪೂನಂ ಪರವಾಗಿ ಸಿನ್ಹಾ ಪ್ರಚಾರ ನಡೆಸಿದ್ದರು. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ ಅವರು ಪ್ರಧಾನಿಯಾಗುವ ಅರ್ಹತೆಯನ್ನು ಹೊಂದಿದ್ದಾರೆ ಎಂಬ ಸಿನ್ಹಾರ ಇತ್ತೀಚಿನ ಹೊಗಳಿಕೆಯೂ ಪಕ್ಷದ ಒಂದು ವರ್ಗದ ನಾಯಕರ ಖಂಡನೆಗೆ ಗುರಿಯಾಗಿತ್ತು.

ಸಿನ್ಹಾ ಬಿಜೆಪಿಯಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷಾಧ್ಯಕ್ಷ ಅಮಿತ್ ಶಾ ಅವರ ಕಟು ಟೀಕಾಕಾರರಾಗಿದ್ದರು.

ಸಿನ್ಹಾ ಅವರು ಬಿಹಾರದ ಪಟ್ನಾಸಾಹಿಬ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಬಿಜೆಪಿಯ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ರವಿಶಂಕರ ಪ್ರಸಾದ ಅವರನ್ನು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News