×
Ad

ಫನಿ ಚಂಡಮಾರುತ: ಸಾವಿನ ಸಂಖ್ಯೆ 16ಕ್ಕೆ ಏರಿಕೆ

Update: 2019-05-05 22:54 IST

ಹೊಸದಿಲ್ಲಿ, ಮೇ 5: ಫನಿ ಚಂಡಮಾರುತ ಅಪ್ಪಳಿಸಿದ ಪರಿಣಾಮ ಸಂಭವಿಸಿದ ದುರ್ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ ರವಿವಾರ 16ಕ್ಕೆ ಏರಿಕೆಯಾಗಿದೆ. ರಾಜ್ಯದ ಕರಾವಳಿ ಪ್ರದೇಶದಲ್ಲಿ ಈ ಚಂಡಮಾರುತದ ಹಾವಳಿಗೆ ತುತ್ತಾದ 10 ಸಾವಿರ ಗ್ರಾಮಗಳು ಹಾಗೂ 52 ನಗರ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ.

ಫನಿ ಚಂಡಮಾರುತಕ್ಕೆ ಸಂಬಂಧಿಸಿದ ದುರ್ಘಟನೆಗಳಲ್ಲಿ ಒಡಿಶಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಶುಕ್ರವಾರ 8 ಇದ್ದು, ರವಿವಾರ 16ಕ್ಕೆ ಏರಿಕೆಯಾಗಿದೆ. ಮಯೂರ್‌ ಭಂಜ್ ಜಿಲ್ಲೆಯಲ್ಲಿ 4, ಪುರಿ, ಭುವನೇಶ್ವರ ಹಾಗೂ ಜೈಪುರದಲ್ಲಿ ತಲಾ 3, ಕಿಯೋಂಝಾರ್, ನಯಾಗಢ ಹಾಗೂ ಕೇಂದ್ರಪಾರದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕತಕ್, ಭದ್ರಾಕ್, ಕೇಂದ್ರಪಾರ, ಜಗತ್‌ಸಿಂಗ್‌ಪುರ, ಬಾಲಸೂರ್, ಮಯೂರ್‌ ಭಂಜ್, ಕಿಯೋಂಝಾರ್, ಧೆಂಕಾನಲ್, ನಯಾಗಢ ಮೊದಲಾದ ಜಿಲ್ಲೆಗಳು ಚಂಡಮಾರುತದಿಂದ ತೀವ್ರ ಹಾನಿಗೀಡಾಗಿವೆ. ಈ ಜಿಲ್ಲೆಗಳ ಬಗೆಗಿನ ವಿವರಗಳನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯುತ್ ಸಂಪರ್ಕ ಹಾಗೂ ನೀರು ಪೂರೈಕೆಯನ್ನು ಮರು ಸ್ಥಾಪಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈ ಸೇವೆಗಳನ್ನು ಮರು ಸ್ಥಾಪಿಸಲು ನೂರಾರು ಎಂಜಿನಿಯರ್‌ಗಳು ಹಾಗೂ ತಂತ್ರಜ್ಞರು ಶ್ರಮಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News