×
Ad

ಸ್ಟಂಪ್ಸ್‌ಗೆ ಬ್ಯಾಟ್‌ನಿಂದ ಬಡಿದ ರೋಹಿತ್‌ಗೆ ದಂಡ

Update: 2019-04-29 23:54 IST

ಕೋಲ್ಕತಾ, ಎ.29: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರವಿವಾರ ನಡೆದ ಐಪಿಎಲ್ ಪಂದ್ಯದ ವೇಳೆ ಔಟಾದ ಸಿಟ್ಟಿನಲ್ಲಿ ಸ್ಟಂಪ್ಸ್‌ಗೆ ಬ್ಯಾಟಿನಿಂದ ಬಡಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಗೆ ಪಂದ್ಯಶುಲ್ಕದಲ್ಲಿ 15 ಶೇ. ದಂಡ ವಿಧಿಸಲಾಗಿದೆ.

ರವಿವಾರ ರಾತ್ರಿ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಉತ್ತಮ ಟಚ್‌ನಲ್ಲಿದ್ದ ರೋಹಿತ್ ಅವರು ಹ್ಯಾರಿ ಗುರ್ನೆ ಎಸೆದ ಬೌಲಿಂಗ್‌ನಲ್ಲಿ ಎಲ್ಬಿಡಬ್ಲು ತೀರ್ಪಿಗೆ ಒಳಗಾದರು. ನಾನ್‌ಸ್ಟ್ರೈಕ್‌ನಲ್ಲಿದ್ದ ರೋಹಿತ್ ಸ್ಟಂಪ್ಸ್‌ಗೆ ತನ್ನ ಬ್ಯಾಟ್‌ನಿಂದ ಬಡಿದು ತನ್ನ ನಿರಾಸೆ ಹೊರಹಾಕಿದರು. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್‌ನ ನೀತಿ ಸಂಹಿತೆಯನ್ನು ಉಲ್ಲಂಘಿಸಿದರು.

ಮುಂಬೈ ತಂಡ ಈ ಪಂದ್ಯವನ್ನು 34 ರನ್‌ಗಳಿಂದ ಸೋತಿದ್ದು ಆತಿಥೇಯ ಕೋಲ್ಕತಾ ತಂಡ ಸತತ ಆರು ಪಂದ್ಯಗಳ ಸೋಲಿನಿಂದ ಹೊರ ಬಂದಿತ್ತು.

ರೋಹಿತ್ ಐಪಿಎಲ್ ನೀತಿ ಸಂಹಿತೆ ಲೆವೆಲ್ 1 ಅಫೆನ್ಸ್ 2.2ನ್ನು ಉಲ್ಲಂಘಿಸಿದ್ದನ್ನು ಒಪ್ಪಿಕೊಂಡಿದ್ದಾರೆ. ಶಿಕ್ಷೆಯನ್ನು ಸ್ವೀಕರಿಸಿದ್ದಾರೆ ಎಂದು ಐಸಿಸಿ ತಿಳಿಸಿದೆ. ರೋಹಿತ್ ಎಲ್ಬಿಡಬ್ಲು ಬಲೆಗೆ ಬಿದ್ದ ತಕ್ಷಣ ಅಂಪೈರ್ ಹಿಂದೆ ಮುಂದೆ ನೋಡದೆ ಔಟ್ ತೀರ್ಪು ನೀಡಿದರು. ರೋಹಿತ್ ಡಿಆರ್‌ಎಸ್ ಮೊರೆ ಹೋದರೂ ಯಾವುದೇ ಪ್ರಯೋಜನವಾಗಲಿಲ್ಲ. ರೋಹಿತ್ ಈ ಹಿಂದೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಮುಂಬೈ ತಂಡ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿದ್ದಕ್ಕೆ 12 ಲಕ್ಷ ರೂ. ದಂಡ ಪಾವತಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News