ಕ್ವಿಟೋವಾ ಮುಡಿಗೆ ಸ್ಟಟ್‌ಗರ್ಟ್ ಓಪನ್ ಕಿರೀಟ
Update: 2019-04-29 23:36 IST
ಸ್ಟಟ್‌ಗರ್ಟ್, ಎ.29: ವಿಶ್ವದ ನಂ.2ನೇ ಆಟಗಾರ್ತಿ ಪೆಟ್ರಾ ಕ್ವಿಟೋವಾ ಇಸ್ಟೋನಿಯದ ಅನೆಟ್ಟ್ ಕಾಂಟವೆಟ್‌ರನ್ನು ಮಣಿಸಿ ಈ ವರ್ಷ ಎರಡನೇ ಡಬ್ಲುಟಿಎ ಪ್ರಶಸ್ತಿ ತನ್ನದಾಗಿಸಿಕೊಂಡರು.
ಇಲ್ಲಿ ರವಿವಾರ ನಡೆದ ಸ್ಟಟ್‌ಗರ್ಟ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಝೆಕ್ ಆಟಗಾರ್ತಿ ಕ್ವಿಟೋವಾ ಇಸ್ಟೋನಿಯದ ಕಾಂಟವೆಟ್‌ರನ್ನು 6-3, 7-6(7/2) ಸೆಟ್‌ಗಳಿಂದ ಸೋಲಿಸಿದ್ದಾರೆ.
ಎರಡು ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿರುವ, ಜನವರಿಯಲ್ಲಿ ನಡೆದ ಆಸ್ಟ್ರೇಲಿಯ ಓಪನ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದ ಕ್ವಿಟೋವಾ ಆವೆಮಣ್ಣಿನ ಅಂಗಣದಲ್ಲಿ ಪ್ರಶಸ್ತಿ ಜಯಿಸಿ ಮಿಂಚಿದ್ದಾರೆ.
ಜನವರಿಯಲ್ಲಿ ಸಿಡ್ನಿ ಇಂಟರ್‌ನ್ಯಾಶನಲ್ ಪ್ರಶಸ್ತಿ ಜಯಿಸಿರುವ ಕ್ವಿಟೋವಾ ಈ ವರ್ಷ ಎರಡನೇ ಪ್ರಶಸ್ತಿ ಜಯಿಸಿದ ಮೊದಲ ಆಟಗಾರ್ತಿಯಾಗಿದ್ದಾರೆ.