ಶ್ರೀಲಂಕಾ ಸ್ಫೋಟ: ನೂರಾರು ಜನರ ರಕ್ಷಿಸಲು ತನ್ನ ಪ್ರಾಣ ಅರ್ಪಿಸಿದ ‘ಹೀರೊ’ ಬಗ್ಗೆ ನಿಮಗೆಷ್ಟು ಗೊತ್ತು?

Update: 2019-04-27 17:05 GMT

ಬಟ್ಟಿಕಲೋವ (ಶ್ರೀಲಂಕಾ), ಎ. 27: ಈಸ್ಟರ್ ರವಿವಾರದಂದು ಶ್ರೀಲಂಕದ ಬಟ್ಟಿಕಲೋವದಲ್ಲಿರುವ ಝಯನ್ ಇವ್ಯಾಂಜಲಿಕಲ್ ಚರ್ಚ್‌ನಲ್ಲಿ ಆತ್ಮಹತ್ಯಾ ಬಾಂಬರ್‌ನನ್ನು ತಡೆದು ತಾನು ಮೃತಪಟ್ಟ ರಮೇಶ್ ರಾಜು ಈಗ ನಗರದ ಹೀರೋ ಆಗಿದ್ದಾರೆ. ತನ್ನ ಈ ಪರಮ ತ್ಯಾಗದ ಮೂಲಕ ಅವರು ನೂರಾರು ಮಂದಿಯ ಪ್ರಾಣವನ್ನು ಉಳಿಸಿದ್ದಾರೆ.

ಎರಡು ಮಕ್ಕಳ ತಂದೆಯಾಗಿರುವ 40 ವರ್ಷದ ರಾಜು ಆತ್ಮಹತ್ಯಾ ಬಾಂಬರ್‌ನನ್ನು ಚರ್ಚ್‌ನ ಬಾಗಿಲಲ್ಲೇ ತಡೆದು ನಿಲ್ಲಿಸಿದ್ದರು.

ಈ ಸ್ಫೋಟದಲ್ಲಿ ರಾಜು ಸೇರಿದಂತೆ 29 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ 14 ಮಂದಿ ಮಕ್ಕಳು.

ಅದೇ ವೇಳೆ, ಚರ್ಚ್‌ನ ಒಳಗಿದ್ದ ಸುಮಾರು 600 ಮಂದಿ ಮಾನವ ಬಾಂಬರ್‌ನ ದಾಳಿಯಿಂದ ಪಾರಾಗಿದ್ದಾರೆ.

‘‘ಬಾಂಬರ್‌ನ ಬಗ್ಗೆ ಸಂಶಯ ಬಂದಾಗ ನನ್ನ ಮಗ ಸುರಕ್ಷಿತ ಸ್ಥಳಕ್ಕೆ ಓಡಿಹೋಗಬಹುದಿತ್ತು ಹಾಗೂ ತನ್ನ ಪ್ರಾಣವನ್ನು ಉಳಿಸಿಕೊಳ್ಳಬಹುದಿತ್ತು. ಆದರೆ, ಹಾಗೆ ಮಾಡುವ ಬದಲು, ಬಾಂಬರ್‌ನನ್ನು ಚರ್ಚ್‌ನ ದ್ವಾರದಲ್ಲೇ ತಡೆದು ನಿಲ್ಲಿಸಲು ಅವನು ಮುಂದಾದನು’’ ಎಂದು ರಾಜು ತಂದೆ ವೇಲುಸಾಮಿ ರಾಜು ಎಎಫ್‌ಪಿ ಸುದ್ದಿ ಸಂಸ್ಥೆಗೆ ಹೇಳಿದರು.

‘‘ಅವನು ತುಂಬಾ ಮಂದಿಯ ಪ್ರಾಣಗಳನ್ನು, ಅದರಲ್ಲೂ ಮುಖ್ಯವಾಗಿ ಅಷ್ಟೊಂದು ಮಕ್ಕಳ ಪ್ರಾಣಗಳನ್ನು ರಕ್ಷಿಸಿದ ಬಗ್ಗೆ ನನಗೆ ಅತೀವ ಅಭಿಮಾನವಿದೆ’’ ಎಂದು ಅವರು ಹೇಳಿದರು.

ಎರಡು ದೊಡ್ಡ ಚೀಲಗಳನ್ನು ಹೊತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಚರ್ಚ್‌ನ ಒಳಗೆ ಬರುತ್ತಿದ್ದಾಗ, ಅವನನ್ನು ತಡೆದ ರಾಜು ಚೀಲಗಳನ್ನು ಹೊರಗೆ ಇಡುವಂತೆ ಸೂಚಿಸಿದರು. ವಾದ-ಪ್ರತಿವಾದದ ವೇಳೆ ಬಾಂಬ್ ಸ್ಫೋಟಗೊಂಡಿತು.

ಆ ಸಮಯದಲ್ಲಿ ಹೊರಗಿದ್ದ ಮಕ್ಕಳು ಮತ್ತು ಅವರ ಹೆತ್ತವರು ರಾಜು ಜೊತೆಗೆ ಪ್ರಾಣ ಕಳೆದುಕೊಂಡರು.

ರಾಜು ಅವರ ತಂಗಿ, ಗಂಡ ಮತ್ತು 20 ತಿಂಗಳ ಮಗ ಕೂಡ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News