ಪುಲ್ವಾಮ ಹುತಾತ್ಮನ ಹೆತ್ತವರಿಗೆ 1.50 ಲಕ್ಷ ರೂ. ವಂಚಿಸಿದ ‘ನಕಲಿ ಯೋಧ’

Update: 2019-05-04 15:05 GMT

ಚಂಡೀಗಢ,ಮೇ.4: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧ ಕುಲ್ವಿಂದರ್ ಸಿಂಗ್ ಅವರ ಹೆತ್ತವರಿಗೆ ನಕಲಿ ಯೋಧನೊಬ್ಬ 1.50 ಲಕ್ಷ ರೂ. ವಂಚಿಸಿದ ಘಟನೆ ಚಂಡೀಗಢದಲ್ಲಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸೇನೆಯ ಸಮವಸ್ತ್ರ ಧರಿಸಿದ್ದ ಆರೋಪಿಯ ತನ್ನನ್ನು ತಾನು ದಿಲ್ಲಿಯಲ್ಲಿ ಸಿಆರ್‌ಪಿಎಫ್‌ನ 92ನೇ ಬಟಾಲಿಯನ್‌ನಲ್ಲಿ ಸಹಾಯಕ ಉಪ ನಿರೀಕ್ಷಕನಾಗಿರುವ ಎ.ಎಸ್ ಮೀನು ಎಂದು ಪರಿಚಯಿಸಿಕೊಂಡಿದ್ದ. ಕುಲ್ವಿಂದರ್ ಹೆತ್ತವರಿಗೆ ಸರಕಾರದಿಂದ 29 ಲಕ್ಷ ರೂ. ಪರಿಹಾರ ಮತ್ತು ಒಂದು ಇಂಧನ ಸ್ಟೇಶನನ್ನು ತೆಗೆಸಿಕೊಡುವುದಾಗಿ ಭರವಸೆ ನೀಡಿ ಅವರಿಂದ 1.50 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ವರದಿ ಮಾಡಲಾಗಿದೆ.

ತಾನು ರಾಜಸ್ತಾನದ ನಿವಾಸಿ ಎಂದು ಹೇಳಿಕೊಂಡಿದ್ದ ಆರೋಪಿ ಕುಲ್ವಿಂದರ್ ತಂದೆಯ ಬಳಿಯಿದ್ದ ಬೈಕ್ ಮತ್ತು ಮೊಬೈಲ್ ಪೋನನ್ನೂ ತೆಗೆದುಕೊಂಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಪಂಜಾಬ್ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಈ ಕುರಿತು ಮಾತನಾಡಿದ ಜಿಲ್ಲಾ ಎಸ್‌ಎಸ್‌ಪಿ ಸ್ವಪನ್ ಶರ್ಮಾ, ಆರೋಪಿ ಕೊಂಡೊಯ್ದ ಬೈಕ್ ರೊಪರ್ ಜಿಲ್ಲೆಯ ಬಿಂಡರ್ ನಗರ್ ಬಳಿ ಪತ್ತೆಯಾಗಿದೆ.

ಆರೋಪಿ ಬಳಸಿದ್ದ ಎನ್ನಲಾದ ಬಿಳಿ ಇಂಡಿಯಾ ಟ್ಯಾಕ್ಸಿ ಮತ್ತು ಅದರ ಚಾಲಕನನ್ನೂ ಪತ್ತೆ ಮಾಡಲಾಗಿದೆ. ಕಾರು ಚಾಲಕ ಈ ಅಪರಾಧದಲ್ಲಿ ಭಾಗಿಯಾಗಿಲ್ಲ ಎನ್ನುವುದು ತನಿಖೆ ವೇಳೆ ತಿಳಿದುಬಂದಿದೆ. ಸದ್ಯ ವಂಚಕನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದು ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News