×
Ad

ಗಡ್ಚಿರೋಲಿ ನಕ್ಸಲ್ ದಾಳಿಗೆ ಕಾರಣ ಏನು ಗೊತ್ತೇ?

Update: 2019-05-04 09:38 IST

ನಾಗ್ಪುರ, ಮೇ 4: ನಕ್ಸಲ್ ಮುಖಂಡನ ಪತ್ನಿಯನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿರುವುದು ಗಡ್ಚಿರೋಲಿ ನಕ್ಸಲ್ ದಾಳಿಗೆ ಕಾರಣವಿರಬಹುದು ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇಐಡಿ ಸ್ಫೋಟದಲ್ಲಿ ಹದಿನೈದು ಮಂದಿ ಪೊಲೀಸರು ಮತ್ತು ವಾಹನ ಚಾಲಕ ಬಲಿಯಾಗಿದ್ದರು. ಎಪ್ರಿಲ್ 27ರಂದು ಗಡ್ಚಿರೋಲಿ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಗಟ್ಟ ದಳಂನ ವಿಭಾಗೀಯ ಸಮಿತಿಯ ಸದಸ್ಯೆ ರಾಮ್ಕೊ ಅಲಿಯಾಸ್ ಕಮಲಾ ಮಾಂಕು ನರೋಟೆ (46) ಬಲಿಯಾಗಿದ್ದಳು. ಈಕೆ ಪ್ರಭಾವಿ ನಕ್ಸಲ್ ನಾಯಕ ಭಾಸ್ಕರ್ ಹಿಚ್ಕನಿಯ ಪತ್ನಿ ಹಾಗೂ ಈಕೆಯನ್ನು ಪತ್ತೆ ಮಾಡಿದಲ್ಲಿ 16 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿತ್ತು.

ರಾಮ್ಕೊಳನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಆಕೆಯ ಪತಿ ಈ ದಾಳಿ ಯೋಜಿಸಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಪೊಲೀಸ್ ಪಡೆಯ ಸಂಚಾರದ ವೇಳೆ ನಿಗದಿತ ಕಾರ್ಯಾಚರಣೆ ವಿಧಾನ (ಎಸ್‌ಓಪಿ) ಉಲ್ಲಂಘಿಸಿರಬೇಕು ಎಂದು ಅವರು ಹೇಳಿದ್ದಾರೆ.

ಘಟನೆ ನಡೆದ ದಿನ ಮುಂಜಾನೆ ಇದೇ ಜಿಲ್ಲೆಯ ಪುರಾದಾ ಠಾಣೆ ವ್ಯಾಪ್ತಿಯ ದಾದಾಪುರ ಎಂಬಲ್ಲಿ ಮಾವೋವಾದಿಗಳು 27 ವಾಹನಗಳನ್ನು ಸುಟ್ಟುಹಾಕಿದ್ದರು. ಈ ಘಟನೆ ಬಳಿಕ ಪುರಾದಾಗೆ ಪೊಲೀಸರನ್ನು ಕಳುಹಿಸುತ್ತಾರೆ ಎನ್ನುವುದು ನಕ್ಸಲರಿಗೆ ತಿಳಿದಿತ್ತು ಎಂದು ವಿವರಿಸಿದ್ದಾರೆ. ಖಾಸಗಿ ವಾಹನದಲ್ಲಿ ಹೋಗುವ ಬದಲು ನಡೆದುಕೊಂಡು ಹೋಗಿದ್ದರೆ ಈ ದುರಂತ ತಪ್ಪಿಸಬಹುದಿತ್ತು ಎಂದು ಪ್ರತಿಪಾದಿಸಿದ್ದಾರೆ.

ಅಪಾಯದ ಮುನ್ಸೂಚನೆ ಇದ್ದಾಗ ತ್ವರಿತವಾಗಿ ಘಟನಾ ಸ್ಥಳ ತಲುಪಲು ಖಾಸಗಿ ವಾಹನದಲ್ಲಿ ತೆರಳಬಾರದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News