ಕರ್ತವ್ಯದಲ್ಲಿ ಮೃತಪಟ್ಟ 115 ಸಿಬ್ಬಂದಿಗೆ ವಿಶ್ವಸಂಸ್ಥೆ ಗೌರವ: ಇಬ್ಬರು ಭಾರತೀಯರು

Update: 2019-05-07 17:12 GMT

ವಿಶ್ವಸಂಸ್ಥೆ, ಮೇ 7: ಕರ್ತವ್ಯದಲ್ಲಿರುವಾಗ ಮೃತಪಟ್ಟ ತನ್ನ 115 ಮಂದಿ ಶಾಂತಿಪಾಲಕರು ಮತ್ತು ಸಿಬ್ಬಂದಿಯನ್ನು ವಿಶ್ವಸಂಸ್ಥೆ ಗೌರವಿಸಿದ್ದು, ಅವರಲ್ಲಿ ಇಬ್ಬರು ಭಾರತೀಯರು ಸೇರಿದ್ದಾರೆ.

ಕಾಂಗೊದಲ್ಲಿ ನಿಯೋಜಿಸಲ್ಪಟ್ಟ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿದ್ದ ಭಾರತೀಯ ಪೊಲೀಸ್ ಅಧಿಕಾರಿ ಜಿತೇಂದ್ರ ಕುಮಾರ್ ಮತ್ತು ಇಥಿಯೋಪಿಯನ್ ಏರ್‌ ಲೈನ್ಸ್ ‌ನ ವಿಮಾನ ಅಪಘಾತದಲ್ಲಿ ಮೃತಪಟ್ಟ ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದ ಸಲಹೆಗಾರ್ತಿ ಶಿಖಾ ಗಾರ್ಗ್ ವಿಶ್ವಸಂಸ್ಥೆಯ ಗೌರವಕ್ಕೊಳಗಾದವರು.

ಇಥಿಯೋಪಿಯ ರಾಜಧಾನಿ ಅಡಿಸ್ ಅಬಾಬದಿಂದ ನೈರೋಬಿಗೆ ಹಾರುತ್ತಿದ್ದ ವಿಮಾನವು ಅಪಘಾತಕ್ಕೀಡಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ. ಅವರ ಪೈಕಿ ಶಿಖಾ ಗಾರ್ಗ್ ಒಬ್ಬರು. ಅವರು ನೈರೋಬಿಯಲ್ಲಿ ನಡೆಯಲಿದ್ದ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಸಮಾವೇಶದಲ್ಲಿ ಭಾಗವಹಿಸಲು ತೆರಳುತ್ತಿದ್ದರು.

ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್, ಜನರಲ್ ಅಸೆಂಬ್ಲಿ ಅಧ್ಯಕ್ಷೆ ಮರಿಯಾ ಫೆರ್ನಾಂಡ ಎಸ್ಪಿನೋಸ, ಭದ್ರತಾ ಮಂಡಳಿ ಅಧ್ಯಕ್ಷ ಡಯಾನ್ ಟ್ರಿಯಾನ್‌ಸ್ಯಾಹ್ ಡಜನಿ ಮತ್ತು ಆಪರೇಶನಲ್ ಸಪೋರ್ಟ್‌ನ ಅಧೀನ ಮಹಾಕಾರ್ಯದರ್ಶಿ ಅತುಲ್ ಖಾರೆ ಹಾಗೂ ವಿಶ್ವಸಂಸ್ಥೆಯ ಉನ್ನತ ಅಧಿಕಾರಿಗಳು ಮತ್ತು ಶಾಂತಿ ಪಾಲನಾ ಸಿಬ್ಬಂದಿ, ಸೋಮವಾರ ನಡೆದ ಸಮಾರಂಭದಲ್ಲಿ ಕರ್ತವ್ಯದಲ್ಲಿರುವಾಗ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News