ಮೋದಿ ಸರಕಾರದಡಿ 9,511 ಕೋ.ರೂ.ನಿಂದ 167 ಕೋ.ರೂ.ಗೆ ಕುಸಿದ ಒಎನ್‌ಜಿಸಿಯ ಮೀಸಲು ನಗದು !

Update: 2019-05-04 17:36 GMT

ಹೊಸದಿಲ್ಲಿ,ಮೇ 4: ತನ್ನ ವಿತ್ತೀಯ ಕೊರತೆ ಗುರಿಯನ್ನು ತಲುಪಲು ಹೆಚ್ಚಿನ ಲಾಭಾಂಶಗಳ ಪಾವತಿ,ಶೇರುಗಳ ಮರುಖರೀದಿ ಮತ್ತು ಇತರ ಸರಕಾರಿ ಒಡೆತನದ ಸಂಸ್ಥೆಗಳ ಸ್ವಾಧೀನಕ್ಕೆ ಸಾರ್ವಜನಿಕ ಕ್ಷೇತ್ರದ ಉದ್ಯಮಗಳ ಮೇಲೆ ಒತ್ತಡ ಹೇರುವ ಮೋದಿ ಸರಕಾರದ ನೀತಿಯಿಂದಾಗಿ ದೇಶದ ಅತ್ಯಂತ ಬೃಹತ್ ತೈಲ ಅನ್ವೇಷಕ ಸಂಸ್ಥೆ ಮತ್ತು ಸಾರ್ವಜನಿಕ ಕ್ಷೇತ್ರದ ಅಗ್ರಣಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ(ಒಎನ್‌ಜಿಸಿ)ದ ಆರ್ಥಿಕತೆಗೆ ತೀವ್ರ ಪೆಟ್ಟು ನೀಡಿದೆ.

ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.(ಎಚ್‌ಪಿಸಿಎಲ್)ನ್ನು ಸ್ವಾಧೀನ ಪಡಿಸಿಕೊಂಡಿದ್ದರಿಂದಾಗಿ ಸಾಲಗಳನ್ನು ತೀರಿಸಬೇಕಿರುವ ಹಾಗೂ ಶೇರು ಮರುಖರೀದಿ ಮತ್ತು ಲಾಭಾಂಶ ಪಾವತಿ ಕುರಿತಂತೆ ಸರಕಾರದ ಆದೇಶವನ್ನು ಪಾಲಿಸಬೇಕಿರುವ ಒಎನ್‌ಜಿಸಿ ಅತ್ಯಂತ ಕಡಿಮೆ ಮೀಸಲು ನಗದಿನೊಂದಿಗೆ ಕಾರ್ಯಾಚರಿಸುತ್ತಿದೆ.

2017,ಮಾರ್ಚ್‌ನಲ್ಲಿ 9,511 ಕೋ.ರೂ.ಗಳಿದ್ದ ಒಎನ್‌ಜಿಸಿಯ ಬಳಿ 2018,ಸೆಪ್ಟೆಂಬರ್‌ನಲ್ಲಿ ಒಟ್ಟು 167 ಕೋ.ರೂ.ಗಳ ನಗದು ಮತ್ತು ಬ್ಯಾಂಕ್ ಶಿಲ್ಕು ಉಳಿದುಕೊಂಡಿವೆ.

ತನ್ನ ಸಾಲಗಳನ್ನು ತೀರಿಸಲು ಸಂಸ್ಥೆಯು ತನ್ನ ಸಂಚಿತ ನಿಧಿಯನ್ನು ಬಳಸುತ್ತಿದೆ. 2018,ಮಾರ್ಚ್‌ನಲ್ಲಿ 25,592 ಕೋ.ರೂ.ಗಳಿದ್ದ ಇದು 2018 ಸೆಪ್ಟೆಂಬರ್‌ನಲ್ಲಿ ಹೆಚ್ಚುಕಡಿಮೆ ಅರ್ಧಕ್ಕೆ,ಅಂದರೆ 13,994 ಕೋ.ರೂ.ಗಳಿಗೆ ಕುಸಿದಿದೆ.

► ಇದು ಒಎನ್‌ಜಿಸಿಗೇಕೆ ಸಮಸ್ಯೆ?

ತೈಲ ಅನ್ವೇಷಣೆ ಉದ್ಯಮದ ಅಪಾಯಕಾರಿ ಸ್ವರೂಪದಿಂದಾಗಿ ತೈಲ ಅನ್ವೇಷಕ ಕಂಪನಿಗಳು ತಮ್ಮ ದುಡಿಯುವ ಬಂಡವಾಳದ ಅಗತ್ಯವನ್ನು ಪೂರೈಸಲು ಸಾಕಷ್ಟು ನಗದು ಹಣವನ್ನು ಹೊಂದಿರಬೇಕಾಗುತ್ತದೆ. ಇದು ಸಾಮಾನ್ಯವಾಗಿ 5,000 ಕೋ.ರೂ.ಗಿಂತ ಹೆಚ್ಚಿರಬೇಕಾಗುತ್ತದೆ ಎಂದು ಒಎನ್‌ಜಿಸಿಯ ಮಾಜಿ ಅಧಿಕಾರಿಯೋರ್ವರು ಹೇಳಿದರು.

ತನ್ನ ಹೂಡಿಕೆ ಹಿಂದೆಗೆತ ಗುರಿಗಳನ್ನು ಸಾಧಿಸುವ ಸರಕಾರದ ಪ್ರಯತ್ನಗಳ ಅಂಗವಾಗಿ ಒಎನ್‌ಜಿಸಿ ಕಳೆದ ವರ್ಷ 36,915 ಕೋ.ರೂ.ಗಳಿಗೆ ಎಚ್‌ಪಿಸಿಎಲ್ ಅನ್ನು ಸ್ವಾಧೀನ ಪಡಿಸಿಕೊಂಡಿತ್ತು. ಈ ಪೈಕಿ ಒಂದು ಭಾಗವನ್ನು ಅದು ತನ್ನ ಮೀಸಲು ನಿಧಿಯಿಂದ ನೀಡಿದ್ದರೆ,ಸ್ವಾಧೀನತೆಗಾಗಿ 20,000 ಕೋ.ರೂ.ಗೂ ಹೆಚ್ಚಿನ ಸಾಲವನ್ನು ಪಡೆದಿತ್ತು. ಈಗ ಮಿಗತೆ ಹಣವನ್ನು ಸಾಲವನ್ನು ಮರುಪಾವತಿಸಲು ಒಎನ್‌ಜಿಸಿ ಬಳಸುತ್ತಿರುವುದರಿಂದ ನಗದು ಹಣ ಸಂಗ್ರಹವಾಗುತ್ತಿಲ್ಲ. ಸೆಪ್ಟೆಂಬರ್ ಅಂತ್ಯದಲ್ಲಿ ಪ್ರಕಟಿಸಲಾದ ಆಯ-ವ್ಯಯ ಪತ್ರದಂತೆ ಅರ್ಧಕ್ಕೂ ಹೆಚ್ಚಿನ ಸಾಲವನ್ನು ಅದು ಮರುಪಾವತಿಸಿದೆ ಎಂದು ಸಂಸ್ಥೆಯ ನಿವೃತ್ತ ಅಧಿಕಾರಿ ತಿಳಿಸಿದರು.

ಇದರೊಂದಿಗೆ ಕಂಪನಿಯು ಲಾಭಾಂಶಗಳನ್ನೂ ಪಾವತಿಸಬೇಕಿದೆ. ಇವೆಲ್ಲವೂ ಮಿಗತೆ ಹಣಕ್ಕೆ ಕನ್ನ ಹಾಕುತ್ತಿವೆ. ತೈಲ ಅನ್ವೇಷಣೆ ಉದ್ಯಮದಲ್ಲಿ ದುಡಿಯುವ ಬಂಡವಾಳ ಅಗತ್ಯವನ್ನು ಪೂರೈಸಬೇಕಾಗುತ್ತದೆ ಮತ್ತು ಇದಕ್ಕಾಗಿ ಐದರಿಂದ ಹತ್ತು ಸಾವಿರ ಕೋ.ರೂ.ಗಳು ಅಗತ್ಯವಾಗುತ್ತವೆ. ಒಎನ್‌ಜಿಎಸ್ 2016-17ನೇ ಸಾಲಿನಲ್ಲಿ ಲಾಭಾಂಶ ವಿತರಣೆ ತೆರಿಗೆ ಸೇರಿದಂತೆ 7,764 ಕೋ.ರೂ.ಗಳ ಲಾಭಾಂಶ ವಿತರಿಸಿದ್ದರೆ,2017-18ರಲ್ಲಿ ಇದು 8,470 ಕೋ.ರೂ. ಆಗಿವೆ.

ಇದರೊಂದಿಗೆ ಡಿಸೆಂಬರ್‌ನಲ್ಲಿ 4,022 ಕೋ.ರೂ.ಗಳ ಶೇರುಗಳ ಮರುಖರೀದಿಯನ್ನೂ ಮಾಡಿದೆ.

► ಮೊಳಗುತ್ತಿರುವ ಅಪಾಯದ ಗಂಟೆ

ಸಂಸ್ಥೆಯ ಇತಿಹಾಸದಲ್ಲಿಯೇ ಎಂದೂ ನಗದು ಶಿಲ್ಕು ಇಷ್ಟೊಂದು ಅಪಾಯಕಾರಿ ಮಟ್ಟಕ್ಕೆ ಇಳಿದಿರಲಿಲ್ಲ ಎನ್ನುತ್ತಾರೆ ಒಎನ್‌ಜಿಸಿಯ ಮಾಜಿ ನಿರ್ದೇಶಕ (ಹಣಕಾಸು) ಅಲೋಕ ಕುಮಾರ ಬ್ಯಾನರ್ಜಿ ಅವರು. ಇತ್ತೀಚಿಗೆ ಎಚ್‌ಪಿಸಿಎಲ್ ಮತ್ತು ಕೆಜಿ ಬೇಸಿನ್ ಗ್ಯಾಸ್ ಬ್ಲಾಕ್‌ನಲ್ಲಿ ಗುಜರಾತ ರಾಜ್ಯ ತೈಲ ನಿಗಮದ ಪಾಲನ್ನು ಸ್ವಾಧೀನ ಪಡಿಸಿಕೊಂಡಿದ್ದು ಇದಕ್ಕೆ ಮುಖ್ಯ ಕಾರಣ ಎಂದು ಅವರು ಹೇಳಿದರು.

ಕೃಪೆ: theprint. in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News