ಜಿಎಸ್‌ಟಿ, ನೋಟು ನಿಷೇಧದಿಂದ ಕೊಂಚ ತೊಂದರೆಯಾಗಿದ್ದರೂ ಪ್ರಧಾನಿಯಲ್ಲಿ ಜನರ ವಿಶ್ವಾಸವನ್ನು ಕುಂದಿಸಲಿಲ್ಲ: ಕೇಂದ್ರ ಸಚಿವ

Update: 2019-05-02 15:36 GMT

ಹೊಸದಿಲ್ಲಿ,ಮೇ 2: ನೋಟು ನಿಷೇಧ ಮತ್ತು ಜಿಎಸ್‌ಟಿ ಜಾರಿಯಿಂದಾಗಿ ಕೊಂಚ ತೊಂದರೆಯಾಗಿತ್ತು ಎಂದು ಗುರುವಾರ ಒಪ್ಪಿಕೊಂಡ ಕೇಂದ್ರ ಸಚಿವ ಹಾಗೂ ದಿಲ್ಲಿಯ ಚಾಂದ್ನಿ ಚೌಕ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರ್ಷವರ್ಧನ್ ಅವರು,ಆದರ ಈ ಕ್ರಮಗಳು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಲ್ಲಿ ಜನತೆಯ ವಿಶ್ವಾಸವನ್ನು ಅಲುಗಾಡಿಸಿರಲಿಲ್ಲ ಎಂದು ಹೇಳಿದರು.

ಸರಕಾರದ ಈ ದಿಟ್ಟ ಕ್ರಮಗಳನ್ನು ಜನರು ಮೆಚ್ಚಿಕೊಂಡಿದ್ದರು ಮತ್ತು ಟೀಕೆಗಳು ರಾಜಕೀಯ ಪ್ರೇರಿತವಾಗಿದ್ದವು ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದರು.

ನೋಟು ನಿಷೇಧವನ್ನು ಮಾಡಿದಾಗ ಖಂಡಿತವಾಗಿಯೂ ಸರಕಾರ ಮತ್ತು ಪ್ರಧಾನಿಯವರ ಪಾಲಿಗೆ ಅದೊಂದು ಅತ್ಯಂತ ಕಠಿಣ,ಐತಿಹಾಸಿಕ ಸುಧಾರಣೆಯ ಮತ್ತು ದಿಟ್ಟ ನಿರ್ಧಾರವಾಗಿತ್ತು. ಇಡೀ ದೇಶವೇ ಬ್ಯಾಂಕುಗಳ ಎದುರು ಸರದಿ ಸಾಲುಗಳಲ್ಲಿ ಕಾದು ನಿಂತಿತ್ತು,ಆದರೆ ಒಬ್ಬನೇ ಒಬ್ಬ ವ್ಯಕ್ತಿ ಅಸಮಾಧಾನ ವ್ಯಕ್ತಪಡಿಸಲಿಲ್ಲ. ಏಕೆಂದರೆ ಜನರಿಗೆ ಮೋದಿಯವರ ದೂರದೃಷ್ಟಿ ಮತ್ತು ಉದ್ದೇಶಗಳಲ್ಲಿ ನಂಬಿಕೆಯಿತ್ತು. ಸಂಕ್ಷಿಪ್ತ ಅವಧಿಗೆ ನಗದು ನಿರ್ವಹಣೆ ಮತ್ತು ನೋಟುಗಳ ವಿನಿಮಯಕ್ಕಾಗಿ ಬ್ಯಾಂಕುಗಳಿಗೆ ತೆರಳುವಲ್ಲಿ ಜನರಿಗೆ ಸಣ್ಣಪುಟ್ಟ ತೊಂದರೆಗಳಾಗಿದ್ದು ನಿಜ. ಮೋದಿಯವರು ಒಳ್ಳೆಯ ಉದ್ದೇಶಗಳನ್ನು ಹೊಂದಿದ್ದರು ಎನ್ನುವುದು ಈಗ ಪ್ರತಿಯೊಬ್ಬರಿಗೂ ಅರ್ಥವಾಗಿದೆ. ಯಾರೂ ಅದನ್ನು ಟೀಕಿಸಿರಲಿಲ್ಲ ಎಂದರು.

ಜಿಎಸ್‌ಟಿ ಜಾರಿಯಿಂದ ಉದ್ಯಮಿಗಳು ಮತ್ತು ವ್ಯಾಪಾರಿಗಳಿಗೆ ಆದ ತೊಂದರೆಯ ಕುರಿತು ಪ್ರಶ್ನೆಗೆ ಉತ್ತರಿಸಿದ ಹರ್ಷವರ್ಧನ್,ಜಿಎಸ್‌ಟಿಯು ಬೃಹತ್ ಸುಧಾರಣೆ ಎಂದು ಬಣ್ಣಿಸಿದರು. ವ್ಯಾಪಾರಿಗಳ ಸಲಹೆಗಳ ಮೇರೆಗೆ ಅದನ್ನು ಆಗಾಗ್ಗೆ ತಿದ್ದುಪಡಿ ಮಾಡಲಾಗಿದೆ ಎಂದರು. ನೋಟು ನಿಷೇಧ ಮತ್ತು ಜಿಎಸ್‌ಟಿ ಕುರಿತು ಟೀಕೆಗಳು ರಾಜಕೀಯ ಪ್ರೇರಿತವಾಗಿದ್ದವು ಎಂದ ಅವರು,ಪ್ರತಿಪಕ್ಷಗಳ ಬಳಿ ಬೇರೆ ವಿಷಯಗಳಿರಲಿಲ್ಲ ಎಂದು ಕುಟುಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News