ವಾಂತಿಗೆ ಏನು ಕಾರಣ? ವೈದ್ಯರನ್ನು ಯಾವಾಗ ಕಾಣಬೇಕು?

Update: 2019-05-02 09:57 GMT

ಕೆಲವು ಸಂದರ್ಭಗಳಲ್ಲಿ,ವಿಶೇಷವಾಗಿ ವಾಹನದಲ್ಲಿ ಪ್ರಯಾಣಿಸುವಾಗ ಅಥವಾ ಮಿತಿ ಮೀರಿ ಊಟ ಮಾಡಿದಾಗ ಹೊಟ್ಟೆಯಲ್ಲಿನ ಎಲ್ಲವೂ ಹೊರಕ್ಕೆ ಬರುತ್ತಿರುವಂತೆ ಅನುಭವವಾಗುತ್ತದೆ. ಇದನ್ನೇ ವಾಕರಿಕೆ ಎನ್ನುತ್ತಾರೆ ಮತ್ತು ಇದು ಸಾಮಾನ್ಯವಾಗಿ ವಾಂತಿಗೆ ಮೊದಲಿನ ಅನುಭವವಾಗಿದೆ. ಆದರೆ ಪ್ರತಿ ಬಾರಿ ವಾಕರಿಕೆಯಾದಾಗಲೂ ವಾಂತಿಯಾಗುತ್ತದೆ ಎಂದೇನಿಲ್ಲ ಮತ್ತು ವಾಕರಿಕೆಯೊಂದೇ ವಾಂತಿಗೆ ಕಾರಣವಲ್ಲ.

ವಾಂತಿಗೆ ಕಾರಣಗಳೇನು?

ವಾಹನ ಪ್ರಯಾಣದಿಂದ ಹಿಡಿದು ಅತಿ ಮದ್ಯಪಾನದವರೆಗೆ ವಾಂತಿಗೆ ಹಲವಾರು ಕಾರಣಗಳಿವೆ. ಆದರೆ ವಾಂತಿಯ ಎಲ್ಲ ಕಾರಣಗಳೂ ಕಳವಳಕಾರಿಯಲ್ಲ. ಆದರೆ ಈ ಸಾಮಾನ್ಯ ಸಮಸ್ಯೆಯ ಬಗ್ಗೆ ತಿಳಿದುಕೊಂಡಿರುವುದು ಸೂಕ್ತ ಚಿಕಿತ್ಸೆ ಪಡೆಯಲು ಮತ್ತು ಯಾವುದೇ ದೊಡ್ಡ ಆರೋಗ್ಯ ಸಮಸ್ಯೆಯನ್ನು ತಡೆಯಲು ನೆರವಾಗುತ್ತದೆ. ವಾಕರಿಕೆ/ವಾಂತಿಗೆ ಕೆಲವು ಸಾಮಾನ್ಯ ಕಾರಣಗಳಿಲ್ಲಿವೆ........

ಪ್ರಯಾಣ ಅಸ್ವಸ್ಥತೆ: ಕಾರು,ದೋಣಿ,ಬಸ್ ಅಥವಾ ಇತರ ವಾಹನಗಳಲ್ಲಿ ಪ್ರಯಾಣಿಸುವಾಗ ಕೆಲವರಿಗೆ ವಾಕರಿಕೆ,ವಾಂತಿಯುಂಟಾಗುತ್ತದೆ. ಇದಕ್ಕೆ ನಿಖರ ಕಾರಣ ಗೊತ್ತಾಗಿಲ್ಲ.

ವಿಷಾಹಾರ ಸೇವನೆ: ಕಲುಷಿತ ಅಥವಾ ಹಳಸಿದ ಆಹಾರವನ್ನು ಸೇವಿಸಿದಾಗ ಅದರಲ್ಲಿಯ ಬ್ಯಾಕ್ಟೀರಿಯಾಗಳು ವೃದ್ಧಿಗೊಂಡು ಶರೀರದಲ್ಲಿ ವಿಷವಸ್ತುಗಳ ಉತ್ಪತ್ತಿಗೆ ಕಾರಣವಾಗುತ್ತವೆ ಮತ್ತು ವಾಂತಿಯುಂಟಾಗುತ್ತದೆ. ಇದನ್ನು ಕಡೆಗಣಿಸಿದರೆ ಜಠರದ ಭಿತ್ತಿಗಳಿಗೆ ಹಾನಿಯಾಗುತ್ತದೆ ಮತ್ತು ಜ್ವರ ಹಾಗೂ ನಿಶ್ಶಕ್ತಿಯಂತಹ ಇತರ ಲಕ್ಷಣಗಳಿಗೆ ಕಾರಣವಾಗುತ್ತದೆ.

ಉದರದ ಸಮಸ್ಯೆಗಳು: ನಾವು ಸೇವಿಸಿದ ಆಹಾರ ಜಠರ ಅಥವಾ ಕರುಳಿನ ಮೂಲಕ ಸರಿಯಾಗಿ ಹಾದು ಹೋಗದಿದ್ದರೆ ಅಥವಾ ಕರುಳಿನಲ್ಲಿ ತಡೆಯಲ್ಪಟ್ಟಿದ್ದರೆ ಅದು ವಾಕರಿಕೆ ಅಥವಾ ವಾಂತಿಗೆ ಕಾರಣವಾಗುತ್ತದೆ. ಅಲ್ಲದೆ ಜಠರ ಅಥವಾ ಕರುಳಿನಲ್ಲಿ ಯಾವುದೇ ಸೋಂಕು ಕೂಡ ವಾಕರಿಕೆ ಅಥವಾ ವಾಂತಿಯನ್ನುಂಟು ಮಾಡುತ್ತದೆ.

ಜಠರಗರುಳು ಅನ್ನನಾಳ ಹಿಮ್ಮುಖಹರಿವು ರೋಗ: ಗ್ಯಾಸ್ಟ್ರೋಇಂಟೆಸ್ಟೈನಲ್ ಈಸೊಫೇಜಿಯಲ್ ರಿಫ್ಲೆಕ್ಸ್ ಡಿಸೀಸ್(ಜಿಇಆರ್‌ಡಿ) ಅಥವಾ ಜಠರಗರುಳು ಅನ್ನನಾಳ ಹಿಮ್ಮುಖಹರಿವು ರೋಗವು ವಾಂತಿಗೆ ಕಾರಣವಾಗುತ್ತದೆ. ಸರಳವಾಗಿ ಇದನ್ನು ಆಮ್ಲೀಯತೆ ಸಮಸ್ಯೆ ಎನ್ನಬಹುದು. ಈ ಸ್ಥಿತಿಯಲ್ಲಿ ಅನ್ನನಾಳದ ಸ್ನಾಯುಗಳು ಹೊತ್ತಲ್ಲದ ಹೊತ್ತಲ್ಲಿ ಸಡಿಲಗೊಂಡು ಜಠರದಲ್ಲಿಯ ಆಮ್ಲವು ಅನ್ನನಾಳದಲ್ಲಿ ಹಿಮ್ಮುಖವಾಗಿ ಹರಿಯುತ್ತದೆ. ಇದು ಸಾಮಾನ್ಯ ಉದರ ಸಮಸ್ಯೆಯಾಗಿದ್ದು,ಆಹಾರವನ್ನು ಜೀರ್ಣಗೊಳಿಸುವ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ವಾಂತಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಮೈಗ್ರೇನ್: ಮೈಗ್ರೇನ್ ಅಥವಾ ಅರೆ ತಲೆನೋವಿನಿಂದ ನರಳುವ ಕೆಲವರಲ್ಲಿ ವಾಕರಿಕೆ/ವಾಂತಿ ಉಂಟಾಗುತ್ತದೆ. ಇಂತಹ ತಲೆನೋವುಗಳಿಗೆ ಕಾರಣವಾಗುವ ಅಂಶಗಳನ್ನು ತಿಳಿದುಕೊಂಡರೆ ಅದನ್ನು ತಡೆಯಬಹುದು,ಜೊತೆಗೆ ವಾಂತಿಯಾಗುವುದನ್ನೂ ತಪ್ಪಿಸಬಹುದು.

ಔಷಧಿಗಳು: ಆ್ಯಂಟಿ ಬಯಾಟಿಕ್‌ಗಳು, ವಿಟಾಮಿನ್‌ಗಳು, ಜನನ ನಿಯಂತ್ರಣ ಮಾತ್ರೆಗಳು, ನೋವು ನಿವಾರಕಗಳು ಮತ್ತು ಖಿನ್ನತೆ ನಿರೋಧಕಗಳು ಸೇರಿದಂತೆ ಕೆಲವು ಔಷಧಿಗಳು ವಾಕರಿಕೆ ಅಥವಾ ವಾಂತಿಯಂತಹ ಅಡ್ಡಪರಿಣಾಮಗಳಿಗೆ ಕಾರಣವಾಗುತ್ತವೆ. ಹೀಗಾಗಿ ಇಂತಹ ಔಷಧಿಗಳನ್ನು ಸೇವಿಸಿದ ಬಳಿಕ ಈ ಅನುಭವವಾದರೆ ವೈದ್ಯರಿಗೆ ತಿಳಿಸಿದರೆ ಅವರು ಔಷಧಿಯನ್ನು ಬದಲಿಸಬಹುದು.

ಗರ್ಭಾವಸ್ಥೆ: ಸಾಮಾನ್ಯವಾಗಿ ಬೆಳಗಿನ ಅಸ್ವಸ್ಥತೆ ಎನ್ನಲಾಗುವ ವಾಕರಿಕೆ ಅಥವಾ ವಾಂತಿ ಮಹಿಳೆ ಗರ್ಭ ಧರಿಸಿರುವುದನ್ನು ಸೂಚಿಸುವ ಸಾಮಾನ್ಯ ಲಕ್ಷಣಗಳಲ್ಲೊಂದಾಗಿದೆ.

ಹೆಚ್ಚಿನ ಪ್ರಕರಣಗಳಲ್ಲಿ ವಾಂತಿ ಹಾನಿಕಾರಕವಲ್ಲ. ಆದರೆ ಅದು ಬೇರೆ ಯಾವುದೋ ಕಾಯಿಲೆಯನ್ನು ಸೂಚಿಸಬಹುದಾದ್ದರಿಂದ ಅದನ್ನೆಂದೂ ಕಡೆಗಣಿಸಬಾರದು. ತಲೆಗೆ ಗಾಯವಾದಾಗ ಅಥವಾ ಪೆಟ್ಟು ಬಿದ್ದಾಗ, ಮೆನಿಂಜೈಟಿಸ್ ಅಥವಾ ಮಿದುಳಿನ ಅಂಗಾಂಶಗಳ ಉರಿಯೂತ,ಅಪೆಂಡಿಸೈಟಿಸ್ ಮತ್ತು ಮಿದುಳು ಟ್ಯೂಮರ್‌ನಂತಹ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿದ್ದಾಗ ವಾಂತಿಯುಂಟಾಗುತ್ತದೆ.

ವೈದ್ಯರನ್ನು ಯಾವಾಗ ಕಾಣಬೇಕು?

2-3 ದಿನಗಳಿಗಿಂತ ಹೆಚ್ಚು ಅವಧಿಗೆ ವಾಕರಿಕೆಯ ಅನುಭವವಾಗುತ್ತಿದ್ದರೆ ಅಥವಾ ವಾಕರಿಕೆ/ವಾಂತಿಯ ಲಕ್ಷಣಗಳು ತೀವ್ರಗೊಂಡಿದ್ದರೆ ಅದು ನೀವು ವೈದ್ಯರನ್ನು ತಕ್ಷಣವೇ ಸಂಪರ್ಕಿಸಬೇಕು ಎನ್ನುವುದನ್ನು ಸೂಚಿಸುತ್ತದೆ. ಮನೆಮದ್ದುಗಳು ಕೆಲಸ ಮಾಡದಿದ್ದರೆ ಅಥವಾ ವಾಂತಿಯನ್ನುಂಟು ಮಾಡುವ ತಲೆಗೆ ಗಾಯ ಅಥವಾ ಸೋಂಕುಗಳಿದ್ದಾಗಲೂ ವ್ಯೆದ್ಯರ ಸಲಹೆ ಅಗತ್ಯವಾಗುತ್ತದೆ.

ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಒಂದು ದಿನಕ್ಕೂ ಹೆಚ್ಚಿನ ಅವಧಿಯಿಂದ ವಾಂತಿಯಾಗುತ್ತಿದ್ದರೆ ಮತ್ತು ತೀವ್ರ ಜ್ವರ ಅಥವಾ ನಿರ್ಜಲೀಕರಣದ ಲಕ್ಷಣಗಳು ಕಾಣಿಸಿಕೊಂಡರೆ ಅದು ಕಳವಳಕಾರಿಯಾಗಬಹುದು ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಾಗುತ್ತದೆ.

ವಾಂತಿ ಜೊತೆಗೆ ಎದೆನೋವು ಅಥವಾ ಹೊಟ್ಟೆ ನೋವು ಇದ್ದಾಗ,ವಾಂತಿಯಲ್ಲಿ ರಕ್ತ ಅಥವಾ ಕಪ್ಪುಬಣ್ಣ ಕಾಣಿಸಿಕೊಂಡಿದ್ದರೆ, ರಕ್ತದ ಅಥವಾ ಕಪ್ಪು ಬಣ್ಣದ ಮಲ ವಿಸರ್ಜನೆಯಾಗುತ್ತಿದ್ದರೆ,ತೀವ ಜ್ವರವಿದ್ದರೆ,ತಲೆನೋವು ಅಥವಾ ಕುತ್ತಿಗೆ ಪೆಡಸಾಗಿದ್ದರೆ,ಅತಿಯಾಗಿ ದಣಿವು ಆಗುತ್ತಿದ್ದರೆ ಮತ್ತು ನಿರ್ಜಲೀಕರಣದ ಲಕ್ಷಣಗಳು ಕಂಡು ಬಂದರೂ ಆಸ್ಪತ್ರೆಗೆ ಧಾವಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News