ಪ್ರಶಸ್ತಿ ನಿರೀಕ್ಷೆಯಲ್ಲಿ ಸೈನಾ ನೆಹ್ವಾಲ್
ಆಕ್ಲೆಂಡ್, ಎ.29: ಇತ್ತೀಚೆಗೆ ಕೊನೆಗೊಂಡ ಏಶ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿನ ಕ್ವಾರ್ಟರ್ ಫೈನಲ್ ಸೋಲಿನ ನಿರಾಸೆಯನ್ನು ಮರೆತು ಮಂಗಳವಾರದಿಂದ ಆರಂಭವಾಗಲಿರುವ ನ್ಯೂಝಿಲ್ಯಾಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ ಭಾರತದ ಖ್ಯಾತ ಆಟಗಾರ್ತಿ ಸೈನಾ ನೆಹ್ವಾಲ್.
ಹೈದರಾಬಾದ್‌ನ 29ರ ಹರೆಯದ ಆಟಗಾರ್ತಿ ಸೈನಾ ಈ ವರ್ಷ ಎರಡನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಅವರು ಚೀನಾದ ವಾಂಗ್ ಝಿಯಿ ಅವರನ್ನು ಎದುರಿಸಲಿದ್ದಾರೆ.
ವಿಶ್ವದ ನಂ.9ನೇ ಆಟಗಾರ್ತಿ ಸೈನಾ ಈ ವರ್ಷ ಇಂಡೋನೇಶ್ಯ ಮಾಸ್ಟರ್ಸ್ ಪ್ರಶಸ್ತಿ ಜಯಿಸಿರುವ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ. ಇದೀಗ ತನ್ನ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಏಶ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿನ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿರುವ ಭಾರತದ ಇನ್ನೋರ್ವ ಭರವಸೆಯ ಆಟಗಾರ್ತಿ ಪಿ.ವಿ.ಸಿಂಧು ಈ ಟೂರ್ನಮೆಂಟ್‌ನಲ್ಲಿ ಸ್ಪರ್ಧಿಸುವುದಿಲ್ಲ.
ಭಾರತದ ಅಷ್ಟೇನೂ ಪ್ರಸಿದ್ಧಿಯಲ್ಲಿಲ್ಲದ ಆಟಗಾರ್ತಿ ಅನುರಾ ಪ್ರಭುದೇಸಾಯಿ ಮಹಿಳೆಯರ ಸಿಂಗಲ್ಸ್‌ನ ತನ್ನ ಮೊದಲ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಲಿ ಕ್ಸುರುಯ್ ಸವಾಲು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಬಿ.ಸಾಯಿ ಪ್ರಣೀತ್(20ನೇ ರ್ಯಾಂಕಿನಲ್ಲಿದ್ದಾರೆ) ಹಾಗೂ ಎಚ್.ಎಸ್. ಪ್ರಣಯ್(21ನೇ ರ್ಯಾಂಕ್) ಶುಭಾಂಕರ್ ಡೇ ಅವರೊಂದಿಗೆ ಪ್ರಮುಖ ಸುತ್ತಿಗೆ ನೇರ ಪ್ರವೇಶ ಪಡೆದಿದ್ದಾರೆ.
ಅಜಯ್ ಜಯರಾಮ್, ಪಾರುಪಲ್ಲಿ ಕಶ್ಯಪ್ ಹಾಗೂ ಲಕ್ಷ ಸೇನ್ ಪ್ರಮುಖ ಸುತ್ತಿಗೆ ತೇರ್ಗಡೆಯಾಗಲು ಅರ್ಹತಾ ಸುತ್ತಿನಲ್ಲಿ ಸೆಣಸಾಡಬೇಕಾಗಿದೆ.
ಈ ವರ್ಷದ ಸ್ವಿಸ್ ಓಪನ್ ಫೈನಲ್‌ನಲ್ಲಿ ಚೀನಾದ ವಿಶ್ವದ ನಂ.2ನೇ ಆಟಗಾರ್ತಿ ಶಿ ಯೂಖಿ ವಿರುದ್ಧ ಸೋತಿರುವ ಸಾಯಿ ಪ್ರಣೀತ್ ಸಹ ಆಟಗಾರ ಶುಭಾಂಕರ್ ಎದುರು ಸೆಣಸುವುದರೊಂದಿಗೆ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಮತ್ತೊಂದೆಡೆ ಪ್ರಣಯ್ ಪುರುಷರ ಸಿಂಗಲ್ಸ್‌ನ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಗಾಪುರದ ಲೊಹ್ ಕೀನ್ ಯೀವ್‌ರನ್ನು ಎದುರಿಸಲಿದ್ದಾರೆ.
ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಹಾಗೂ ಬಿ.ಸುಮೀತ್ ರೆಡ್ಡಿ ಜೋಡಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಇಬ್ಬರು ಮೊದಲ ಸುತ್ತಿನಲ್ಲಿ ಕ್ವಾಲಿಫೈಯರ್ ಜೋಡಿಯನ್ನು ಎದುರಿಸಲಿದೆ.
ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್.ಸಿಕ್ಕಿ ರೆಡ್ಡಿ ಸೆಣಸಾಡಲಿದ್ದಾರೆ. ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಭಾರತದ ಯಾವೊಬ್ಬ ಸ್ಪರ್ಧಾಳು ಇಲ್ಲ.