ಬೃಜೇಶ್ ಠಾಕೂರ್‌ನಿಂದ 11 ಬಾಲಕಿಯರ ಹತ್ಯೆ: ಸುಪ್ರೀಂಗೆ ಸಲ್ಲಿಸಿದ ಅಫಿದಾವಿತ್ ನಲ್ಲಿ ಸಿಬಿಐ
ಹೊಸದಿಲ್ಲಿ, ಮೇ 4: ಮುಝಫರ್‌ಪುರ ಆಶ್ರಯಧಾಮದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಬೃಜೇಶ್ ಠಾಕೂರ್ ಹಾಗೂ ಆತನ ಸಹಚರರು 11 ಬಾಲಕಿಯರನ್ನು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ ಮತ್ತು ಆಶ್ರಯಧಾಮದಲ್ಲಿರುವ ಸ್ಮಶಾನ ಭೂಮಿಯಿಂದ ಮೂಳೆಗಳ ಕಟ್ಟನ್ನು ವಶಕ್ಕೆ ಪಡೆಯಲಾಗಿದೆ ಎಂದು ಶುಕ್ರವಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ಸಿಬಿಐ ತಿಳಿಸಿದೆ.
ತನಿಖೆಯ ಸಂದರ್ಭ ಸಂತ್ರಸ್ತ ಬಾಲಕಿಯರ ಹೇಳಿಕೆಯನ್ನು ದಾಖಲಿಸಿಕೊಳ್ಳುವಾಗ 11 ಬಾಲಕಿಯರು ಕಣ್ಮರೆಯಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಓರ್ವ ಆರೋಪಿ ಗುಡ್ಡು ಪಟೇಲ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಆಶ್ರಯಧಾಮದ ಆವರಣದಲ್ಲಿರುವ ಜಮೀನಿನ ಒಂದು ಭಾಗವನ್ನು ತೋರಿಸಿದ್ದಾನೆ. ಅಲ್ಲಿ ಅಗೆದಾಗ ಮೂಳೆಗಳ ಕಟ್ಟು ಪತ್ತೆಯಾಗಿದೆ ಎಂದು ಶುಕ್ರವಾರ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ಸಿಬಿಐ ತಿಳಿಸಿದೆ. ಈ ಮಧ್ಯೆ, ಮುಝಫರ್‌ಪುರ ಆಶ್ರಯಧಾಮ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಸಿಬಿಐ ಸಮರ್ಪಕವಾಗಿ ನಡೆಸುತ್ತಿಲ್ಲ ಎಂದು ದೂರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರಿದ್ದ ನ್ಯಾಯಪೀಠ, ಈ ಬಗ್ಗೆ ಸಿಬಿಐಗೆ ನೋಟಿಸ್ ಜಾರಿಗೊಳಿಸಿದ್ದು ನಾಲ್ಕು ವಾರಗಳೊಳಗೆ ಉತ್ತರಿಸುವಂತೆ ಸೂಚಿಸಿದೆ.
ಪ್ರಕರಣದ ಬಗ್ಗೆ ಸಿಬಿಐ ಸಮಗ್ರ, ನಿಷ್ಪಕ್ಷಪಾತ ಮತ್ತು ಕ್ರಮಬದ್ಧ ತನಿಖೆ ನಡೆಸಿದೆ ಎಂದು ಸಿಬಿಐ ಪರ ವಕೀಲ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ನ್ಯಾಯಪೀಠಕ್ಕೆ ತಿಳಿಸಿದರು. ಮುಂದಿನ ವಿಚಾರಣೆಯನ್ನು ಮೇ 6ಕ್ಕೆ ನಿಗದಿಗೊಳಿಸಿತು.