ಸಿಜೆಐ ಲೈಂಗಿಕ ಕಿರುಕುಳ ಪ್ರಕರಣ: ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರಕ್ಕೆ ನಿರ್ಬಂಧ ಕೋರಿದ ಮನವಿ ತಿರಸ್ಕೃತ

Update: 2019-04-29 16:14 GMT

ಹೊಸದಿಲ್ಲಿ, ಎ. 29: ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವಂತೆ ಕೋರಿ ಸಲ್ಲಿಸಲಾದ ಮನವಿ ಸ್ವೀಕರಿಸಲು ದಿಲ್ಲಿ ಉಚ್ಚ ನ್ಯಾಯಾಲಯ ಸೋಮವಾರ ನಿರಾಕರಿಸಿದೆ.

ಸರಕಾರೇತರ ಸಂಸ್ಥೆ ಸಲ್ಲಿಸಿದ ಈ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ನೇತೃತ್ವದ ಪೀಠ ತಿರಸ್ಕರಿಸಿದೆ. ಈ ವಿಚಾರ ಈಗಾಗಲೇ ನ್ಯಾಯಾಲಯದಲ್ಲಿದೆ. ಆದುದರಿಂದ ಯಾವುದೇ ಹಸ್ತಕ್ಷೇಪದ ಅಗತ್ಯ ಇಲ್ಲ ಎಂದು ಪೀಠ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ವಿರುದ್ಧದ ಆರೋಪದ ಸುದ್ದಿ ಪ್ರಕಟ ಭಾರತದ ನ್ಯಾಯಾಂಗ ವ್ಯವಸ್ಥೆಗೆ ನೇರವಾಗಿ ಧಕ್ಕೆ ಉಂಟು ಮಾಡುತ್ತದೆ ಎಂದು ಹೇಳಿರುವ ಸರಕಾರೇತರ ಸಂಸ್ಥೆ ಆ್ಯಂಟಿ ಕರಪ್ಶನ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ಸುಪ್ರೀಂ ಕೋರ್ಟ್‌ಗೆ ಹೋಗುವಂತೆ ಪೀಠ ಸೂಚಿಸಿದೆ. ಮೂವರು ನ್ಯಾಯಾಧೀಶರ ಸಮಿತಿಯ ವಿಚಾರಣೆಯ ವರೆಗೆ ಮುಖ್ಯ ನ್ಯಾಯಮೂರ್ತಿ ಅವರ ಮೇಲಿನ ಆರೋಪದ ಬಗ್ಗೆ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಕೂಡಲೇ ನಿರ್ಬಂಧ ವಿಧಿಸಬೇಕು ಎಂದು ಮನವಿ ಕೋರಿತ್ತು. ಸುಪ್ರೀಂ ಕೋರ್ಟ್‌ನ ನಿವೃತ್ತ ಮಹಿಳಾ ಉದ್ಯೋಗಿಯೋರ್ವರು ಮುಖ್ಯ ನ್ಯಾಯಮೂರ್ತಿ ವಿರುದ್ಧ ಮಾಡಿದ ಆರೋಪದ ಬಗ್ಗೆ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಾಧೀಶರ ಸಮಿತಿ ತನ್ನ ಮೊದಲ ಕಲಾಪವನ್ನು ಕಳೆದ ಶುಕ್ರವಾರ ನಡೆಸಿತ್ತು.

ಇಲೆಕ್ಟ್ರಾನಿಕ್ಸ್ ಹಾಗೂ ಮುದ್ರಣ ಮಾಧ್ಯಮಗಳು ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಈ ಆರೋಪದ ಸುದ್ದಿ ಪ್ರಸಾರಕ್ಕೆ ನಿರ್ಬಂಧ ವಿಧಿಸಬೇಕು ಎಂದು ಮನವಿ ಕೋರಿದೆ. ವ್ಯಾಟ್ಸ್ ಆ್ಯಪ್, ಗೂಗಲ್, ಯು ಟ್ಯೂಬ್, ಲಿಂಕ್‌ಡೆನ್ ಕಾರ್ಪೊರೇಶನ್ ಹಾಗೂ ನ್ಯೂಸ್ ವೆಬ್‌ಸೈಟ್ ಸ್ಕ್ರೋಲ್.ಇನ್‌ಗೆ ನಿರ್ದೇಶನ ನೀಡುವಂತೆ ಮನವಿ ಕೋರಿದೆ. ಈ ಚಟುವಟಿಕೆಯಲ್ಲಿ ದೇಶ ವಿರೋಧಿ ಶಕ್ತಿಗಳು ಪಾಲ್ಗೊಂಡಿರುವ ಶಂಕೆ ಇದೆ. ಈ ಆರೋಪದ ಸುದ್ದಿ ಪ್ರಕಟನೆಗೆ ನಿರ್ಬಂಧ ವಿಧಿಸದೇ ಇದ್ದರೆ, ಜನರು ಭಾರತೀಯ ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಂಬಿಕೆ ಕಳೆದುಕೊಳ್ಳಲಿದ್ದಾರೆ. ಇದರಿಂದ ದೇಶಕ್ಕೆ ಹಾಗೂ ಜನರಿಗೆ ವ್ಯಾಪಕ ಹಾನಿ ಉಂಟಾಗಲಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News