ನನ್ನ ಮನವಿಯಂತೆ ಸೌದಿ ಜೈಲುಗಳಿಂದ 850 ಭಾರತೀಯರ ಬಿಡುಗಡೆ: ಮೋದಿ

Update: 2019-05-05 15:13 GMT

ಲಕ್ನೋ,ಮೇ.5: “ನಾನು ಮನವಿ ಮಾಡಿದ ಪರಿಣಾಮ ಸೌದಿ ಅರೇಬಿಯ ತನ್ನ ಜೈಲುಗಳಲ್ಲಿ ಬಂಧಿಯಾಗಿರುವ 850 ಭಾರತೀಯರನ್ನು ರಮಝಾನ್ ತಿಂಗಳಲ್ಲಿ ಬಿಡುಗಡೆ ಮಾಡಿದೆ” ಎಂದು ಪ್ರಧಾನಿ ಮೋದಿ ರವಿವಾರ ತಿಳಿಸಿದ್ದಾರೆ.

“ಸೌದಿ ಅರೇಬಿಯದ ದೊರೆ ಭಾರತಕ್ಕೆ ಆಗಮಿಸಿದ್ದಾಗ ಸೌದಿ ಜೈಲುಗಳಲ್ಲಿ ಬಂಧಿಯಾಗಿರುವ ಭಾರತೀಯರನ್ನು ರಮಝಾನ್ ತಿಂಗಳಿಗೂ ಮೊದಲು ಬಿಡುಗಡೆ ಮಾಡುವಂತೆ ನಾನು ಅವರಲ್ಲಿ ಮನವಿ ಮಾಡಿಕೊಂಡಿದ್ದೆ. ಅವರು ನನ್ನ ಮನವಿಯನ್ನು ಸ್ವೀಕರಿಸಿದರು” ಎಂದು ಮೋದಿ ಉತ್ತರ ಪ್ರದೇಶದ ಬಡೋಹಿ ಜಿಲ್ಲೆಯಲ್ಲಿ ಚುನಾವಣಾ ಭಾಷಣ ಮಾಡುವ ವೇಳೆ ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಭಾರತದ ಹೆಚ್ಚುತ್ತಿರುವ ಪ್ರತಿಷ್ಠೆಯ ಪರಿಣಾಮವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಜೈಶೆ ಮುಖ್ಯಸ್ಥ ಮಸೂದ್ ಅಝರ್‌ನನ್ನು ಅಂತರ್‌ರಾಷ್ಟ್ರೀಯ ಉಗ್ರ ಎಂದು ಘೋಷಿಸಿದೆ ಎಂದು ಮೋದಿ ತಿಳಿಸಿದ್ದಾರೆ. ದೇಶ ನಾಲ್ಕು ರೀತಿಯ ಪಕ್ಷಗಳನ್ನು ಕಂಡಿದೆ, ನಾಲ್ಕು ರೀತಿಯ ಆಡಳಿತ ಮತ್ತು ರಾಜಕೀಯ ಸಂಸ್ಕೃತಿಯನ್ನು ಕಂಡಿದೆ ಎಂದು ತಿಳಿಸಿದ ಮೋದಿ, ಮೊದಲನೆಯದು, ನಾಮಪಂಥಿ (ವಂಶ), ಎರಡನೆಯದು, ವಾಮಪಂಥಿ, ಮೂರನೆಯದು ದಮನ ಮತ್ತು ದಮಪಂಥಿ ಹಾಗೂ ನಾಲ್ಕನೆಯದು ವಿಕಾಸಪಂಥಿ ಎಂದು ವಿವರಿಸಿದ್ದಾರೆ. ಮಹಾಮಿಲಾವಟ್ ಪಕ್ಷ ಅಧಿಕಾರಕ್ಕೆ ಬಂದರೆ ಆ್ಯಂಬುಲೆನ್ಸ್ ಹಗರಣ, ಎನ್‌ಆರ್‌ಎಚ್‌ಎಂ ಹಗರಣದಂತಹ ಹಗರಣಗಳು ನಡೆಯುತ್ತವೆ. ನಾವು ಅಧಿಕಾರಕ್ಕೇರಿದರೆ ಆ ಅವಕಾಶವನ್ನು ಜನರ ಸೇವೆಗೆ ಬಳಸುತ್ತೇವೆ ಮತ್ತು ಆಯುಷ್ಮಾನ್ ಭಾರತದಂತಹ ಯೋಜನೆಗಳನ್ನು ಆರಂಭಿಸುತ್ತೇವೆ ಎಂದು ಮೋದಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News