ಫನಿ ಚಂಡಮಾರುತ: ಅಸ್ಸಾಂನಲ್ಲಿ ಧಾರಾಕಾರ ಮಳೆ

Update: 2019-05-04 15:23 GMT

 ಗುವಾಹತಿ, ಮೇ 4: ಫನಿ ಚಂಡಮಾರುತದ ಪರಿಣಾಮ ಅಸ್ಸಾಂನ ಹೆಚ್ಚಿನ ಭಾಗಗಳಲ್ಲಿ ಶನಿವಾರ ಭಾರೀ ಮಳೆ ಸುರಿದಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಜೊರ್ಹಾತ್ ಹಾಗೂ ಮಜುಲಿ, ಗುವಾಹತಿ ಹಾಗೂ ಉತ್ತರ ಗುವಾಹತಿ, ಧುಬ್ರಿ ಹಾಗೂ ಇತರ ಸ್ಥಳಗಳಿಗೆ ಶನಿವಾರ ಹಾಗೂ ರವಿವಾರ ದೋಣಿ ಸೇವೆಯನ್ನು ರಾಜ್ಯ ಸರಕಾರ ರದ್ದುಗೊಳಿಸಿ ಆದೇಶ ನೀಡಿದೆ.

ಗುವಾಹತಿಯಿಂದ ಶನಿವಾರ ಸಂಜೆ ವರೆಗೆ ವಿಮಾನ ಸೇವೆ ರದ್ದುಗೊಳಿಸಲಾಗಿತ್ತು. ಈಶಾನ್ಯ ಮುಂಚೂಣಿ ರೈಲ್ವೆ ಕೊಲ್ಕೊತ್ತಾ ಹಾಗೂ ಒಡಿಶಾ ನಡುವಿನ ವಿವಿಧ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಅದೇ ರೀತಿ ಕೋಲ್ಕೊತ್ತಾ, ಒಡಿಶಾ ಹಾಗೂ ಅಸ್ಸಾಂ ನಡುವೆ ಸಂಚರಿಸುವ ರೈಲನ್ನು ಕೂಡ ರದ್ದುಗೊಳಿಸಲಾಗಿದೆ. ರಾಜ್ಯದ ಈಶಾನ್ಯ ಭಾಗಗಳಲ್ಲಿ ರವಿವಾರ ಭಾರೀ ಗಾಳಿಯಿಂದೊಡಗೂಡಿ ಧಾರಾಕಾರ ಮಳೆ ಸುರಿಯಲಿದೆ ಎಂದು ಬೋರ್ಝಾರ್‌ನಲ್ಲಿರುವ ಪ್ರಾದೇಶಿಕ ಹವಾಮಾನ ಕೇಂದ್ರದ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ಫನಿ ಚಂಡ ಮಾರುತ ಸಾಗುವ ಹಿನ್ನೆಲೆಯಲ್ಲಿ ಅಸ್ಸಾಂ ಸರಕಾರ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿತ್ತು. ರಾಜ್ಯಾದ್ಯಾದ್ಯಂತದ ಕೆಲವು ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ನಿಯೋಜಿಸಲಾಗಿದೆ. ಫನಿ ಚಂಡ ಮಾರುತ ಶನಿವಾರ ದುರ್ಬಲಗೊಂಡು ಬಿರುಗಾಳಿಯಾಗಿದೆ. ಇದರಿಂದ ಪಶ್ಚಿಮಬಂಗಾಳದಲ್ಲಿ ಯಾವುದೇ ಹಾನಿ ಉಂಟಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News