ಹೀನಾ, ಅಂಕುರ್ ಹೆಸರು ಶಿಫಾರಸು ಮಾಡಿದ ಶೂಟಿಂಗ್ ಫೆಡರೇಶನ್
ಹೊಸದಿಲ್ಲಿ, ಎ.29: ಖ್ಯಾತ ಪಿಸ್ತೂಲ್ ಶೂಟರ್ ಹೀನಾ ಸಿಧು ಮತ್ತು ಟ್ರಾಪ್ ಶೂಟರ್ ಅಂಕುರ್ ಮಿತ್ತಲ್ ಅವರನ್ನು ದೇಶದ ಕ್ರೀಡಾ ಕ್ಷೇತ್ರದ ಉನ್ನತ ಪುರಸ್ಕಾರವಾಗಿರುವ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ರಾಷ್ಟ್ರೀಯ ಶೂಟಿಂಗ್ ಫೆಡರೇಶನ್ ಶಿಫಾರಸು ಮಾಡಿದೆ.
ಅಂಜುಮ್ ವೌದ್ಗಿಲ್ (ರೈಫಲ್), ಶಾಹ್‌ಝಾರ್ ರಿಝ್ವಿ (ಪಿಸ್ತೂಲ್), ಮತ್ತು ಓಂ ಪ್ರಕಾಶ್ ಮಿತ್ರಾವಾಲ್‌ರನ್ನು (ಪಿಸ್ತೂಲ್)ಅರ್ಜುನ್ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಸಿಧು ಇಂಟರ್‌ನ್ಯಾಶನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್(ಐಎಸ್‌ಎಸ್‌ಎಫ್) ವಿಶ್ವ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ ಭಾರತದ ಪಿಸ್ತೂಲ್ ಶೂಟರ್ ಎನಿಸಿಕೊಂಡಿದ್ದಾರೆ.
29ರ ಹರೆಯದ ಸಿಧು ವಿಶ್ವಕಪ್, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದರು.
10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧಾ ವಿಭಾಗದಲ್ಲಿ 203.8 ಸ್ಕೋರ್ ದಾಖಲಿಸಿ ವಿಶ್ವ ದಾಖಲೆ ಬರೆದಿರುವ ಸಿಧು ಶಾಟ್‌ಗನ್ ವಿಭಾಗದಲ್ಲೂ ಯಶಸ್ವಿ ಶೂಟರ್. 2017ರಲ್ಲಿ ವಿಶ್ವಕಪ್‌ನಲ್ಲಿ ಚಿನ್ನ, ಬೆಳ್ಳಿ ಜಯಿಸಿದ್ದರು.
ಡಬಲ್ ಟ್ರಾಪ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಏಶ್ಯನ್ ಚಾಂಪಿಯನ್‌ಶಿಪ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಪಡೆದಿದ್ದರು.ಐಎಸ್‌ಎಸ್‌ಎಫ್ ವರ್ಲ್ಡ್ ಶಾಟ್‌ಗನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದುಕೊಂಡು ಡಬಲ್ ಟ್ರಾಪ್ ನಲ್ಲಿ ನಂ.1 ಸ್ಥಾನ ಪಡೆದಿದ್ದರು.
ವೌದ್ಗಿಲ್ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಸ್ಥಾನ ಗಿಟ್ಟಿಸಿಕೊಂಡ ಮೊದಲ ಮಹಿಳಾ ಶೂಟರ್. ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಏರ್‌ರೈಫಲ್‌ನಲ್ಲಿ ರಜತ ಪದಕ ಜಯಿಸಿದ್ದರು. ರಿಝ್ವಿ ಬೀಜಿಂಗ್ ಮತ್ತು ಮ್ಯೂನಿಕ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಜಯಿಸಿದ್ದರು.
23ರ ಹರೆಯದ ಮಿಥರ್ವಾಲ್ ದಕ್ಷಿಣ ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆದ ವರ್ಲ್ಡ್‌ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 50 ಮೀಟರ್ಸ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಪಡೆದಿದ್ದರು.