ಬಾಬರಿ ಮಸೀದಿ ಧ್ವಂಸ ‘ದೊಡ್ಡ ತಪ್ಪು’: ಕರಸೇವಕ ರಾಕೇಶ್ ಕುಮಾರ್

Update: 2019-05-05 13:33 GMT

ಬಾಬರಿ ಮಸೀದಿ ದ್ವಂಸದಲ್ಲಿ ಭಾಗಿಯಾಗಿದ್ದ ಕರಸೇವಕ ರಾಕೇಶ್ ಕುಮಾರ್ ಎಂಬವರು ದೇಶದ ಇತಿಹಾಸದಲ್ಲಿ ಕಳಂಕವಾಗಿ ಉಳಿದಿರುವ 1992ರ ಘಟನೆಯನ್ನು ‘ದೊಡ್ಡ ತಪ್ಪು’ ಎಂದು ಒಪ್ಪಿಕೊಂಡಿದ್ದಾರೆ. thewire.in ರಾಕೇಶ್ ಕುಮಾರ್ ರನ್ನು ಸಂದರ್ಶಿಸಿದ್ದು ಅವರ ಮಾತುಗಳು ಹೀಗಿವೆ…

“ಅಂದು ಅಷ್ಟು ಜನ ಎಲ್ಲಿಂದ, ಹೇಗೆ ಬಂದರು ಎನ್ನುವುದು ಯಾರಿಗೂ ಗೊತ್ತಿಲ್ಲ. ಆಗ ನನಗೆ 12-13 ವಯಸ್ಸು. ಎಲ್ಲರೂ ನಾನಾ ಕಡೆಗಳಿಂದ ಆಗಮಿಸಿದ್ದರು. ಬೆಳಗ್ಗೆ ಹೊತ್ತಿಗಾಗುವಾಗ ಕಾಲಿಡಲೂ ಜಾಗವಿರಲಿಲ್ಲ. ನಾನು ಗುಂಬಜುಗಳು ಹೇಗೆ ಉರುಳುತ್ತವೆ ಎನ್ನುವುದನ್ನು ನೋಡುತ್ತಿದ್ದೆ” ಎಂದವರು ಹೇಳುತ್ತಾರೆ.

ಮುಂದುವರಿದು ಮಾತನಾಡುವ ಅವರು, “ಅಯೋಧ್ಯೆಯ ಜನರು ಮಂದಿರ-ಮಸೀದಿಗಾಗಿ ಎಂದಿಗೂ ಜಗಳವಾಡಿಲ್ಲ. ರಾಜಕಾರಣಿಗಳು ಮಾತ್ರ ಮಂದಿರ-ಮಸೀದಿಗಳ ಹೆಸರುಗಳನ್ನು ಬಳಸುತ್ತಿದ್ದಾರೆ. ಇದೆಲ್ಲಾ ಬರೀ ರಾಜಕಾರಣ. ಇಂದೂ ಕೂಡ ಅಯೋಧ್ಯೆಯಲ್ಲಿ ಯಾರಾದರೂ ಮುಸ್ಲಿಮರು ಸಿಕ್ಕರೆ ನಮಗೆ ಯಾವುದೇ ತೊಂದರೆಯಿಲ್ಲ ಎಂದೇ ಹೇಳುತ್ತಾರೆ. ಸಣ್ಣ ಪ್ರಾಯದಲ್ಲಿದ್ದಾಗ ನಾವು ಕೋಪಗೊಂಡಿದ್ದೆವು. ಯಾವುದೇ ಅಭಿವೃದ್ಧಿಯಿರಲಿಲ್ಲ. ಮಂದಿರ-ಮಸೀದಿ ಹೆಸರುಗಳಲ್ಲಿ ರಾಜಕಾರಣ ನಡೆಯುತ್ತಿತ್ತು. 42 ವರ್ಷಗಳ ಹಿಂದೆ ಅಯೋಧ್ಯೆ ಹೇಗಿತ್ತೋ, ಇಂದಿಗೂ ಹಾಗೆಯೇ ಇದೆ. ಆದಿತ್ಯನಾಥ್ ಬರುತ್ತಾರೆ, ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಏನೂ ನಡೆದಿಲ್ಲ. ಇವರ ರಾಜಕಾರಣದಲ್ಲಿ ನಮ್ಮ ಜೀವನೋಪಾಯಕ್ಕೆ ಕಲ್ಲು ಹಾಕುತ್ತಾರೆ”

“ಅಯೋಧ್ಯೆಯಲ್ಲಿ ಇನ್ನಾದರೂ ಬದಲಾವಣೆಯಾಗಬೇಕು. ಆದಿತ್ಯನಾಥ್ ಪ್ರತಿಮೆ ನಿರ್ಮಿಸಬೇಕು ಎಂದು ಹೇಳುತ್ತಾರೆ. ಸರಕಾರ ಬಯಸಿದರೆ ಬದಲಾವಣೆ ಸಾಧ್ಯವಿದೆ. ಮಥುರಾ. ಕಾಶಿ, ಆಗ್ರಾದಲ್ಲಿ ಪ್ರವಾಸೋದ್ಯಮ ಉತ್ತಮ ರೀತಿಯಲ್ಲಿದೆ. ಅಲ್ಲಿ ಪ್ರವಾಸೋದ್ಯಮಕ್ಕೆ ರೈಲುಗಳಿವೆ. ಆದರೆ ಇಲ್ಲಿಲ್ಲ, ಇರುವ ಸಿಂಗಲ್ ಲೈನ್ ರೈಲಿನ ಪ್ರಯಾಣಿಸಿದರೆ ಭಾರೀ ತಡವಾಗುತ್ತದೆ” ಎಂದರು.

ಮಂದಿರ-ಮಸೀದಿ ಎನ್ನುವುದು ಬರೀ ಭರವಸೆಯೇ, ಅಥವಾ ಯಾವುದೇ ಉದ್ದೇಶವಿಲ್ಲವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ಭರವಸೆ ಇಟ್ಟು ಕೊನೆಗೆ ನಾವು ಎಷ್ಟು ಸೋತಿದ್ದೇವೆಂದರೆ ನಮಗೀಗ ನಮ್ಮ ಬದುಕಿನ ಮೇಲೆಯೇ ಭರವಸೆ ಇಲ್ಲ. ಮಂದಿರ ವಿಚಾರದಲ್ಲಿ ಭರವಸೆಯೇ ಇಲ್ಲ. ಮಂದಿರ ನಿರ್ಮಾಣವಾಗುತ್ತದೆಯೋ, ಇಲ್ಲವೇ ಎನ್ನುವುದು ತಿಳಿದಿಲ್ಲ, ನಮ್ಮ ಕೂದಲು ಬಿಳಿಯಾಗಿದೆ. ನಿರ್ಮಾಣವಾದರೂ, ಆಗದಿದ್ದರೂ ನಮಗೇನೂ ಇಲ್ಲ. ಮಂದಿರ ಆದರೂ, ಮಸೀದಿ ಆದರೂ ನಮಗೇನು ವ್ಯತ್ಯಾಸವಾಗದು. ನಮಗೆ ನಮ್ಮ ದಿನದ ರೊಟ್ಟಿ ಸಂಪಾದಿಸುವುದು ಮುಖ್ಯ. ಅದಕ್ಕೆ ಯಾವುದರಿಂದ ಉಪಕಾರವಾಗುತ್ತದೆ ಎಂದು ನಾವು ನೋಡುತ್ತೇವೆ. ನಾವು ದುಡಿದು ತಿನ್ನುವವರು, ಮಕ್ಕಳನ್ನು ಬೆಳೆಸುವವರು.  ಈಗ ನಿರ್ಮಾಣವಾಗುತ್ತದೆ ಎಂದು ನಾವು ಪ್ರತಿ ಬಾರಿ ಭರವಸೆ ಹೊಂದಿದ್ದೆವು, ಕಾಯುತ್ತಿದ್ದೆವು. ಇಲ್ಲಿ ನೀವೇ ನೋಡಿ. ಇಲ್ಲಿನ ಅಂಗಡಿಗಳನ್ನು ನೋಡಿ. ಎಂತಹ ಪರಿಸ್ಥಿತಿಯಲ್ಲಿದೆ ನೋಡಿ.  ಆದರೆ ಅಂದು ನಡೆದದ್ದರಲ್ಲಿ ತಪ್ಪಾಗಿದೆ. ಆ ಸಮಯದಲ್ಲಿ ತಪ್ಪು ನಡೆದಿತ್ತು” ಎಂದವರು ಹೇಳಿದರು.

ಕೃಪೆ: thewire.in

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News