ಮೇನಕಾ ಗಾಂಧಿಗೆ ಚುನಾವಣಾ ಆಯೋಗದ ಎಚ್ಚರಿಕೆ

Update: 2019-04-29 14:54 GMT

ಹೊಸದಿಲ್ಲಿ,ಎ.29: ಗ್ರಾಮಗಳು ತನ್ನ ಬಿಜೆಪಿ ಪಕ್ಷಕ್ಕೆ ಮತಗಳನ್ನು ನೀಡಿರುವ ರೀತಿಯನ್ನು ಆಧರಿಸಿ ಅವುಗಳನ್ನು ತಾನು ವರ್ಗೀಕರಿಸುತ್ತೇನೆ ಎಂಬ ಹೇಳಿಕೆಗಾಗಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರನ್ನು ಚುನಾವಣಾ ಆಯೋಗವು ಸೋಮವಾರ ಬಲವಾಗಿ ಖಂಡಿಸಿದೆ. ಅವರು ಮಾದರಿ ನೀತಿ ಸಂಹಿತೆ ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಅದು ತಿಳಿಸಿದೆ.

ಭವಿಷ್ಯದಲ್ಲಿ ಇಂತಹ ದುರ್ವರ್ತನೆಗಳನ್ನು ಪುನರಾವರ್ತಿಸದಂತೆ ಅದು ಮೇನಕಾರಿಗೆ ಎಚ್ಚರಿಕೆಯನ್ನೂ ನೀಡಿದೆ.

ಎ.14ರಂದು ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ್ದ ಮೇನಕಾ,ತನಗೆ ಬೀಳುವ ಮತಗಳ ಸಂಖ್ಯೆಗಳನ್ನು ಆಧರಿಸಿ ತಾನು ಗ್ರಾಮಗಳನ್ನು ಎ,ಬಿ,ಸಿ,ಡಿ ಎಂದು ವರ್ಗೀಕರಿಸುತ್ತೇನೆ ಮತ್ತು ಅತಿ ಹೆಚ್ಚು ಮತಗಳನ್ನು ನೀಡಿದ ಗ್ರಾಮಗಳಿಗೆ(ಎ) ಅಭಿವೃದ್ಧಿ ಕಾರ್ಯಗಳಲ್ಲಿ ಮೊದಲ ಆದ್ಯತೆಯನ್ನು ನೀಡುತ್ತೇನೆ ಎಂದು ಹೇಳಿದ್ದರು. ಈ ಪೈಕಿ ನಿಮ್ಮ ಗ್ರಾಮ ಯಾವ ವರ್ಗಕ್ಕೆ ಬರಬೇಕು ಎಂದು ನಿರ್ಧರಿಸುವುದನ್ನು ನಿಮಗೇ ಬಿಡಲಾಗಿದೆ ಎಂದು ತಿಳಿಸಿದ್ದರು.

ಸುಲ್ತಾನ್‌ಪುರದಲ್ಲಿ ಕೋಮುವಾದಿ ಹೇಳಿಕೆಯನ್ನು ನೀಡಿದ್ದಕ್ಕಾಗಿ ಎ.15ರಂದು ಚುನಾವಣಾ ಆಯೋಗವು ಮೇನಕಾಗೆ 48 ಗಂಟೆಗಳ ಪ್ರಚಾರ ನಿಷೇಧವನ್ನು ವಿಧಿಸಿತ್ತು. ತನಗೆ ಮತ ನೀಡದಿದ್ದರೆ ಸಂಸದೆಯಾಗಿ ತನ್ನಿಂದ ನೆರವು ದೊರೆಯದಿರಬಹುದು ಎಂದು ಅಲ್ಲಿ ಅವರು ಮುಸ್ಲಿಂ ಸಮುದಾಯಕ್ಕ್ಕೆ ಬೆದರಿಕೆಯೊಡ್ಡಿದ್ದು ವರದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News