ಈ 10 ಅಭ್ಯಾಸಗಳು ಮನುಷ್ಯನನ್ನು ನಿಧಾನವಾಗಿ ಕೊಲ್ಲುತ್ತವೆ...!

Update: 2019-05-05 14:13 GMT

ನಮ್ಮ ಅಭ್ಯಾಸಗಳು ನಮ್ಮ ಬದುಕನ್ನು ರೂಪಿಸುತ್ತವೆ ಅಥವಾ ನಾಶಗೊಳಿಸುತ್ತವೆ. ಹೀಗಾಗಿ ನಮ್ಮ ಶರೀರದ ಕ್ಷಮತೆ, ಆರೋಗ್ಯ ಮತ್ತು ಮಾನಸಿಕ ಸ್ವಾಸ್ಥಕ್ಕಾಗಿ ಉತ್ತಮ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ನಾವೆಲ್ಲ ಪ್ರಯತ್ನಿಸುತ್ತಿರುತ್ತೇವೆ. ಆದರೆ ಕೆಲವೊಮ್ಮೆ ದೀರ್ಘಾವಧಿಯಲ್ಲಿ ನಮ್ಮ ಆರೋಗ್ಯದ ಮೇಲೆ ಪರೋಕ್ಷವಾಗಿ ಹಾನಿಯನ್ನುಂಟು ಮಾಡುವ ಕೆಲವು ಜುಜುಬಿ ಅಭ್ಯಾಸಗಳ ಬಗ್ಗೆ ನಾವು ಕಾಳಜಿ ವಹಿಸುವುದಿಲ್ಲ. ಇಲ್ಲಿವೆ ನಮ್ಮನ್ನು ನಿಧಾನವಾಗಿ ಕೊಲ್ಲುವ ಅಂತಹ 10 ಅಭ್ಯಾಸಗಳು.......

ದೀರ್ಘ ಸಮಯ ಕುಳಿತಿರುವುದು

ಜನರು ಇಂದು ಜಡ ಜೀವನಶೈಲಿಯನ್ನು ಅನುಸರಿಸುತ್ತಿದ್ದಾರೆ. ಕಚೇರಿಗಳಲ್ಲಿ,ಐಟಿ ಕಂಪನಿಗಳಲ್ಲಿ,ಖಾಸಗಿ ಸಂಸ್ಥೆಗಳಲ್ಲಿಯ ಹೆಚ್ಚಿನ ಉದ್ಯೋಗಿಗಳು ತಮ್ಮ ಕಾರ್ಯ ನಿರ್ವಹಣೆಗಾಗಿ ದಿನದಲ್ಲಿ 8ರಿಂದ 10 ಗಂಟೆಗಳ ಕಾಲ ಕುಳಿತೇ ಇರಬೇಕಾದ ಅನಿವಾರ್ಯತೆಯಿದೆ. ಹೀಗೆ ಹೆಚ್ಚು ಸಮಯ ಕುಳಿತುಕೊಂಡೇ ಇರುವುದು ಬೊಜ್ಜು, ಹೃದ್ರೋಗಗಳು,ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟಗಳು,ಮಧುಮೇಹ,ಮಾನಸಿಕ ಒತ್ತಡ ಇತ್ಯಾದಿ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಅಧ್ಯಯನಗಳು ಸಾಬೀತುಗೊಳಿಸಿವೆ. ಮಹಿಳೆಯರಲ್ಲಿ ಇದು ಸ್ತನ ಕ್ಯಾನ್ಸರ,ಅಂಡಾಶಯ ಕ್ಯಾನ್ಸರ್‌ನಂತಹ ಸ್ತ್ರೀರೋಗಗಳಿಗೂ ಕಾರಣವಾಗುತ್ತದೆ. ಕೆಲಸದ ನಡುವೆ ಆಗಾಗ್ಗೆ ವಿರಾಮ ತೆಗೆದುಕೊಂಡು ಅತ್ತಿತ್ತ ಹೆಜ್ಜೆಗಳನ್ನು ಹಾಕುತ್ತಿದ್ದರೆ ಆರೋಗ್ಯಕ್ಕೆ ಹೆಚ್ಚಿನ ಹಾನಿಯನ್ನು ತಪ್ಪಿಸಬಹುದು ಎನ್ನುತ್ತಾರೆ ತಜ್ಞರು.

ಕೆಟ್ಟ ಭಂಗಿ

ನಮ್ಮ ಶರೀರದ ಕೆಟ್ಟ ಭಂಗಿಗಳು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಇಳಿಬಿದ್ದ ಭುಜಗಳು,ಬಾಗಿದ ಬೆನ್ನು ಇತ್ಯಾದಿ ಭಂಗಿಗಳು ಬೆನ್ನುಮೂಳೆ ವಕ್ರತೆ, ಕುತ್ತಿಗೆಯಲಿ ನೋವು, ಕೊಬ್ಬು ಸಂಗ್ರಹ, ಉಸಿರಾಟದ ತೋಂದರೆ ಇತ್ಯಾದಿ ಸಮಸ್ಯೆಗಳನ್ನುಂಟು ಮಾಡುತ್ತವೆ. ಕೆಟ್ಟ ಭಂಗಿಗಳು ನಮ್ಮ ಶರೀರದ ರೂಪ ಮತ್ತು ಆರೋಗ್ಯದ ಮೇಲೂ ದುಷ್ಪರಿಣಾಮಗಳನ್ನು ಬೀರುತ್ತವೆ. ಹೀಗಾಗಿ ಕುಳಿತುಕೊಳ್ಳುವು ಮತ್ತು ನಿಂತುಕೊಳ್ಳುವುದು ಸೇರಿದಂತೆ ನಮ್ಮ ಶರೀರದ ಭಂಗಿಗಳು ಸರಿಯಾದ ರೀತಿಯಲ್ಲಿರಬೇಕು.

ಅತಿಯಾದ ತಿನಿಸು

ಅನಾರೋಗ್ಯಕರ ಆಹಾರ ಮತ್ತು ಆಹಾರ ಸೇವನೆಯಲ್ಲಿ ಅನಿಯಮತತನ ಇವು ಆಧುನಿಕ ಜೀವನಶೈಲಿಯ ಪ್ರಮುಖ ಕಳವಳಕಾರಿ ಅಂಶಗಳಾಗಿವೆ. ಎಲ್ಲೆಂದರಲ್ಲಿ ಸುಲಭವಾಗಿ ದೊರೆಯುವ ಜಂಕ್ ಫುಡ್‌ಗಳು ಇದಕ್ಕೆ ಪೂರಕವಾಗಿವೆ. ಊಟಗಳ ನಡುವೆ ಆಗಾಗ್ಗೆ ತಿನ್ನುತ್ತಲೇ ಇರುವ ಅಭ್ಯಾಸವು ನಮ್ಮ ಶರೀರದಲ್ಲಿ ಕೊಬ್ಬನ್ನು ಹೆಚ್ಚಿಸುವುದು ಮಾತ್ರವಲ್ಲ, ಹೃದ್ರೋಗಗಳು,ಬೊಜ್ಜು,ಒತ್ತಡ,ಜೀರ್ಣ ಸಮಸ್ಯೆ ಇತ್ಯಾದಿಗಳಿಗೂ ಕಾರಣವಾಗುತ್ತದೆ. ನಮ್ಮ ಶರೀರಕ್ಕೆ ಆಹಾರದ ಅಗತ್ಯವಿದೆ ನಿಜ,ಆದರೆ ಅದಕ್ಕೆ ವಿಶ್ರಾಂತಿಯ ಅಗತ್ಯವೂ ಇದೆ. ಒಮ್ಮೆ ಸೇವಿಸಿದ ಆಹಾರವು ಜೀರ್ಣಗೊಳ್ಳಲು ಸಾಕಷ್ಟು ಸಮಯಾವಕಾಶ ನೀಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಮದ್ಯಪಾನ

ಮದ್ಯಪಾನವು ಇಂದು ಹೆಚ್ಚಿನವರಲ್ಲಿ ಸಾಮಾನ್ಯವಾಗಿರುವ ಗಂಭೀರ ದುರಭ್ಯಾಸವಾಗಿದೆ. ಅದರಲ್ಲೂ ಅತಿಯಾದ ಮದ್ಯಪಾನ ಶರೀರಕ್ಕೆ ಅತ್ಯಂತ ಹಾನಿಕಾರಕವಾಗಿದೆ. ಮದ್ಯಪಾನ ಯಕೃತ್ತಿಗೆ ಹಾನಿಯನ್ನುಂಟು ಮಾಡುತ್ತದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ,ಆದರೆ ಅತಿಯಾದ ಮದ್ಯಪಾನವು ಕ್ಯಾನ್ಸರ್,ಅಧಿಕ ರಕ್ತದೊತ್ತಡ, ಮಾನಸಿಕ ಅಸ್ವಸ್ಥತೆ,ಪಾರ್ಶ್ವವಾಯು,ಹೃದಯನಾಳೀಯ ರೋಗಗಳು ಇತ್ಯಾದಿಗಳಿಗೆ ಕಾರಣವಾಗುತ್ತದೆ.

ವಿವೇಚನೆಯಿಲ್ಲದೆ ವಿಟಾಮಿನ್‌ಗಳು/ಪೂರಕಗಳ ಸೇವನೆ

 ನಮ್ಮ ಶರೀರಕ್ಕೆ ವಿಟಾಮಿನ್‌ಗಳು ಮತ್ತು ಖನಿಜಗಳಂತಹ ಪೋಷಕಾಂಶಗಳ ಅಗತ್ಯವಿದೆ. ಆದರೆ ಇದೇ ಕಾರಣಕ್ಕಾಗಿ ಯಾರೇ ಆದರೂ ವೈದ್ಯರು ಶಿಫಾರಸು ಮಾಡದೆ ವಿಟಾಮಿನ್‌ಗಳು/ಪೂರಕಗಳನ್ನು ತೆಗೆದುಕೊಳ್ಳಬಾರದು. ಶರೀರಕ್ಕೆ ಅಗತ್ಯವಿರುವ ಹೆಚ್ಚಿನ ಪೋಷಕಾಂಶಗಳು ನಾವು ಸೇವಿಸುವ ಆಹಾರಗಳಿಂದಲೇ ಸಿಗುತ್ತವೆ. ವಿವೇಚನೆಯಿಲ್ಲದೆ ಪೂರಕಗಳನ್ನು ಸೇವಿಸಿದರೆ ಅವುಗಳ ಅಡ್ಡಪರಿಣಾಮಗಳು ಶರೀರಕ್ಕೆ ಲಾಭಕ್ಕಿಂತ ಹೆಚ್ಚು ಹಾನಿಯನ್ನೇ ಮಾಡುತ್ತವೆ ಎನ್ನುವುದು ನೆನಪಿರಲಿ.

ಅತಿ ಕಡಿಮೆ/ಅತಿ ಹೆಚ್ಚು ನಿದ್ರೆ

ಆರೋಗ್ಯಪೂರ್ಣ ಬದುಕಿಗೆ ಒಳ್ಳೆಯ ನಿದ್ರೆ ಅಗತ್ಯ. ನಮ್ಮ ಶರೀರ ಮತ್ತು ಮನಸ್ಸು ಪುನಃಶ್ಚೇತನಗೊಳ್ಳಲು ದಿನಕ್ಕೆ ಸರಾಸರಿ 8ರಿಂದ 10 ಗಂಟೆಗಳ ನಿದ್ರೆ ಅಗತ್ಯ. ನಿದ್ರೆಯ ಕೊರತೆಯಾದರೆ ಆಲಸ್ಯ,ದಣಿವು,ಮಂಕು ಇತ್ಯಾದಿಗಳುಂಟಾಗುತ್ತವೆ ಮತ್ತು ಇವು ಕ್ರಮೇಣ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತವೆ. ಆದರೆ ಅತಿಯಾದ ನಿದ್ರೆಯೂ ಖಿನ್ನತೆ,ಉದ್ವೇಗ,ಹೃದ್ರೋಗಗಳು,ಮಧುಮೇಹ ಮತ್ತು ಪಾರ್ಶ್ವವಾಯು ವಿನ ಅಪಾಯವನ್ನು ಹೆಚ್ಚಿಸುತ್ತದೆ.

ಕತ್ತರಿಗಾಲಿನಲ್ಲಿ ಕುಳಿತುಕೊಳ್ಳುವುದು

ಹೆಚ್ಚಿನವರು ಕುರ್ಚಿಯಲ್ಲಿ ಅಥವ ಸೋಫಾದಲ್ಲಿ ಕತ್ತರಿಗಾಲಿನಲ್ಲಿ,ಅಂದರೆ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುತ್ತಾರೆ,ಆದರೆ ಇದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಲ್ಲುದು. ಹೀಗೆ ಕುಳಿತುಕೊಳ್ಳುವುದರಿಂದ ರಕ್ತನಾಳಗಳ ಮೇಲೆ ಒತ್ತಡ ಬೀಳುತ್ತದೆ ಮತ್ತು ರಕ್ತದೊತ್ತಡವು ಗಣನೀಯವಾಗಿ ಹೆಚ್ಚುತ್ತದೆ. ಅದು ಪೃಷ್ಠಗಳು ಮತ್ತು ಕೀಲುಗಳ ಮೇಲೆ ಅನಗತ್ಯ ಒತ್ತಡವನ್ನಂಟು ಮಾಡುತ್ತದೆ ಮತ್ತು ಸಂದುನೋವು,ಪೃಷ್ಠ ಸ್ಥಳಾಂತರ, ಬೊಜ್ಜು,ಉಸಿರಾಟದ ತೊಂದರೆ,ರಕ್ತ ಹೆಪ್ಪುಗಟ್ಟುವಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ನಿರ್ಬಂಧಿತ ಆಹಾರಕ್ರಮ

ಆಹಾರವೂ ಗ್ಲಾಮರ್ ಪಡೆದುಕೊಂಡಿರುವ ಯುಗದಲ್ಲಿ ನಾವಿದ್ದೇವೆ. ವಿವಿಧ ಜೀವನಶೈಲಿಗಳು ಮತ್ತು ಆಯ್ಕೆಗಳಿಂದಾಗಿ ಶುದ್ಧ ಸಸ್ಯಾಹಾರ,ಕೀಟೊ,ಗ್ಲುಟೆನ್‌ಮುಕ್ತ,ಸಕ್ಕರೆಮುಕ್ತ ಇತ್ಯಾದಿ ಆಹಾರಗಳು ಇಂದು ಜನರಿಗೆ ಲಭ್ಯವಿವೆ.

ಕೆಲವರಿಗೆ ಅವರ ಆರೋಗ್ಯ ಸಮಸ್ಯೆಗಳಿಂದಾಗಿ ನಿರ್ಬಂಧಿತ ಅಥವಾ ಪಥ್ಯಾಹಾರಕ್ರಮವನ್ನು ಅನುಸರಿಸುವಂತೆ ವೈದ್ಯರು ಶಿಫಾರಸು ಮಾಡಿದರೆ,ಇತರರು ಉತ್ತಮ ಆರೋಗ್ಯದ ಉದ್ದೇಶದಿಂದ ಇಂತಹ ಆಹಾರಕ್ರಮವನ್ನು ಅನುಸರಿಸುತ್ತಾರೆ. ಆದರೆ ವಿವೇಚನೆಯಿಲ್ಲದೆ ಇಂತಹ ಫ್ಯಾನ್ಸಿ ಆಹಾರಕ್ರಮಗಳನ್ನು ಅನುಸರಿಸುವುದು ಶರೀರದಲ್ಲಿಯ ಪೋಷಕಾಂಶಗಳನ್ನು ಕಡಿಮೆಗೊಳಿಸುತ್ತದೆ.

ನಿಮಗೆ ಗ್ಲುಟೆನ್ ಅಲರ್ಜಿಯಿದ್ದರೆ ನೀವು ಗ್ಲುಟೆನ್‌ಮುಕ್ತ ಆಹಾರ ಕ್ರಮವನ್ನು ಅನುಸರಿಸಬೇಕಿಲ್ಲ,ಏಕೆಂದರೆ ಗೋದಿ,ಬಾರ್ಲಿ ಮತ್ತಿತರ ಗ್ಲುಟೆನ್ ಸಹಿತ ಆಹಾರಗಳಲ್ಲಿಯ ಪ್ರೋಟಿನ್ ನಿಮ್ಮ ಶರೀರಕ್ಕೆ ಅಗತ್ಯವಾಗಿರುತ್ತದೆ.

ಕಂಪ್ಯೂಟರ್/ಮೊಬೈಲ್‌ಗಳ ಅತಿಯಾದ ಬಳಕೆ

 ಡಿಜಿಟಲ್ ಯುಗ ನಮ್ಮನ್ನು ಅನಾರೋಗ್ಯದ ಮಾರ್ಗದಲ್ಲಿ ಸಾಗಿಸುತ್ತಿದೆ. ಕಂಪ್ಯೂಟರ್ ಮತ್ತು ಮೊಬೈಲ್‌ನ ಅತಿಯಾದ ಬಳಕೆಯಿಂದ ಹಾನಿ ತಪ್ಪಿದ್ದಲ್ಲ. ಅಂತರ್ಜಾಲದ ವಿಶಾಲ ಜಗತ್ತಿನೊಡನೆ ಸಂಪರ್ಕ ಹೊಂದಿರಲು ನಾವು ಗಂಟೆಗಟ್ಟಲೆ ಕಾಲ ಈ ಸಾಧನಗಳ ಪರದೆಗಳನ್ನು ವೀಕ್ಷಿಸುತ್ತಿರುತ್ತೇವೆ. ಆದರೆ ಇದು ಇತರ ಅಭ್ಯಾಸಗಳಂತೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸವಾಲುಳನ್ನು ಒಡ್ಡುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅತಿಯಾದ ತೊಡಗುವಿಕೆಯು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಈ ಸಾಧನಗಳಿಂದ ಹೊರಸೂಸುವ ಹಾನಿಕಾರಕ ವಿಕಿರಣಗಳು ನಮ್ಮ ಆರೋಗ್ಯದ ಮೇಲೂ ದುಷ್ಪರಿಣಾಮಗಳನ್ನುಂಟು ಮಾಡುತ್ತವೆ.

ಬೆಳಗಿನ ಕಾಫಿ ಸೇವನೆ

ಕಾಫಿ ನಮಗೆ ಸ್ಫೂರ್ತಿಯನ್ನು ನೀಡಬಲ್ಲುದು,ಆದರೆ ಬೆಳಿಗ್ಗೆ ಎದ್ದ ಬಳಿಕ ಕಾಫಿ ಸೇವನೆಯೇ ಮೊದಲ ಕೆಲಸವಾಗಿದ್ದರೆ ಅದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಲ್ಲುದು.

 ನಾವು ರಾತ್ರಿ ನಿದ್ರಿಸಿದ್ದಾಗ ನಮ್ಮ ಶರೀರವು ನಿರ್ಜಲೀಕರಣಗೊಂಡಿರುತ್ತದೆ ಮತ್ತು ಬೆಳಿಗ್ಗೆ ಎದ್ದ ಬಳಿಕ ಕಾಫಿಯನ್ನು ಸೇವಿಸಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಅದು ಆಮ್ಲೀಯತೆಯನ್ನುಂಟು ಮಾಡುವ ಜೊತೆಗೆ ರಕ್ತದೊತ್ತಡ ಮತ್ತು ಹೃದಯ ಬಡಿತಗಳನ್ನು ಹೆಚ್ಚಿಸುತ್ತದೆ. ಕಾಫಿಯು ಸಕ್ಕರೆಯಿಂದ ಕೂಡಿದ್ದರೆ ರಕ್ತದಲ್ಲಿಯ ಗ್ಲುಕೋಸ್ ಮಟ್ಟವನ್ನೂ ಹೆಚ್ಚಿಸುತ್ತದೆ. ಹೀಗಾಗಿ ಆರೋಗ್ಯಕರ ಬದುಕು ನಿಮ್ಮದಾಗಿಸಲು ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಸೇವಿಸಬೇಡಿ,ಕೆಲವು ಗಂಟೆಗಳ ಅಂತರವಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News