ಅಪರಾಧಿಗಳಿಗೆ ಶಿಕ್ಷೆ ಘೋಷಣೆ

Update: 2019-04-30 18:30 GMT

ಭಾಗ-26

ಅಂದು (10-2-1949)ಬೆಳಗ್ಗೆ 11:30 ಗಂಟೆಗೆ ನ್ಯಾಯಾಧೀಶರು ಈ ತೀರ್ಪನ್ನು ನ್ಯಾಯಾಲಯದಲ್ಲಿ ಘೋಷಿಸಿ: ‘‘ಈ ತೀರ್ಪಿನ ವಿರುದ್ಧ ಮೇಲ್ಮನವಿಯನ್ನು 15 ದಿನಗಳ ಒಳಗಾಗಿ ಸಲ್ಲಿಸಬಹುದು. ತೀರ್ಪಿನ ಯಥಾನಕಲು ಸಿದ್ಧವಾಗಿದೆ. ಅವುಗಳನ್ನು ಆರೋಪಿಗಳು ಪಡೆದುಕೊಳ್ಳಬಹುದು’’ ಎಂದು ಹೇಳಿದರು. ನ್ಯಾಯಾಲಯದಲ್ಲಿ ವಿಚಾರಣೆಯ ಕಾಲಕ್ಕೆ ನೆರವಾದ ಎಲ್ಲರಿಗೂ ಧನ್ಯವಾದ ಹೇಳಿದರು.

  ಹಾಗಾದರೆ ಸಾವರ್ಕರ್‌ರ ಪಾತ್ರವೇನು? ಇದೇ ನಮ್ಮ ಮುಂದಿರುವ ಮುಖ್ಯವಾದ ಪ್ರಶ್ನೆ ಈ ಪಿತೂರಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸಾಕ್ಷನುಡಿದು ಯಾರೊಬ್ಬರೂ ಅವರು ಪ್ರತ್ಯಕ್ಷವಾಗಿ ಆಗಲಿ ಪರೋಕ್ಷವಾಗಿ ಆಗಲಿ ಭಾಗಿಯಾಗಿದ್ದರೆಂದು ಹೇಳಿರಲಿಲ್ಲ. ಅವರ ವಿರುದ್ಧವಾಗಿದ್ದ ಸಾಕ್ಷ ಎಂದರೆ ಮೊದಲನೆಯದಾಗಿ ಜನವರಿ 15 ಮತ್ತು 17ರಂದು ನಾಥೂರಾಮ್ ಗೋಡ್ಸೆ, ನಾರಾಯಣ ಆಪ್ಟೆ, ಬಡ್ಗೆ, ಸಾವರ್ಕರ್‌ರ ಮನೆಗೆ ಹೋಗಿದ್ದರೆಂದೂ, ಅವರನ್ನು ಭೇಟಿಮಾಡಿ ಹೊರಬಂದಾಗ ಸಾವರ್ಕರ್‌ರು ಅವರನ್ನು ಕಳಿಸಿಕೊಡುವಾಗ ‘‘ಯಶಸ್ವಿಯಾಗಿ ಹಿಂದಿರುಗಿ ಬನ್ನಿ’’ಎಂದು ಆಶೀರ್ವದಿಸಿದರು ಎಂದೂ ಸಾಕ್ಷ ಬಂದಿತ್ತು ಹಾಗೂ ಸಾವರ್ಕರ್‌ರು: ‘ಗಾಂಧೀಜಿಯ ನೂರು ವರ್ಷ ತುಂಬಿ ಬಂದಿದೆ’ ಎಂದು ಹೇಳಿದರೆಂಬ ಇನ್ನೊಂದು ಮಾತು. ಈ ಸಾಕ್ಷವನ್ನು ಕುರಿತು ಸಾವರ್ಕರ್‌ರು ವಿಶ್ಲೇಷಣೆ ಮಾಡುತ್ತ: ‘‘ನನ್ನ ಮನೆಗೆ ಬಂದಿದ್ದರೆಂದು ನಂಬಿದರೂ ಕೂಡ ನನಗೆ ಗಾಂಧಿ ಹತ್ಯೆಯ ಸಂಗತಿ ಗೊತ್ತಿತ್ತೆಂದು ಹೇಗೆ ಹೇಳಲು ಸಾಧ್ಯ? ನಮ್ಮ ಮಧ್ಯೆ ಮಾತುಕತೆ ಆಯಿತೆಂಬುದನ್ನು ಯಾರು ಹೇಳಿದ್ದಾರೆ? ಇನ್ನು ನಾನು ‘ಯಶಸ್ವಿಯಾಗಿ ಹಿಂದಿರುಗಿ ಬನ್ನಿ’ ಎಂದು ಹೇಳಿದೆನೆಂಬ ಸಾಕ್ಷವನ್ನು ನಂಬಬಹುದೇ? ಆ ಮಾತು ಹೇಳುವವನು ಮಾಫಿ ಸಾಕ್ಷಿ ಬಡ್ಗೆ. ಅವನೇ ಆ ಮಾತನ್ನು ನನ್ನ ಬಾಯಿಂದ ಕೇಳಿದವನಲ್ಲ. ಆಪ್ಟೆ ಹೇಳಿದ್ದನ್ನು ಕೇಳಿದವನು. ಆ ಹೇಳಿಕೆ ಮಾತು(hearsay) ಮೊದಲು ಸಾಕ್ಷ ಸಂಹಿತೆಯ ಪ್ರಕಾರ ಅಂಗೀಕಾರಾರ್ಹವಲ್ಲ. ಅದು ಮಾಫಿ ಸಾಕ್ಷಿಯ ಬಾಯಿಂದ ಬಂದುದರಿಂದ ಅದನ್ನು ಸಮರ್ಥಿಸುವ ಸ್ವತಂತ್ರ ಸಾಕ್ಷ ಇಲ್ಲ...’’ಎಂಬುದಾಗಿ ವಾದಿಸಿದ್ದರು. ಅವರ ಈ ವಾದ ಬಹು ತೂಕವಾದದ್ದು ಎಂಬುದನ್ನು ನ್ಯಾಯಾಧೀಶ ಆತ್ಮಚರಣರು ಎತ್ತಿಹಿಡಿದರು. ಈ ಮಾತನ್ನು ನಂಬಿದ್ದೇ ಆದರೆ ಸಾವರ್ಕರ್‌ರು ಪಿತೂರಿಯಲ್ಲಿ ಭಾಗಿಯಾಗಿದ್ದರೆಂದೂ, ಪಿತೂರಿಯ ಫಲವಾಗಿಯೇ ಈ ಹೀನಕೃತ್ಯ ನಡೆಯಿತೆಂದೂ, ಕೊಲೆಗೆ ಪ್ರೋತ್ಸಾಹ ಪ್ರಚೋದನೆ ಕೊಟ್ಟರೆಂದೂ ತೀರ್ಮಾನಕ್ಕೆ ಬರಬೇಕಾಗುತ್ತಿತ್ತು. ಆದರೆ ಇಂತಹ ಘೋರ ಪರಿಣಾಮಕಾರಿ ನಿರ್ಧಾರವನ್ನು ಆ ಮಾಫಿ ಸಾಕ್ಷಿಯ ಕೇವಲ ಒಂದು ಹೇಳಿಕೆ ಮಾತನ್ನು ನಂಬಿ ಮಾಡುವುದು ಅಪಾಯಕಾರಿ ಎಂದು ತೀರ್ಮಾನಿಸಿದರು. ಆದ್ದರಿಂದ ಅವರು ಐ.ಪಿ.ಸಿ.ಸೆಕ್ಷನ್ 120ಬಿ ಪ್ರಕಾರ ಪಿತೂರಿಕಾರರಲ್ಲ. ಸೆಕ್ಷನ್ 109ರ ಪ್ರಕಾರ ಕೊಲೆಗೆ ಪ್ರೋತ್ಸಾಹ, ಪ್ರಚೋದನೆ ಮಾಡಿದವರಲ್ಲ.ತತ್ಪರಿಣಾಮವಾಗಿ ಸೆಕ್ಷನ್ 302ರ ಪ್ರಕಾರ ಕೊಲೆಯ ಅಪರಾಧ ಮಾಡಿಲ್ಲ ಎಂಬುದಾಗಿ ತೀರ್ಮಾನಿಸಿ ಸಂಶಯದ ಸೌಲಭ್ಯ (Benefit of doubt) ಕೊಟ್ಟು ಖುಲಾಸೆ ಮಾಡಿದರು. ಒಂದು ವೇಳೆ ನಾನೇ ಆ ವಿಚಾರಣೆ ಮಾಡಿದ ನ್ಯಾಯಾಧೀಶನಾಗಿದ್ದಿದ್ದರೆ ಅಥವಾ ಬೇರೆ ಯಾರಾದರೂ ಆಗಿದ್ದರೂ ನ್ಯಾಯಾಲಯದ ಮುಂದಿದ್ದ ಸಾಕ್ಷಾಧಾರದಿಂದ ಆತ್ಮಚರಣರು ಯಾವ ನಿರ್ಣಯಕ್ಕೆ ಬಂದರೋ ಅದಕ್ಕಿಂತ ಬೇರೆ ನಿರ್ಣಯಕ್ಕೆ ಬರುವುದು ಸಾಧ್ಯವೇ ಇರಲಿಲ್ಲ.

ನ್ಯಾಯಾಲಯ ರೂಪಿಸಿದ್ದ ಮೊದಲನೆಯ ದೋಷಾರೋಪಣೆ -ಈ ಎಂಟೂ ಆರೋಪಿಗಳು ಐ.ಸಿ.ಸಿ.ಸೆಕ್ಷನ್ 120 ಬಿ, ಸೆಕ್ಷನ್ 109 ಮತ್ತು ಸೆಕ್ಷನ್ 302ರ ಪ್ರಕಾರ ಆರೋಪ ಸಿದ್ಧ (ಋಜುವಾತು)ಆಗಿದೆಯೇ? ಸಾವರ್ಕರ್‌ರ ಹೊರತಾಗಿ ಉಳಿದ ಏಳು ಜನ ಆರೋಪಿಗಳು ಆ ಅಪರಾಧಗಳನ್ನು ಮಾಡಿದ್ದರೆಂಬುದಾಗಿ ತೀರ್ಪುಕೊಟ್ಟರು. ಹಾಗಾದರೆ ಅವರಿಗೆ ಯಾವ ಶಿಕ್ಷೆ? ಒಂದನೇ ಆರೋಪಿ ನಾಥೂರಾಮ್ ಗೋಡ್ಸೆ ಮತ್ತು ಎರಡನೇ ಆರೋಪಿ ನಾರಾಯಣ ಆಪ್ಟೆಗೆ ಮರಣದಂಡನೆ. ಮೂರನೇ ಆರೋಪಿ ರಾಮಕೃಷ್ಣ ಕರ್ಕರೆ, ನಾಲ್ಕನೇ ಆರೋಪಿ ಮದನ್‌ಲಾಲ್ ಪಹ್ವಾ, ಐದನೇ ಆರೋಪಿ ಶಂಕರ ಕ್ರಿಸ್ಟಯ್ಯ, ಆರನೇ ಆರೋಪಿ ಗೋಪಾಲ ಗೋಡ್ಸೆ, ಏಳನೇ ಆರೋಪಿ ಡಾ.ಪರಚುರೆ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಶಂಕರ ಕ್ರಿಸ್ಟಯ್ಯನಿಗೆ ಜೀವಾವಧಿ ಶಿಕ್ಷೆ ವಿಧಿಸಿದರೂ ಸರಕಾರ ಶಿಕ್ಷೆಯನ್ನು ಏಳು ವರ್ಷ ಸಶ್ರಮ ಶಿಕ್ಷೆಗೆ ಇಳಿಸಬೇಕೆಂದು ಶಿಫಾರಸು ಮಾಡಿದರು.

ಆರೋಪಿಗಳ ಮೇಲಿದ್ದ ಇನ್ನೆರಡು ಆರೋಪಗಳು -ಆಯುಧಗಳ ಕಾಯ್ದೆ(Arms Act) ಕೆಳಗೆ ಅಕ್ರಮ ಆಯುಧಗಳನ್ನು ಹೊಂದಿದ್ದರೆಂಬುವುದು ಒಂದು. ಸ್ಫೋಟಕ ವಸ್ತುಗಳ ಕಾಯ್ದೆ (Explosives Act) ಕೆಳಗೆ ಸ್ಫೋಟಕ ಸಾಮಗ್ರಿಯನ್ನು ಬಳಸಿದರೆಂಬುದೂ. ಈ ಆರೋಪಗಳೂ ಸಿದ್ಧವಾಗಿವೆಯೆಂದು ತೀಮಾನಿಸಿ ತಕ್ಕ ಶಿಕ್ಷೆ ವಿಧಿಸಿದರು. ಬಡ್ಗೆಯನ್ನು ಬಿಡುಗಡೆ ಮಾಡಿದರು.

ಹತ್ಯೆಗೆ ಉಪಯೋಗಿಸಿದ ರಿವಾಲ್ವರ್, ಅದರಿಂದ ಹಾರಿಸಿದ ಗುಂಡುಗಳ ತುಂಡುಗಳು ಕೊಲೆಗೆ ಸಂಬಂಧಿಸಿದ ಇತರ ಸಾಮಗ್ರಿಗಳನ್ನು ನಾಶಪಡಿಸದೆ ಕಾದಿರಿಸಬೇಕೆಂದು ಸೂಚಿಸಿದರು.ಅವುಗಳನ್ನು ಬಿರ್ಲಾ ಗೃಹದಲ್ಲಿ ಇಂದಿಗೂ ಸುರಕ್ಷಿತವಾಗಿ ಇಡಲಾಗಿದೆ.

ಅಂದು (10-2-1949)ಬೆಳಗ್ಗೆ 11:30 ಗಂಟೆಗೆ ನ್ಯಾಯಾಧೀಶರು ಈ ತೀರ್ಪನ್ನು ನ್ಯಾಯಾಲಯದಲ್ಲಿ ಘೋಷಿಸಿ: ‘‘ಈ ತೀರ್ಪಿನ ವಿರುದ್ಧ ಮೇಲ್ಮನವಿಯನ್ನು 15 ದಿನಗಳ ಒಳಗಾಗಿ ಸಲ್ಲಿಸಬಹುದು. ತೀರ್ಪಿನ ಯಥಾನಕಲು ಸಿದ್ಧವಾಗಿದೆ. ಅವುಗಳನ್ನು ಆರೋಪಿಗಳು ಪಡೆದುಕೊಳ್ಳಬಹುದು’’ಎಂದು ಹೇಳಿದರು. ನ್ಯಾಯಾಲಯದಲ್ಲಿ ವಿಚಾರಣೆಯ ಕಾಲಕ್ಕೆ ನೆರವಾದ ಎಲ್ಲರಿಗೂ ಧನ್ಯವಾದ ಹೇಳಿದರು.

 ಆರೋಪಿಗಳನ್ನು ಕಟಕಟೆಯಿಂದ ಹೊರಗೆ ಕರೆದೊಯ್ಯುವಾಗ ಅವರೆಲ್ಲ ‘‘ಹಿಂದೂ ಧರ್ಮ ಕೀ ಜೈ’’, ‘‘ತೋಡ್ ಕೆ ರಹೇಂಗೆ ಪಾಕಿಸ್ತಾನ್’’, ‘‘ಹಿಂದೂ ಹಿಂದಿ ಹಿಂದುಸ್ಥಾನ್’’ ಎಂದು ಜಯಕಾರ ಘೋಷಣೆ ಕೂಗಿದರು. (‘‘ನಾವು ಪಾಕಿಸ್ತಾನವನ್ನು ತುಂಡರಿಸುತ್ತೇವೆ.’’ ‘‘ಭಾರತ ಹಿಂದಿ ಹಿಂದೂಗಳಿಗೆ ಸೇರಿದ್ದು’’.)

ನ್ಯಾಯಾಧೀಶ ಆತ್ಮಚರಣರು ತಮ್ಮ ತೀರ್ಪಿನಲ್ಲಿ ತಪಾಸಣೆ ಮಾಡಿದ ಪೊಲೀಸ್ ಅಧಿಕಾರಿಗಳ ಬಗ್ಗೆ ಬಹು ಕಟುವಾಗಿ ಖಂಡಿಸಿದರು. ಜನವರಿ 20-30ರ ಕಾಲಾವಧಿಯಲ್ಲಿ ಮದನ್‌ಲಾಲ್‌ನ ಹೇಳಿಕೆಯಿಂದ ದೊರೆತ ಮಾಹಿತಿಯ ಆಧಾರದ ಮೇಲೆ, ಡಾ.ಜೆ.ಸಿ.ಜೈನರು ಮೊರಾರ್ಜಿ ದೇಸಾಯಿ ಅವರಿಗೆ ಕೊಟ್ಟ ಸುದ್ದಿಯ ಸುಳಿವು ಹಿಡಿದು ಜಾಗ್ರತೆ ಕಾರ್ಯತತ್ಪರರಾಗಿದ್ದಿದ್ದರೆ ಈ ದುರಂತವನ್ನು ತಡೆಹಿಡಿಯಲು ಸಾಧ್ಯವಾಗುತ್ತಿತ್ತು. ಪೊಲೀಸರ ಈ ಕರ್ತವ್ಯಲೋಪ ಕ್ರಿಮಿನಲ್ ಅಚಾತುರ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಸರಕಾರ ಯಾರ ಮೇಲೂ ಕ್ರಮ ಜರುಗಿಸಲಿಲ್ಲ. ಅವರು ನ್ಯಾಯಪೀಠದಿಂದ ಮೇಲೆದ್ದು ನ್ಯಾಯಾಲಯದಿಂದ ನಿರ್ಗಮಿಸಿದರು.

ಕೇಂದ್ರ ಸರಕಾರ ಮುನ್ನೆಚ್ಚರಿಕೆಯ ಕ್ರಮವಾಗಿ ಸಾವರ್ಕರ್ ಇನ್ನು ಮೂರು ತಿಂಗಳು ದಿಲ್ಲಿ ನಗರದೊಳಗೆ ಪ್ರವೇಶಿಸಬಾರದೆಂದು ನಿಷೇಧಾಜ್ಞೆ ಜಾರಿಮಾಡಿದರು.ಅವರನ್ನು ಮುಂಬೈಗೆ ಕರೆತಂದು ಅಲ್ಲಿಂದ ಅವರು ಹೊರಗೆ ಹೋಗಕೂಡದೆಂದು ನಿಷೇಧಾಜ್ಞೆ ಜಾರಿಮಾಡಿದರು.

(ಶನಿವಾರದ ಸಂಚಿಕೆಗೆ ಮುಂದುವರಿಯುವುದು)

Writer - ಕೋ. ಚೆನ್ನಬಸಪ್ಪ

contributor

Editor - ಕೋ. ಚೆನ್ನಬಸಪ್ಪ

contributor

Similar News