ರಾತ್ರಿ ಮೂತ್ರ ವಿಸರ್ಜನೆಗೆ ಪದೇ ಪದೇ ಏಳುತ್ತಿದ್ದರೆ ಅದಕ್ಕೆ ಕಾರಣಗಳಿಲ್ಲಿವೆ

Update: 2019-05-03 12:15 GMT

ರಾತ್ರಿಯಿಡೀ ಮೂತ್ರ ವಿಸರ್ಜನೆಗೆ ತೆರಳುವ ಅನಿವಾರ್ಯತೆಯಿದ್ದಾಗ ಸುಖನಿದ್ರೆ ಕನಸಿನ ಮಾತಾಗುತ್ತದೆ. ದಿ ಜರ್ನಲ್ ಆಫ್‌ ಯುರಾಲಜಿಯಲ್ಲಿ ಪ್ರಕಟಗೊಂಡಿರುವ ಸಂಶೋಧನಾ ವರದಿಯಂತೆ ‘ನೊಕ್ಟರಿಯಾ’ ಎಂದು ಕರೆಯಲಾಗುವ ಈ ಸಮಸ್ಯೆ ಪುರುಷರಿಂತ ಮಹಿಳೆಯರನ್ನೇ ಹೆಚ್ಚಾಗಿ ಕಾಡುತ್ತದೆ. 20ರಿಂದ 40ರ ವಯೋಮಾನದ ಶೇ.44ರಷ್ಟು ಮಹಿಳೆಯರು ರಾತ್ರಿ ಕನಿಷ್ಠ ಒಂದು ಬಾರಿ ಮತ್ತು ಶೇ.18ರಷ್ಟು ಮಹಿಳೆಯರು ಕನಿಷ್ಠ ಎರಡು ಬಾರಿಯಾದರೂ ಮೂತ್ರ ವಿಸರ್ಜನೆಗಾಗಿ ಎದ್ದೇಳುತ್ತಾರೆ.

ರಾತ್ರಿ ನಿದ್ರೆಯಲ್ಲಿದ್ದಾಗ ಮೂತ್ರ ವಿಸರ್ಜನೆಗೆಂದು ಎದ್ದೇಳುವುದು ಯಾರಿಗಾದರೂ ಕಿರಿಕಿರಿಯನ್ನುಂಟು ಮಾಡುವುದಷ್ಟೇ ಅಲ್ಲ,ಅದು ನಿದ್ರೆಯ ಗುಣಮಟ್ಟವನ್ನೂ ಕೆಡಿಸುತ್ತದೆ. ಅದು ಶಕ್ತಿಯ ಮಟ್ಟವನ್ನು ಕುಂದಿಸುತ್ತದೆ ಮತ್ತು ಶರೀರದ ಒಟ್ಟಾರೆ ಆರೋಗ್ಯಕ್ಕೂ ವ್ಯತ್ಯಯವನ್ನುಂಟು ಮಾಡುತ್ತದೆ. ಅಲ್ಲದೆ ಅದು ಶರೀರದಲ್ಲಿಯ ಯಾವುದಾದರೂ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಲೂಬಹುದು.

► ನಿಮಗೆ ರಾತ್ರಿ ನಿಜಕ್ಕೂ ಮೂತ್ರ ವಿಸರ್ಜನೆಗೆ ಏಳಲೇಬೇಕೇ?

ಇದಕ್ಕೆ ನೀವು ‘ಹೌದು’ ಎಂದೇ ಉತ್ತರಿಸುತ್ತೀರಿ,ಆದರೆ ಒಂದು ಕ್ಷಣ ಈ ಬಗ್ಗೆ ಯೋಚಿಸಿ. ರಾತ್ರಿ ಆಗಾಗ್ಗೆ ಮೂತ್ರವಿಸರ್ಜನೆಗೆ ತೆರಳುವ ಮಹಿಳೆಯರು ನಿಜಕ್ಕೂ ಅದು ಅಗತ್ಯವಾಗಿದೆ ಎಂದು ನಿದ್ರೆಯಿಂದ ಎಚ್ಚೆತ್ತುಕೊಳ್ಳುವುದಿಲ್ಲ. ನಮ್ಮ ಮಿದುಳಿನಲ್ಲಿರುವ ವ್ಯವಸ್ಥೆಯೊಂದು ಮೂತ್ರ ವಿಸರ್ಜನೆಗಾಗಿ ನಿಮ್ಮ ನಿದ್ರೆಗೆ ಭಂಗ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುತ್ತದೆ. ಕೆಲವೊಮ್ಮೆ ಮಹಿಳೆಯರು ರಾತ್ರಿ ಸುಮ್ಮನೆ ಏಳುತ್ತಾರೆ ಮತ್ತು ಹೇಗೂ ಎದ್ದಾಗಿದೆಯಲ್ಲ ಎಂದುಕೊಂಡು ಮೂತ್ರ ವಿಸರ್ಜನೆಗೆ ತೆರಳುತ್ತಾರೆ. ಪರಿಸ್ಥಿತಿ ಹೀಗಿದ್ದರೆ ಮೂತ್ರ ನಿಯಂತ್ರಣಕ್ಕಿಂತ ಇನ್‌ಸೋಮ್ನಿಯಾ ಅಥವಾ ನಿದ್ರಾಹೀನತೆ ದೊಡ್ಡ ಸಮಸ್ಯೆಯಾಗಿರಬಹುದು.

ಇನ್ನೊಂದೆಡೆ ರಾತ್ರಿ ನಿದ್ರೆಯಿಂದ ಎದ್ದು ಬಾತ್‌ರೂಮಿಗೆ ತೆರಳಿದಾಗ ಕೆಲವೇ ಹನಿಗಳಷ್ಟು ಮೂತ್ರ ವಿಸರ್ಜನೆ ಯಾಗುತ್ತಿದ್ದರೆ ಅದು ಅತಿ ಕ್ರಿಯಾಶೀಲ ಮೂತ್ರಕೋಶ ಸಮಸ್ಯೆಯನ್ನು ಸೂಚಿಸಬಹುದು. ರಾತ್ರಿ ಮೂತ್ರಕೋಶ ತುಂಬಿದ್ದರೆ ಮಲಗುವ ಸಂದರ್ಭದಲ್ಲಿ ಕೆಫೀನ್ ಅಥವಾ ಮದ್ಯದಂತಹ ಮೂತ್ರವರ್ಧಕಗಳು ಸೇರಿದಂತೆ ಅತಿಯಾದ ದ್ರವ ಸೇವನೆ ಕಾರಣವಾಗಿರಬಹುದು. ಕೆಫೀನ್ ಅತಿ ಕ್ರಿಯಾಶೀಲ ಮೂತ್ರಕೋಶಕ್ಕೆ ಕಾರಣವಾಗುತ್ತದೆ ಮತ್ತು ಇದು ಹಗಲು ಮತ್ತು ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗುವಂತೆ ಮಾಡುತ್ತದೆ.

ಸಂಜೆ ಆರು ಗಂಟೆಯ ಬಳಿಕ ದ್ರವ ಸೇವನೆಯನ್ನು ಕಡಿಮೆ ಮಾಡಿದರೆ ಮತ್ತು ಬೆಳಗ್ಗಿನವರೆಗೆ ಕೆಫೀನ್ ಸೇವನೆಯನ್ನು ನಿಯಂತ್ರಿಸಿದರೆ ಅದು ಪದೇ ಪದೇ ಮೂತ್ರವಿಸರ್ಜನೆ ಸಮಸ್ಯೆಯಿಂದ ಪಾರಾಗಲು ನೆರವಾಗುತ್ತದೆ. ಆದರೆ ನೊಕ್ಟರಿಯಾಕ್ಕೆ ಇತರ ಹಲವಾರು ಕಾರಣಗಳೂ ಇರುವುದರಿಂದ ಇದೊಂದೇ ಕ್ರಮ ಸಮಸ್ಯೆಯ ಪರಿಹಾರಕ್ಕೆ ಸಾಲದಿರಬಹುದು.

► ಮಧ್ಯರಾತ್ರಿಯ ಮೂತ್ರ ವಿಸರ್ಜನೆ ದೊಡ್ಡ ಸಮಸ್ಯೆಯೇ?

ರಾತ್ರಿ ವೇಳೆ ಸೇರಿದಂತೆ ಪದೇ ಪದೇ ಮೂತ್ರ ವಿಸರ್ಜನೆಗೆ ಕಾರಣಗಳು ಸಾಮಾನ್ಯವಾಗಿ ಮುಗಿಯುವಂಥದ್ದಲ್ಲ. ಆದರೆ ಮಧುಮೇಹ ಮತ್ತು ಹೃದ್ರೋಗ ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ಮಹಿಳೆಯರಲ್ಲಿ ಗರ್ಭಾವಸ್ಥೆಯಲ್ಲಿನ ಮಧುಮೇಹ ಕೂಡ ಪದೇ ಪದೇ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ.

ಗರ್ಭಕೋಶ ಜಾರುವಿಕೆಯಂತಹ ಮೂತ್ರನಾಳದ ಅಂಗರಚನೆಯನ್ನು ಬದಲಿಸುವ ಸ್ಥಿತಿಗಳ ಜೊತೆಗೆ ಮೂತ್ರನಾಳ ಸೋಂಕು ಮತ್ತು ಶ್ರೋಣಿ ಉರಿಯೂತ ಕಾಯಿಲೆ ಇತ್ಯಾದಿಗಳು ಪದೇ ಪದೇ ಮೂತ್ರ ವಿಸರ್ಜನೆಗೆ ತೆರಳುವಂತೆ ಮಾಡುತ್ತವೆ. ಮೂತ್ರಕೋಶದ ಒಳಪದರದಲ್ಲಿ ಉಂಟಾಗುವ ಉರಿಯೂತ ‘ಇಂಟರ್‌ಸ್ಟಿಷಿಯಲ್ ಸಿಸ್ಟಿಟಿಸ್ ’ ಪದೇ ಪದೇ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ,ಆದರೆ ಅದು ಉಂಟು ಮಾಡುವ ತೀವ್ರನೋವು ಜನರು ವೈದ್ಯರ ಬಳಿ ಧಾವಿಸುವಂತೆ ಮಾಡುತ್ತದೆ. ಕೆಲವು ಔಷಧಿಗಳೂ ರಾತ್ರಿ ವೇಳೆ ಮೂತ್ರ ವಿಸರ್ಜನೆಗೆ ಏಳುವಂತೆ ಮಾಡುತ್ತವೆ.

ಮಹಿಳೆಯರು ಶ್ರೋಣಿಯ ಸ್ನಾಯುಗಳನ್ನು ಬಲಗೊಳಿಸುವ ಕೀಗಲ್‌ನಂತಹ ಕೆಲವು ಸರಳ ವ್ಯಾಯಾಮಗಳನ್ನು ಮಾಡುವುದರಿಂದ ಪದೇ ಪದೇ ಮೂತ್ರ ವಿಸರ್ಜನೆಯನ್ನು ನಿಯಂತ್ರಿಸಲು ನೆರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News