ಮ್ಯಾನ್ಮಾರ್ ನಲ್ಲಿ 500 ದಿನಗಳ ಜೈಲುವಾಸದ ನಂತರ ‘ರಾಯ್ಟರ್ಸ್’ ಪತ್ರಕರ್ತರ ಬಿಡುಗಡೆ

Update: 2019-05-07 08:45 GMT

ಯಾಂಗೊನ್, ಮೇ 7: ಅಧಿಕೃತ ಗೌಪ್ಯತಾ ಕಾಯಿದೆ ಉಲ್ಲಂಘಿಸಿದ ಪ್ರಕರಣದಲ್ಲಿ ಅಪರಾಧಿಗಳೆಂದು ಘೋಷಿತರಾಗಿ  ಮ್ಯಾನ್ಮಾರ್ ನಲ್ಲಿ ಜೈಲು ಶಿಕ್ಷೆಗೊಳಗಾಗಿದ್ದ ಇಬ್ಬರು ರಾಯ್ಟರ್ಸ್ ಪತ್ರಕರ್ತರು 500 ದಿನಗಳ ನಂತರ ಮಂಗಳವಾರ ಯಾಂಗೊನ್ ಹೊರವಲಯದಲ್ಲಿರುವ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ಪತ್ರಕರ್ತರಾದ ವಾ ಲೋನ್ (33) ಹಾಗೂ ಕ್ಯಾವ್ ಸೋ ಊ (29) ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಅಪರಾಧಿಗಳೆಂದು ಘೋಷಿಸಲ್ಪಟ್ಟಿದ್ದರಲ್ಲದೆ, ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅವರಿಗೆ ನೀಡಲಾದ ಶಿಕ್ಷೆಗೆ ಮ್ಯಾನ್ಮಾರ್ ಸಾಕಷ್ಟು ಟೀಕೆಗೊಳಗಾಗಿತ್ತಲ್ಲದೆ, ಮಾನವ ಹಕ್ಕು ಕಾರ್ಯಕರ್ತರ ಕೆಂಗಣ್ಣಿಗೂ ಗುರಿಯಾಗಿತ್ತು.

ಅಧ್ಯಕ್ಷರು ನೀಡಿದ ಕ್ಷಮಾದಾನದ ಅನ್ವಯ ಮಂಗಳವಾರ ಬಿಡುಗಡೆಯ ಭಾಗ್ಯ ಕಂಡ 6,520 ಕೈದಿಗಳಲ್ಲಿ ಅವರಿಬ್ಬರೂ  ಸೇರಿದ್ದರು. ಕಳೆದ ತಿಂಗಳಿನಿಂದ ಅಧ್ಯಕ್ಷ ವಿನ್ ಮೈಯಿಂಟ್ ಸಾವಿರಾರು ಕೈದಿಗಳಿಗೆ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಿದ್ದಾರೆ. ಎಪ್ರಿಲ್ 17ರಂದು ಮ್ಯಾನ್ಮಾರ್ ನಲ್ಲಿ ಆರಂಭಗೊಂಡ ಸಾಂಪ್ರದಾಯಿಕ ಹೊಸ ವರ್ಷದ ಸಂದರ್ಭ ಕೈಗಳನ್ನು ಬಿಡುಗಡೆಗೊಳಿಸುವುದು ಸಾಮಾನ್ಯವಾಗಿದೆ.

ತನ್ನ ಇಬ್ಬರು ಪತ್ರಕರ್ತರು ಯಾವುದೇ ತಪ್ಪು ಮಾಡಿಲ್ಲ ಎಂದು ವಾದಿಸಿದ್ದ ರಾಯ್ಟರ್ಸ್ ಅವರ ಬಿಡುಗಡೆಗೆ ಆಗ್ರಹಿಸಿತ್ತು.

ತಮ್ಮ ಬಿಡುಗಡೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ  ಪ್ರಯತ್ನಗಳಿಗೆ ಇಬ್ಬರು ಪತ್ರಕರ್ತರೂ ಧನ್ಯವಾದ ಹೇಳಿದ್ದಾರೆ. ನಂತರ ಇಬ್ಬರೂ ತಮ್ಮ ಕುಟುಂಬಗಳನ್ನು ಭೇಟಿಯಾದ ಕ್ಷಣ ಭಾವಪೂರ್ಣವಾಗಿತ್ತು.

2017ರಲ್ಲಿ ಬಂಧನಕ್ಕೊಳಗಾಗುವ ಮುನ್ನ ಇಬ್ಬರೂ ಮ್ಯಾನ್ಮಾರ್ ಭದ್ರತಾ ಪಡೆಗಳು ಹಾಗೂ ಬೌದ್ಧ ಧರ್ಮೀಯರು ಪಶ್ಚಿಮ ಮ್ಯಾನ್ಮಾರ್ ನ ರಾಖೈನ್ ರಾಜ್ಯದಲ್ಲಿ 10 ಮಂದಿ ರೋಹಿಂಗ್ಯ ಮುಸ್ಲಿಂ ವ್ಯಕ್ತಿಗಳು ಹಾಗೂ ಬಾಲಕರನ್ನು ಹತ್ಯೆಗೈದ ಘಟನೆಯ ತನಿಖಾ ವರದಿ ಸಿದ್ಧಪಡಿಸುತ್ತಿದ್ದರು.

ಈ ವರದಿಗಾಗಿ ಪ್ರತಿಷ್ಠಿತ ಪುಲಿಟ್ಝರ್ ಪ್ರಶಸ್ತಿಯೂ ಇತ್ತೀಚೆಗೆ ದೊರಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News