ಬಿಹಾರ ಪಾಲನಾಗೃಹದಿಂದ ನಾಪತ್ತೆಯಾದ 11 ಬಾಲಕಿಯರ ಹತ್ಯೆ ಸಾಧ್ಯತೆ: ಸಿಬಿಐ

Update: 2019-05-04 03:41 GMT
ಬೃಜೇಶ್ ಠಾಕೂರ್

ಹೊಸದಿಲ್ಲಿ, ಮೇ 4: ಬಿಹಾರದ ಕುಖ್ಯಾತ ಪಾಲನಾಗೃಹದಿಂದ ನಾಪತ್ತೆಯಾದ 11 ಮಂದಿ ಬಾಲಕಿಯರನ್ನು ಬಹುಶಃ ಹತ್ಯೆ ಮಾಡಿರಬಹುದು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಸಿಬಿಐ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಬೃಜೇಶ್ ಠಾಕೂರ್ ಎಂಬಾತ ನಡೆಸುತ್ತಿದ್ದ ಪಾಲನಾಗೃಹದಲ್ಲಿ ನಡೆದ ಲೈಂಗಿಕ ಶೋಷಣೆ ಮತ್ತು ಹುಡುಗಿಯರ ನಾಪತ್ತೆ ಬಗ್ಗೆ ಪಾಲನಾಗೃಹದಲ್ಲಿ ಆಸರೆ ಪಡೆದಿದ್ದವರಿಂದ ಮಾಹಿತಿ ಪಡೆದಾಗ ಸಿಬಿಐಗೆ 11 ಬಾಲಕಿಯರ ಹೆಸರು ತಿಳಿದುಬಂದಿತ್ತು.

ಅತ್ಯಾಚಾರ ಸಂತ್ರಸ್ತೆಯರೊಂದಿಗೆ ನಾಪತ್ತೆಯಾದ ಬಾಲಕಿಯರ ಬಗ್ಗೆ ಮಾತನಾಡಿದಾಗ ಅವರನ್ನು ಪ್ರಕರಣದ ಆರೋಪಿ ಬೃಜೇಶ್ ಠಾಕೂರ್ ಹತ್ಯೆ ಮಾಡಿರಬಹುದು ಎಂದು ತಿಳಿಸಿದ್ದಾಗಿ ಸಿಬಿಐ ಅಫಿಡವಿತ್‌ನಲ್ಲಿ ಹೇಳಿದೆ. ಈ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆರೋಪಿ ಬಾಲಕಿಯರನ್ನು ಹೂತುಹಾಕಿದ್ದಾನೆ ಎನ್ನಲಾದ ಜಾಗದಿಂದ ಬಹಳಷ್ಟು ಎಲುಬುಗಳನ್ನು ಹೊರತೆಗೆಯಲಾಗಿದೆ. ಅದರೆ ತನಿಖೆ ಪ್ರಗತಿಯಲ್ಲಿರುವುದರಿಂದ ಇನ್ನೂ ಹತ್ಯೆ ಆರೋಪ ಹೊರಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಈ ಸಂಭಾವ್ಯ ಸಾವಿನ ಬಗ್ಗೆ ಪಾಲನಾಗೃಹದ ದಾಖಲೆಗಳನ್ನು ಪರಿಶೀಲಿಸಿದಾಗ, ಇಲ್ಲಿ ಹಿಂದೆ ಆಸರೆ ಪಡೆದಿದ್ದ 35 ಬಾಲಕಿಯರ ಹೆಸರು ಒಂದೇ ರೀತಿ ಇರುವುದು ಅಥವಾ ಒಂದೇ ಹೆಸರು ಇರುವುದು ಪತ್ತೆಯಾಗಿದೆ.

ನಿಮ್ಹಾನ್ಸ್ ತಜ್ಞರ ಸಮ್ಮುಖದಲ್ಲಿ ಸಂತ್ರಸ್ತರ ವಿಚಾರಣೆ ನಡೆಸಿದಾಗ, ಬೃಜೇಶ್ ಹಾಗೂ ಆತನ ಸಹಚರರಿಂದ ಹತ್ಯೆಯಾಗಿರಬಹುದು ಎನ್ನಲಾದ ಹನ್ನೊಂದು ಬಾಲಕಿಯರ ಹೆಸರನ್ನು ಬಹಿರಂಗಪಡಿಸಿದ್ದಾರೆ.

ಈ ಆರೋಪಗಳನ್ನು ಸಮರ್ಪಕವಾಗಿ ತನಿಖೆ ನಡೆಸಲಾಗುತ್ತಿದ್ದು, ಬಾಲಿಕಾಗೃಹದ ಮುಖ್ಯ ನೋಂದಣಿ ಪುಸ್ತಕವನ್ನು ಪರಿಶೀಲಿಸಲಾಗುತ್ತಿದೆ. ಜತೆಗೆ ದೇಹಗಳನ್ನು ಹುಡುಕುವ ಮತ್ತು ಹತ್ಯೆಗೀಡಾಗಿದ್ದಾರೆ ಎನ್ನಲಾದ ಬಾಲಕಿಯರ ಇರುವಿಕೆ ಬಗ್ಗೆ ಕ್ಷೇತ್ರಮಟ್ಟದ ಪರಿಶೀಲನೆ ನಡೆಸಲಾಗುತ್ತಿದೆ" ಎಂದು ಅಫಿಡವಿತ್‌ನಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News