ಮಸೂದ್ ಅಝರ್ ಮೇಲಿನ ವಿಶ್ವಸಂಸ್ಥೆಯ ನಿಷೇಧ ಆತನ ಬಯೊಡಾಟಾ ಆಗಬೇಕಿಲ್ಲ

Update: 2019-05-02 14:26 GMT

ಹೊಸದಿಲ್ಲಿ,ಮೇ 2: ಮಸೂದ್ ಅಝರ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯ ಉಲ್ಲೇಖವಿಲ್ಲದ್ದಕ್ಕೆ ವಿವರಣೆಯನ್ನು ನೀಡಿರುವ ಕೇಂದ್ರವು,ಅದು ಆತನ ಎಲ್ಲ ಭಯೋತ್ಪಾದಕ ಕೃತ್ಯಗಳ ವಿವರಗಳನ್ನು ಒಳಗೊಂಡಿರುವ ಬಯೊಡಾಟಾ ಅಲ್ಲ ಎಂದು ಹೇಳಿದೆ. ಮಸೂದ್ ಅಝರ್‌ನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವಂತೆ ಮಾಡುವುದು ನಮ್ಮ ಗುರಿಯಾಗಿತ್ತು ಎಂದಿದೆ.

ಗುರುವಾರ ಇಲ್ಲಿ ಈ ಬಗ್ಗೆ ವಿವರಣೆ ನೀಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ ಅವರು,ಅಝರ್‌ಗೆ ನಿಷೇಧವು ನಿರ್ದಿಷ್ಟ ಘಟನೆಯನ್ನು ಆಧರಿಸಿಲ್ಲ, ಅಝರ್‌ನ ಹಲವಾರು ಭಯೋತ್ಪಾದಕ ಕೃತ್ಯಗಳ ಬಗ್ಗೆ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳೊಂದಿಗೆ ನಾವು ಹಂಚಿಕೊಂಡಿದ್ದ ಮಾಹಿತಿಯನ್ನು ಆಧರಿಸಿದೆ. ಆತನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯ ಪಾತ್ರವಿದೆ ಎಂದು ತಿಳಿಸಿದರು.

ಬುಧವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಅಝುರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿರುವುದು ಭಾರತದ ಪಾಲಿಗೆ ಮಹತ್ವದ ರಾಜತಾಂತ್ರಿಕ ವಿಜಯವಾಗಿದೆ. ಈ ಹಿಂದೆ ನಾಲ್ಕು ಬಾರಿ ಆತನನ್ನು ಕಪ್ಪುಪಟ್ಟಿಗೆ ಸೇರಿಸುವ ಕ್ರಮಕ್ಕೆ ತಡೆಯೊಡ್ಡಿದ್ದ ಚೀನಾ ಈ ಬಾರಿ ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ.

ಅಝರ್‌ನನ್ನು ಕಪ್ಪುಪಟ್ಟಿಗೆ ಸೇರಿಸಲು ಭಾರತವು ಚೀನಾದ ಮುಂದೆ ಏನಾದರೂ ಕೊಡುಗೆಯನ್ನಿಟ್ಟಿತ್ತೇ ಎಂಬ ಪ್ರಶ್ನೆಗೆ ಕುಮಾರ್,ನಾವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ಚೌಕಾಶಿ ಮಾಡುವುದಿಲ್ಲ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News