×
Ad

2014ರ ನಂತರ 942ಕ್ಕೂ ಅಧಿಕ ಬಾಂಬ್ ಸ್ಫೋಟ: ರಾಹುಲ್ ಗಾಂಧಿ

Update: 2019-05-02 21:59 IST

ಹೊಸದಿಲ್ಲಿ, ಮೇ 2: 2014ರಿಂದ ಪ್ರಮುಖ ಸ್ಫೋಟ ಸಂಭವಿಸಿಲ್ಲ ಎಂಬ ಹೇಳಿಕೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕಳೆದ 5 ವರ್ಷಗಳಲ್ಲಿ 942ಕ್ಕೂ ಅಧಿಕ ಪ್ರಮುಖ ಸ್ಫೋಟಗಳು ಸಂಭವಿಸಿವೆ ಎಂದು ಬುಧವಾರ ಹೇಳಿದ್ದಾರೆ. 2014ರ ನಂತರ ಭಾರತದಲ್ಲಿ ಸ್ಫೋಟದ ಸದ್ದು ಕೇಳಿಲ್ಲ ಎಂದು ಪ್ರಧಾನಿ ಅವರು ಹೇಳಿದ್ದಾರೆ.

2014ರಿಂದ ಪುಲ್ವಾಮಾ, ಪಠಾಣ್‌ಕೋಟ್, ಉರಿ, ಗಡ್ಚಿರೋಳಿ ಹಾಗೂ 942 ಪ್ರಮುಖ ಸ್ಫೋಟಗಳು ಸಂಭವಿಸಿವೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕಿವಿ ತೆರೆದು ಆಲಿಸಬೇಕು ಎಂದು ಅವರು ಹೇಳಿದರು. 15 ಭದ್ರತಾ ಸಿಬ್ಬಂದಿ ಹಾಗೂ ಓರ್ವ ನಾಗರಿಕ ಮೃತಪಟ್ಟ ಮಹಾರಾಷ್ಟ್ರದ ಗಡ್ಚಿರೋಳಿಯಲ್ಲಿ ಬುಧವಾರ ಸಂಭವಿಸಿದ ಮಾವೋವಾದಿ ಸ್ಫೋಟದ ಬಳಿಕ ರಾಹುಲ್ ಗಾಂಧಿ ಅವರು ಈ ಟ್ವೀಟ್ ಮಾಡಿದ್ದಾರೆ. ಸುಮ್ಮನೆ ಎದೆ ತಟ್ಟಿಕೊಳ್ಳುತ್ತಿರುವ ಬಿಜೆಪಿ ನೇತೃತ್ವದ ಸರಕಾರದ ನಡತೆ ರಾಷ್ಟ್ರೀಯ ಭದ್ರತೆಗಿರುವ ಅವರ ನಿಲುವನ್ನು ಸೂಚಿಸುತ್ತದೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಟೀಕಿಸಿದ್ದಾರೆ. ತನ್ನ ಅಧಿಕಾರ ಅವಧಿಯಲ್ಲಿ ಯಾವುದೇ ಸ್ಫೋಟಗಳು ಸಂಭವಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ನೀಡಿದ ಹೇಳಿಕೆಯನ್ನು ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ತರಾಟೆಗೆ ತೆಗೆದುಕೊಂಡಿದ್ದರು. ಸ್ಫೋಟದ ಪಟ್ಟಿಯನ್ನು ಪೋಸ್ಟ್ ಮಾಡಿ ಟ್ವೀಟ್‌ನಲ್ಲಿ ಪ್ರಶ್ನಿಸಿರುವ ಚಿದಂಬರಂ, ಇದು ಸ್ಮರಣ ಶಕ್ತಿ ನಾಶವನ್ನು ಸೂಚಿಸುತ್ತದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News