ಪಂದ್ಯಾಟದ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ: ಬಿಸಿಸಿಐ
ಹೊಸದಿಲ್ಲಿ, ಎ.30: ರಾಂಚಿಯಲ್ಲಿ ನಡೆದ ಪೇಟಿಎಂ 23ರ ಕೆಳಹರೆಯದ ಮಹಿಳೆಯರ ಚಾಲೆಂಜರ್ಸ್ ಟ್ರೋಫಿ ಫೈನಲ್ ಪಂದ್ಯದೊಂದಿಗೆ 2018-19ನೇ ಸಾಲಿನ ಭಾರತದ ದೇಶೀಯ ಕ್ರಿಕೆಟ್ ಋತು ಸಮಾಪ್ತಿಯಾಗಿದ್ದು ಈ ಬಾರಿಯ ದೇಶೀಯ ಕ್ರಿಕೆಟ್ ಋತುವಿನಲ್ಲಿ 37 ತಂಡಗಳು ಒಟ್ಟು 2,024 ಪಂದ್ಯಗಳನ್ನು ಆಡಿದೆ.
2017-18ರ ಕ್ರಿಕೆಟ್ ಋತುವಿನಲ್ಲಿ 28 ತಂಡಗಳು ಒಟ್ಟು 1032 ಪಂದ್ಯಗಳನ್ನಾಡಿದ್ದು ಇದಕ್ಕೆ ಹೋಲಿಸಿದರೆ ಈ ಬಾರಿಯ ಕ್ರಿಕೆಟ್ ಋತುವಿನಲ್ಲಿ ಆಡಿರುವ ಪಂದ್ಯಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಮೇ 12ರಂದು ನಡೆಯಲಿರುವ ಐಪಿಎಲ್ ಟೂರ್ನಿ ಫೈನಲ್ ಪಂದ್ಯ ದೇಶೀಯ ಕ್ರಿಕೆಟ್ ಋತುವಿನ ಅಧಿಕೃತ ಅಂತಿಮ ಪಂದ್ಯವಾಗಿದೆ. ಈ ಬಾರಿಯ ಕ್ರಿಕೆಟ್ ಋತುವಿನಲ್ಲಿ 1,3015 ಆಟಗಾರರು ಆಡಲು ನೋಂದಾಯಿಸಿಕೊಂಡಿದ್ದು 6,471 ಆಟಗಾರರು ಆಟವಾಡಿದ್ದಾರೆ. ದೇಶದಾದ್ಯಂತ 100ಕ್ಕೂ ಹೆಚ್ಚು ನಗರಗಳಲ್ಲಿ ಪಂದ್ಯಾಟ ಆಯೋಜಿಸಲಾಗಿದೆ. 170 ವೀಡಿಯೊ ವಿಶ್ಲೇಷಕರು ಹಾಗೂ ಅಷ್ಟೇ ಸಂಖ್ಯೆಯ ಸ್ಕೋರರ್‌ಗಳ ಸೇವೆಯನ್ನು ಬಿಸಿಸಿಐ ಬಳಸಿಕೊಂಡಿದೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.