ಭಾರತದಲ್ಲಿ ದಾಳಿ ನಡೆಸಿರುವ ಗುಂಪುಗಳಿಗೆ ಪಾಕ್ ನಿರಂತರ ಬೆಂಬಲ: ಅಮೆರಿಕ ರಕ್ಷಣಾ ಪರಿಣತ,

Update: 2019-05-04 15:29 GMT

ವಾಶಿಂಗ್ಟನ್, ಮೇ 4: ಭಾರತದಲ್ಲಿ ಭಯಾನಕ ಆಕ್ರಮಣಗಳನ್ನು ನಡೆಸಿರುವ ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ನೀಡುವುದನ್ನು ಪಾಕಿಸ್ತಾನ ಮುಂದುವರಿಸುತ್ತದೆ, ಯಾಕೆಂದರೆ ಅದು ತನ್ನ ‘ವಿಶ್ವಾಸದ್ರೋಹಕ್ಕೆ ಯಾವುದೇ ಬೆಲೆ ತೆತ್ತಿಲ್ಲ’ ಎಂದು ಅಮೆರಿಕದ ವೈಚಾರಿಕ ಗುಂಪೊಂದರ ಪದಾಧಿಕಾರಿ ಬಿಲ್ ರೊಗಿಯೊ ಅಮೆರಿಕದ ಸಂಸತ್ತು ಕಾಂಗ್ರೆಸ್‌ಗೆ ನೀಡಿದ ವಿವರಣೆಯಲ್ಲಿ ಹೇಳಿದ್ದಾರೆ.

‘‘ಭಯೋತ್ಪಾದನೆಗೆ ಬೆಂಬಲ ನೀಡುವ ದೇಶಗಳ ವಿರುದ್ಧದ ಹೋರಾಟವನ್ನು ನಾವು ಮುಂದುವರಿಸಬೇಕು ಹಾಗೂ ಪಾಕಿಸ್ತಾನದಂಥ ದೇಶಗಳ ವಿಷಯದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು’’ ಎಂದು ಫೌಂಡೇಶನ್ ಫಾರ್ ಡಿಫೆನ್ಸ್ ಆಫ್ ಡೆಮಾಕ್ರಸೀಸ್‌ನ ಸೀನಿಯರ್ ಫೆಲೋ ರೊಗಿಯೊ ನುಡಿದರು.

ತಾಲಿಬಾನ್‌ಗೆ ಪಾಕಿಸ್ತಾನ ನೀಡುತ್ತಿರುವ ನಿರಂತರ ಬೆಂಬಲವನ್ನು ಪ್ರಸ್ತಾಪಿಸಿದ ಅವರು, ಅಫ್ಘಾನಿಸ್ತಾನದಿಂದ ಅಮೆರಿಕದ ಸೈನಿಕರನ್ನು ಹಿಂದಕ್ಕೆ ಪಡೆಯುವ ನಿರ್ಧಾರವನ್ನು ಅನುಮೋದಿಸಲಿಲ್ಲ.

‘‘ತಾಲಿಬಾನ್‌ಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲ ಅಚಲವಾಗಿದೆ ಹಾಗೂ ಅಫ್ಘಾನಿಸ್ತಾನದಲ್ಲಿ ನಮ್ಮನ್ನು ಸೋಲಿಸಲು ಅದು ಹೊರಟಿದೆ. ನಾವು ಈಗಾಗಲೇ ಅಫ್ಘಾನಿಸ್ತಾನದಲ್ಲಿ ಸೋತಿದ್ದೇವೆ ಎಂದೇ ನಾನು ಹೇಳುತ್ತೇನೆ. ನಾವು ಈಗ ಅಫ್ಘಾನಿಸ್ತಾನದಿಂದ ಹೊರಬರುವ ವಿಧಿ ವಿಧಾನಗಳ ಕುರಿತ ಸಂಧಾನಕ್ಕಾಗಿ ಮಾತ್ರ ಪ್ರಯತ್ನಿಸುತ್ತಿದ್ದೇವೆ’’ ಎಂದು ಸಂಸತ್ತಿನಲ್ಲಿ ಮಧ್ಯಪ್ರಾಚ್ಯ, ಉತ್ತರ ಆಫ್ರಿಕ ಮತ್ತು ಅಂತರ್‌ರಾಷ್ಟ್ರೀಯ ಭಯೋತ್ಪಾದನೆ ಕುರಿತ ಹೌಸ್ ವಿದೇಶ ವ್ಯವಹಾರಗಳ ಉಪಸಮಿತಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

‘‘ನಮ್ಮ ಶತ್ರುಗಳು ತಮ್ಮ ಕಾರ್ಯಾಚರಣೆ ನೆಲೆಗಳನ್ನು ವಿಸ್ತರಿಸಿದ್ದಾರೆ ಹಾಗೂ ಯುದ್ಧಕ್ಕೆ ಬದ್ಧರಾಗಿದ್ದಾರೆ. ಹಾಗಾಗಿ ನಮ್ಮ ಮನೋಶಕ್ತಿ ಕುಗ್ಗಿದೆ’’ ಎಂದರು.

‘‘ಇದು ಸುದೀರ್ಘ ಯುದ್ಧ ಹಾಗೂ ಇಲ್ಲಿ ಬದ್ಧತೆ ಮುಖ್ಯ. ಈ ಬೆದರಿಕೆಯನ್ನು ಕೊನೆಗೊಳಿಸಲು ನಾವು ಬಯಸಿದರೆ ನಾವು ನಮ್ಮ ಬದ್ಧತೆಯನ್ನು ನವೀಕರಿಸಬೇಕು ಹಾಗೂ ಒಗ್ಗಟ್ಟನ್ನು ಪ್ರದರ್ಶಿಸಬೇಕು’’ ಎಂದು ರೊಗಿಯೊ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News