ಕಪಿಲ್ ಸಿಬಲ್ ಹೇಳುತ್ತಿರುವ 'ಸ್ಪೋಟಕ ನೋಟು ಹಗರಣ' ಠುಸ್ ಪಟಾಕಿಯಾಗಿದ್ದೇಕೆ ?

Update: 2019-05-02 06:57 GMT

ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಸರ್ವಪ್ರಯತ್ನ ನಡೆಸುತ್ತಿರುವ ಬಿಜೆಪಿ ಮನೆಮನೆಗೆ ತೆರಳಿ ತನ್ನ ಪರ ಜನಾಭಿಪ್ರಾಯ ರೂಪಿಸಲು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದರೆ ಕಾಂಗ್ರೆಸ್ ನ ರಣತಂತ್ರ ತೀರಾ ವಿಭಿನ್ನವಾಗಿರುವಂತೆ ಕಾಣುತ್ತಿದೆ. ತಳಮಟ್ಟದಲ್ಲಿ ಜನರನ್ನು ತಲುಪುವಲ್ಲಿ ಬಿಜೆಪಿಯ ಸಂಘಟನೆಯನ್ನು ಮೀರಿಸಲು ಸಾಧ್ಯವಿಲ್ಲದ ಕಾಂಗ್ರೆಸ್ ಮೇಲ್ಮಟ್ಟದಲ್ಲೇ ಬಿಜೆಪಿ ವಿರುದ್ಧ ಜನರಿಗೆ ಜಾಗೃತಿ ಮೂಡಿಸಲು ಶ್ರಮಿಸುತ್ತಿದೆ. ಆದರೆ ಆ ನಿಟ್ಟಿನಲ್ಲೂ ಅದು ಎಷ್ಟು ಯಶಸ್ವಿಯಾಗಿದೆ ಎಂಬುದು ಮಾತ್ರ ಈಗ ಚರ್ಚೆಯ ವಿಷಯವಾಗಿದೆ. 

ಇದಕ್ಕೆ ಕಾರಣ ರಾಜಧಾನಿ ದೆಹಲಿಯಲ್ಲಿ ಇತ್ತೀಚಿಗೆ ಕಾಂಗ್ರೆಸ್ ನಾಯಕರು ಏರ್ಪಡಿಸುತ್ತಿರುವ ಪತ್ರಿಕಾ ಗೋಷ್ಠಿಗಳು. ಬಹಳ ದೊಡ್ಡ ನಿರೀಕ್ಷೆ ಹುಟ್ಟಿಸಿ ನಡೆಯುವ ಈ ಪತ್ರಿಕಾಗೋಷ್ಠಿಗಳಲ್ಲಿ ಹೆಚ್ಚಿನವು ಕೊನೆಗೆ ಠುಸ್ ಪಟಾಕಿಯಾಗುತ್ತಿರುವುದು ಪಕ್ಷದ ಪಾಲಿಗೆ ಒಳ್ಳೆಯ ಸುದ್ದಿಯಲ್ಲ. ಆದರೆ ಹೀಗಾಗಲು ಪಕ್ಷವೇ ಕಾರಣವಾಗುತ್ತಿರುವುದು ಮಾತ್ರ ಕಟು ಸತ್ಯ. 

ಎರಡು ವಾರಗಳ ಹಿಂದೆ ಪಕ್ಷದ ಹಿರಿಯ ಮುಖಂಡ ಕಪಿಲ್ ಸಿಬಲ್ ಒಂದು 'ಸ್ಪೋಟಕ ' ಪತ್ರಿಕಾಗೋಷ್ಠಿ ನಡೆಸಿದರು. ಎನ್ ಡಿಟಿವಿ ಆ ಪತ್ರಿಕಾ ಗೋಷ್ಠಿಯನ್ನು ನೇರ ಪ್ರಸಾರ ಮಾಡಿತು. ಆದರೆ  ಎನ್ ಡಿಟಿವಿ ಅರ್ಧದಲ್ಲೇ ಆ 'ಸ್ಪೋಟಕ' ಗೋಷ್ಠಿಯ ನೇರಪ್ರಸಾರವನ್ನು ನಿಲ್ಲಿಸಿಬಿಟ್ಟಿತು. ಕಾರಣ ... 

ಹೀಗಾಗಲು ಹಲವು ಕಾರಣ ಗಳಿವೆ. 

 ಆ ಪತ್ರಿಕಾ ಗೋಷ್ಠಿ ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿದೆ ಎನ್ನಲಾದ ವಿಡಿಯೋಗಳ ಬಗ್ಗೆಯಾಗಿತ್ತು. ಒಂದು ವಿಡಿಯೋದಲ್ಲಿ ರಾ ಅಧಿಕಾರಿ ಎಂದು ಹೇಳಲಾದ ರಾಹುಲ್ ರತಾರೆಕರ್ ಎಂಬಾತ ನೋಟು ರದ್ದತಿ ಸಂದರ್ಭ ಹಳೆ ನೋಟು ಬದಲಾಯಿಸುವ ದಂಧೆಯಲ್ಲಿ ಅಮಿತ್ ಷಾ ಸಹಿತ ಬಿಜೆಪಿ ಪ್ರಮುಖ ನಾಯಕರು ಭಾಗಿಯಾಗಿದ್ದರು ಎಂದು ಹೇಳುತ್ತಿದ್ದ. ಇದು ಪ್ರಧಾನಿ ಕಚೇರಿವರೆಗೂ ಇದ್ದು ಇದರಲ್ಲಿ ಬಿಜೆಪಿ ನಾಯಕರಿಗೆ ದೊಡ್ಡ ಲಂಚ ಸಿಗುತ್ತಿತ್ತು ಎಂದು ಆತ ಹೇಳುತ್ತಾನೆ.  

 ಇನ್ನೊಂದು ವಿಡಿಯೋದಲ್ಲಿ ಬಾಕ್ಸು ಗಟ್ಟಲೆ ಹಳೆ ನೋಟುಗಳನ್ನು ಹೊಸ ಎರಡು ಸಾವಿರ ರೂ ನೋಟುಗಳಿಗೆ ಬದಲಾಯಿಸುವುದನ್ನು ತೋರಿಸಲಾಗುತ್ತದೆ. ಇದಕ್ಕಾಗಿ ರಿಲಯನ್ಸ್ ಜಿಯೋ ಡಾಟಾಬೇಸ್ ಬಳಸಲಾಗಿತ್ತು ಹಾಗು ರಿಸರ್ವ್ ಬ್ಯಾಂಕ್ ನೊಂದಿಗೆ ನೋಟು ಬದಲಾವಣೆಯನ್ನು ಮಾಡಿಸಲು ವಿವಿಧ ಇಲಾಖೆಗಳಿಂದ 26 ಮಂದಿಯನ್ನು ನೇಮಿಸಲಾಗಿತ್ತು ಇತ್ಯಾದಿ 'ಸ್ಪೋಟಕ ' ಮಾಹಿತಿಗಳನ್ನು ಹೇಳುತ್ತಾನೆ. ಉರ್ಜಿತ್ ಪಟೇಲ್ ಸಹಿ ಇರುವ ಹೊಸ ನೋಟುಗಳನ್ನು ಆರು ತಿಂಗಳ ಹಿಂದೆಯೇ ಮುದ್ರಿಸಲಾಗಿತ್ತು ಎಂದೂ ಆತ ಹೇಳುತ್ತಾನೆ. ಆದರೆ... 

ಈ ವರ್ಷಾರಂಭದಲ್ಲಿ ಲಂಡನ್ ನಲ್ಲಿ ನಡೆದ ಒಂದು ಪತ್ರಿಕಾಗೋಷ್ಠಿ ನಿಮಗೆ ನೆನಪಿದೆಯೇ .. ಅಲ್ಲಿ ಸಯ್ಯದ್ ಶುಜಾ ಎಂಬಾತ ತನ್ನ ಮುಖ ಮುಚ್ಚಿಕೊಂಡು ಇದೇ ರೀತಿಯ ಇನ್ನೊಂದು 'ಸ್ಪೋಟಕ' ಮಾಹಿತಿ ಬಹಿರಂಗಪಡಿಸಿದ್ದ. 2014 ರ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಮತಯಂತ್ರಗಳನ್ನು ಹ್ಯಾಕ್ ಮಾಡಲಾಗಿತ್ತು ಎಂದು ಹೇಳಿದ ಶುಜಾ ಅದಕ್ಕಾಗಿ ನನ್ನ ತಂಡವನ್ನು ನೇಮಿಸಲಾಗಿತ್ತು, ಬಳಿಕ ನನ್ನ ಇಡೀ ತಂಡವನ್ನು ಕೊಲೆ ಮಾಡಲಾಯಿತು. ನಾನು ಮಾತ್ರ ಬದುಕುಳಿದೆ ಎಂದು ಹೇಳಿದ . ಆದರೆ ಆತನ 'ಸ್ಪೋಟಕ ' ಖುಲಾಸೆಗೂ ಆತ ಒದಗಿಸುತ್ತಿರುವ ಸಾಕ್ಷ್ಯಗಳಿಗೂ ತಾಳೆಯಾಗುತ್ತಿರಲಿಲ್ಲ. ಆಗಲೂ ಆತನ ಪಕ್ಕದಲ್ಲಿ ಕಪಿಲ್ ಸಿಬಲ್ ಇದ್ದರು. ಈಗಲೂ ಇದ್ದಾರೆ. ಆದರೆ ಅವರು ಒದಗಿಸುತ್ತಿರುವ ಸಾಕ್ಷ್ಯಗಳಲ್ಲಿ ಅಷ್ಟು ದೊಡ್ಡ ಖುಲಾಸೆಗಳನ್ನು ಸಮರ್ಥಿಸಿಕೊಳ್ಳುವ ಸಾಮರ್ಥ್ಯ ಮಾತ್ರ ಕಾಣುತ್ತಿಲ್ಲ . 

ಈ ವರ್ಷದ ಮಾರ್ಚ್ ನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಇದೇ ಸಿಬಲ್ ಅವರು ಮಾತಾಡಿದ ಇನ್ನೊಂದು ಪತ್ರಿಕಾಗೋಷ್ಠಿ ನಡೆಯಿತು. ಅದರಲ್ಲಿ ಆರ್ಜೆಡಿ , ಜೆಎಂಎಂ , ಎಲ್ಜೆಡಿ ಇತ್ಯಾದಿ ಪಕ್ಷಗಳೂ ಭಾಗವಹಿಸಿದ್ದವು. Tricolour News Network (TNN) ಎಂಬ ವೆಬ್ ಸೈಟ್ ಒಂದರಲ್ಲಿ ಬಂದಿದ್ದ ಕುಟುಕು ಕಾರ್ಯಾಚರಣೆಯ  ವಿಡಿಯೋಗಳ ಆಧಾರದಲ್ಲಿ  ನೋಟು ರದ್ದತಿ ದೊಡ್ಡ ಹಗರಣ ಎಂದು ಈ ಪತ್ರಿಕಾಗೋಷ್ಠಿಯಲ್ಲಿ ಹೇಳಲಾಯಿತು.  ಆದರೆ ಈ ವೆಬ್ ಸೈಟ್ ನ ವಿಶ್ವಾಸಾರ್ಹತೆ ಏನು ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಆ ಕುಟುಕು ಕಾರ್ಯಾಚರಣೆ ನಡೆಸಿದ್ದು ಯಾರು, ಆ ವೆಬ್ ಸೈಟ್ ಯಾರದ್ದು, ಆ ಕಾರ್ಯಾಚರಣೆ ಎಷ್ಟು ವಿಶ್ವಾಸಾರ್ಹ ಎಂಬುದಕ್ಕೆ ಈವರೆಗೂ ಉತ್ತರ ಸಿಕ್ಕಿಲ್ಲ. 

ಸಾಲದ್ದಕ್ಕೆ ವಿಡಿಯೋ ಜೊತೆ ಈ ವಿಡಿಯೋಗೆ TNN ಜವಾಬ್ದಾರಿಯಲ್ಲ ಎಂಬ ಒಕ್ಕಣೆ ಬೇರೆ ಇತ್ತು. ಪತ್ರಿಕಾಗೋಷ್ಠಿ ನಡೆಸಿದ ಕಪಿಲ್ ಸಿಬಲ್ ಕೂಡ ವಿಡಿಯೋದ ಜವಾಬ್ದಾರಿ ಹೊರಲು ಸಿದ್ಧರಿರಲಿಲ್ಲ. ವಿಡಿಯೋ ಸಾರ್ವಜನಿಕವಾಗಿ ಲಭ್ಯವಿದೆ. ಯಾರು ಬೇಕಾದರೂ ನೋಡಬಹುದು ಎಂದು ಹೇಳಿ ಜಾರಿಕೊಂಡರು. 

ಎಪ್ರಿಲ್ 27 ರಂದು ಕಪಿಲ್ ಸಿಬಲ್ ಇನ್ನೊಂದು ಪತ್ರಿಕಾ ಗೋಷ್ಠಿ ಕರೆದಿದ್ದರು. ಈ ಬಾರಿ ಅವರ ಜೊತೆ ಬಾಂಬೆ ಹೈಕೋರ್ಟ್ ನ ಮಾಜಿ ನ್ಯಾಯಾಧೀಶ ಅಭಯ್ ತಿಪ್ಸೆ ಕೂಡ ಇದ್ದರು. ಈ ಪತ್ರಿಕಾ ಗೋಷ್ಠಿಯಲ್ಲಿ ಸಿಬಲ್ ಈ ಹಿಂದೆ ತಾನು ಬಹಿರಂಗಪಡಿಸಿದ್ದ ' ಸ್ಪೋಟಕ ಕರೆನ್ಸಿ ವಿನಿಮಯ ಹಗರಣ' ದ ಕುರಿತು ಮಾತನಾಡಿ ಅದರಲ್ಲಿ ಭಾಗಿಯಾಗಿದ್ದ ಸರಕಾರಿ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಅವರೆಲ್ಲಿದ್ದಾರೆ ಎಂದು ಕೇಂದ್ರ ಸರಕಾರ ಹೇಳಬೇಕಾಗಿದೆ ಎಂದು ಆಗ್ರಹಿಸಿದರು. ಆದರೆ ಈ ಪತ್ರಿಕಾಗೋಷ್ಠಿ ಕೂಡ ಅವರ ಈ ಹಿಂದಿನ ಪತ್ರಿಕಾ ಗೋಷ್ಟಿಗಳಂತೆಯೇ ಯಾವುದೇ ಪ್ರಮುಖ ಮಾಧ್ಯಮಗಳಲ್ಲಿ ಸುದ್ದಿಯಾಗಲೇ ಇಲ್ಲ. ಕಾರಣ .. 

ದೇಶದ ಅತ್ಯಂತ ಹಿರಿಯ ಹಾಗು ಅಷ್ಟೇ ದುಬಾರಿ ನ್ಯಾಯವಾದಿಗಳಲ್ಲಿ ಒಬ್ಬರಾಗಿರುವ  ಕಪಿಲ್ ಸಿಬಲ್ ತಾನು ಬಹಿರಂಗಪಡಿಸುತ್ತಿದ್ದೇನೆ ಎಂದು ಹೇಳಿ ತೋರಿಸುತ್ತಿರುವ ವಿಡಿಯೋ ಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಒತ್ತರಿಸುತ್ತಿಲ್ಲ. ಈ ವಿಡಿಯೋ ಗಳ ಮೂಲ ಕೇಳಿದರೆ ಯೂಟ್ಯೂಬ್ ನಲ್ಲಿದೆ, ನೋಡಿ ಎನ್ನುತ್ತಾರೆ ! ಯಾವುದೋ ವೆಬ್ ಸೈಟ್ ಹೆಸರು ಹೇಳುತ್ತಾರೆ. ಆದರೆ ಆ ವೆಬ್ ಸೈಟ್ ಎಷ್ಟು ವಿಶ್ವಾಸಾರ್ಹ ಎಂದು ಕೇಳಿದರೆ ಅದು ನಿಮ್ಮ ಕೆಲಸ ಎನ್ನುತ್ತಾರೆ. ತಾನು ಬಹಿರಂಗಪಡಿಸುತ್ತಿರುವ 'ಸ್ಪೋಟಕ ಖುಲಾಸೆಗಳ'ನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿಬಲ್ ಸಿದ್ಧರಿಲ್ಲ. ಕೇಳಿದರೆ ಈಗ ನ್ಯಾಯಾಲಯಗಳು ಆಡಳಿತ ಪಕ್ಷದ ಹಿಡಿತದಲ್ಲಿವೆ ಎನ್ನುತ್ತಾರೆ. ಸಿಬಲ್ ರಂತಹ ಹಿರಿಯ ನ್ಯಾಯವಾದಿ ಹೀಗೆ ಹೇಳುವುದೇ? ನಾಪತ್ತೆಯಾಗಿರುವ ಅಧಿಕಾರಿಗಳನ್ನು ಹುಡುಕಿ ತನ್ನಿ ಎಂದು ಆದೇಶಿಸಲು ಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಲು ಸಿಬಲ್ ಸಿದ್ಧರಿಲ್ಲ. ಸಿಬಲ್ ಹೇಳುತ್ತಿರುವ ' ಸ್ಪೋಟಕ ಹಗರಣ' ದ ಬಗ್ಗೆ ಅವರ ಪಕ್ಷ ಚಕಾರವೆತ್ತುತ್ತಿಲ್ಲ ! 

ಇಂಟರ್ನೆಟ್ ನಲ್ಲಿ ಸಿಕ್ಕಿತು. ನಾನು ನೋಡಿದೆ. ನೀವೂ ನೋಡಿ ಎಂದು ಒಂದು ವಿಡಿಯೋ ತೋರಿಸಿ ಅತಿದೊಡ್ಡ ಹಗರಣವಿದು ಎಂದು ಸಿಬಲ್ ಹೇಳುತ್ತಿದ್ದಾರೆ. ಇದನ್ನು ಯಾರಾದರೂ ಹೇಗೆ ನಂಬಿಯಾರು ?  

ಮಾಧ್ಯಮಗಳು ಕೇಂದ್ರದ ಒತ್ತಡದಿಂದ ನನ್ನ ಪತ್ರಿಕಾ ಗೋಷ್ಠಿಯನ್ನು ಬಹಿಷ್ಕರಿಸುತ್ತಿವೆ ಎಂಬ ಕಪಿಲ್ ಸಿಬಲ್ ಹೇಳಿಕೆ ಬಗ್ಗೆ hw ಸುದ್ದಿ ತಾಣದ ಸಂಪಾದಕ ಸುಜಿತ್ ನಾಯರ್ ರ ಈ ವಿಡಿಯೋ ನೋಡಿ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News