ಪ್ರಧಾನಿಯೇ ವಂದೇ ಮಾತರಂ ಘೋಷಣೆ ಕೂಗುವಾಗಲೂ ಸುಮ್ಮನೆ ಕುಳಿತ ನಿತೀಶ್ ಕುಮಾರ್ !

Update: 2019-05-01 05:50 GMT

ಹೊಸದಿಲ್ಲಿ, ಮೇ 1 : ಬಿಹಾರದ ದರ್ಭಂಗದಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪ್ರಧಾನಿ ಹಾಗು ವೇದಿಕೆಯಲ್ಲಿದ್ದ ಎಲ್ಲ ನಾಯಕರೂ ವಂದೇ ಮಾತರಂ ಘೋಷಣೆ ಕೂಗುತ್ತಿದ್ದಾಗ ಎನ್ ಡಿ ಎ ಮೈತ್ರಿಕೂಟದ ಪ್ರಮುಖ ಪಕ್ಷ ಜೆಡಿಯು ನಾಯಕ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸುಮ್ಮನೆ ಕುಳಿತುಕೊಂಡ ವೀಡಿಯೊ ವೈರಲ್ ಆಗಿದೆ.

ವಂದೇ ಮಾತರಂ ಹೆಸರಲ್ಲಿ ಅಲ್ಪಸಂಖ್ಯಾತರ ಮೇಲೆ ಹರಿಹಾಯುವ ಒಂದೇ ಒಂದು ಅವಕಾಶ ಕೈಬಿಡದ ಬಿಜೆಪಿ ಹಾಗು ಸಂಘ ಪರಿವಾರ ನಿತೀಶ್ ಕುಮಾರ್ ಅವರು ಖುದ್ದು ಪ್ರಧಾನಿಯೇ ವಂದೇ ಮಾತರಂ ಘೋಷಣೆ ಕೂಗುತ್ತಿರುವಾಗ ತನಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಮುಗುಮ್ಮಾಗಿ ಕುಳಿತಿದ್ದ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ ಎಂದು ವ್ಯಾಪಕವಾಗಿ ಪ್ರಶ್ನಿಸಲಾಗುತ್ತಿದೆ.

ಬಿಜೆಪಿ, ಜೆಡಿಯು ಜಂಟಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಷಣ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಭಾರತ್ ಮಾತಾಕಿ ಜೈ ಎಂದು ಬಳಿಕ ವಂದೇ ಮಾತರಂ ಎಂದು ಘೋಷಣೆ ಕೂಗುತ್ತಾರೆ. ಬಳಿಕ ಹಲವಾರು ಬಾರಿ ಪ್ರಧಾನಿ ಮುಷ್ಠಿ ಬಿಗಿಹಿಡಿದು ವಂದೇ ಎಂದು ಘೋಷಣೆ ಕೂಗಿದಾಗ ಎಲ್ಲರೂ ಮಾತರಂ ಎಂದು ಕೂಗುತ್ತಿದ್ದರು. ಆಗ ವೇದಿಕೆಯಲ್ಲಿದ್ದ ಎಲ್ಲ ನಾಯಕರೂ ಅತ್ಯುತ್ಸಾಹದಿಂದ ಪ್ರಧಾನಿ ಜೊತೆ ಮುಷ್ಠಿ ಎತ್ತಿ ಹಿಡಿದು ವಂದೇ ಮಾತರಂ ಘೋಷಣೆಗೆ ಧ್ವನಿಗೂಡಿಸುತ್ತಾರೆ. ಬಿಜೆಪಿ ನಾಯಕರು ಮಾತ್ರವಲ್ಲದೆ ವೇದಿಕೆಯಲ್ಲಿದ್ದ ಎನ್ ಡಿ ಎ ಮಿತ್ರಪಕ್ಷ ಲೋಕಜನಶಕ್ತಿ ಪಕ್ಷದ ನಾಯಕ ರಾಮ್ ವಿಲಾಸ್ ಪಾಸ್ವಾನ್ ಕೂಡ ಇದಕ್ಕೆ ಧ್ವನಿಗೂಡಿಸುತ್ತಾರೆ. ಆದರೆ ಬಿಹಾರ ಮುಖ್ಯಮಂತ್ರಿ ಹಾಗು ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ವೇದಿಕೆಯಲ್ಲಿದ್ದರೂ ಸುಮ್ಮನೆ ಕುಳಿತುಕೊಳ್ಳುತ್ತಾರೆ. ಕೈ ಎತ್ತುವುದೂ ಇಲ್ಲ, ಘೋಷಣೆಗೆ ಧ್ವನಿಗೂಡಿಸುವುದೂ ಇಲ್ಲ. ಕೊನೆಗೆ ಪ್ರಧಾನಿ ಅಲ್ಲಿಂದ ಹೊರಡುವಾಗ ಎದ್ದು ನಿಲ್ಲುವ ಅವರು ಪ್ರಧಾನಿಗೆ ನಮಸ್ಕರಿಸುತ್ತಾರೆ ಅಷ್ಟೇ.

ವಂದೇ ಮಾತರಂ ಘೋಷಣೆ ಕೂಗುವುದು, ಅದನ್ನು ಹಾಡುವುದು ದೇಶಭಕ್ತಿಯ ಸಂಕೇತ, ಅದನ್ನು ಹಾಡದವರು, ಘೋಷಣೆ ಕೂಗದವರು ಭಾರತದಲ್ಲಿ ಇರಲೇಬಾರದು ಎಂದು ಬಿಜೆಪಿ, ಸಂಘ ಪರಿವಾರದ ನಾಯಕರು ಅದೆಷ್ಟೋ ಬಾರಿ ಹೇಳಿದ್ದಾರೆ. ಅದರ ಹೆಸರಲ್ಲಿ ಅದೆಷ್ಟೋ ಗಲಾಟೆ, ಗಲಭೆಗಳಾಗಿವೆ. ಆದರೆ ತಮ್ಮ ಮೈತ್ರಿಕೂಟದ ಅತ್ಯಂತ ಪ್ರಮುಖ ಪಾಲುದಾರ ನಾಯಕ ಪ್ರಧಾನಿ ಇದ್ದ ವೇದಿಕೆಯಲ್ಲೇ, ಪ್ರಧಾನಿಯೇ ಸ್ವತಃ  ವಂದೇ ಮಾತರಂ ಘೋಷಣೆ ಕೂಗುತ್ತಿರುವಾಗ ಅದಕ್ಕೆ ಕಿಮ್ಮತ್ತಿನ ಬೆಲೆ ನೀಡದೆ ಸುಮ್ಮನಿದ್ದ ಬಗ್ಗೆ ಯಾವುದೇ ಬಿಜೆಪಿ ನಾಯಕರು ಈವರೆಗೆ ತಕರಾರು ಕೂಡ ಎತ್ತದೇ ಇರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ಬಿಜೆಪಿಗೆ ವಂದೇ ಮಾತರಂ ಗಿಂತ ಮುಖ್ಯವೇ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದೆ.

ಈ ಬಗ್ಗೆ ಪ್ರಶ್ನಿಸಿರುವ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಒಂದು ವೇಳೆ ಅಝಮ್ ಖಾನ್ ಈ ರೀತಿ ಮಾಡಿದ್ದರೆ ಬಿಜೆಪಿಯ ಪ್ರತಿಕ್ರಿಯೆ ಹೇಗಿರುತ್ತಿತ್ತು ಎಂದು ಕೇಳಿದ್ದಾರೆ . 

ಕಾರ್ಯಕ್ರಮದ ವೀಡಿಯೊ ಇಲ್ಲಿದೆ

ಕೃಪೆ: ndtv

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News