ಲಂಕಾ ಉಗ್ರ ಗುಂಪಿನ ಬಳಿ 700 ಕೋಟಿ ರೂ. ಸೊತ್ತು

Update: 2019-05-07 17:17 GMT

ಕೊಲಂಬೊ, ಮೇ 7: ಶ್ರೀಲಂಕಾದಲ್ಲಿ ಈಸ್ಟರ್ ರವಿವಾರದ ಭಯೋತ್ಪಾದಕ ದಾಳಿಯನ್ನು ನಡೆಸಿದೆಯೆನ್ನಲಾದ ಭಯೋತ್ಪಾದಕ ಗುಂಪು ನ್ಯಾಶನಲ್ ತೌಹೀದ್ ಜಮಾಅತ್ (ಎನ್‌ಟಿಜೆ) 14 ಕೋಟಿ ರೂಪಾಯಿ ನಗದು ಮತ್ತು 700 ಕೋಟಿ ರೂಪಾಯಿಗೂ ಅಧಿಕ ಮೌಲದ್ಯ ಇತರ ಆಸ್ತಿಗಳನ್ನು ಹೊಂದಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಸಿಐಡಿ ನಡೆಸಿದ ತನಿಖೆಯ ವೇಳೆ ಈ ಸೊತ್ತುಗಳು ಮತ್ತು ನಗದು ಪತ್ತೆಯಾಗಿವೆ.

‘‘ಅರ್ಧದಷ್ಟು ನಗದನ್ನು ಸಿಐಡಿ ವಶಕ್ಕೆ ಪಡೆದಿದೆ ಹಾಗೂ ಉಳಿದ ನಗದನ್ನು ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲಾಗಿದೆ. ಈ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಸಿಐಡಿ ಕ್ರಮಗಳನ್ನು ತೆಗೆದುಕೊಂಡಿದೆ’’ ಎಂದು ಪೊಲೀಸ್ ವಕ್ತಾರ ಎಸ್.ಪಿ. ರುವಾನ್ ಗಣಸೇಕರ ತಿಳಿಸಿದರು.

ಎಪ್ರಿಲ್ 21ರಂದು ಶ್ರೀಲಂಕಾದ ಮೂರು ಚರ್ಚ್‌ಗಳು ಮತ್ತು ಮೂರು ವಿಲಾಸ ಹೊಟೇಲ್‌ಗಳಲ್ಲಿ ನಡೆದ ಆತ್ಮಹತ್ಯಾ ಬಾಂಬ್ ಸ್ಫೋಟಗಳಲ್ಲಿ 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಎನ್‌ಟಿಜೆಯ ಸುಮಾರು 73 ಶಂಕಿತ ಸದಸ್ಯರನ್ನು ಬಂಧಿಸಲಾಗಿದೆ ಹಾಗೂ ಅವರನ್ನು ಸಿಐಡಿ ಮತ್ತು ಭಯೋತ್ಪಾದಕ ತನಿಖಾ ಇಲಾಖೆ ಪ್ರಶ್ನಿಸುತ್ತಿದೆ ಎಂದು ಅವರು ಹೇಳಿದರು.

ಎಲ್ಲ ಶಂಕಿತ ರೂವಾರಿಗಳ ಬಂಧನ ಅಥವಾ ಸಾವು: ಪೊಲೀಸ್ ಮುಖಸ್ಥ

ಶ್ರೀಲಂಕಾದ ಈಸ್ಟರ್ ರವಿವಾರದ ಸರಣಿ ಬಾಂಬ್ ದಾಳಿಗಳ ಎಲ್ಲ ಶಂಕಿತ ರೂವಾರಿಗಳು ಮತ್ತು ದಾಳಿಯಲ್ಲಿ ನೇರವಾಗಿ ಶಾಮೀಲಾದವರು ಸತ್ತಿದ್ದಾರೆ ಅಥವಾ ಅವರನ್ನು ಬಂಧಿಸಲಾಗಿದೆ ಎಂದು ದೇಶದ ಉಸ್ತುವಾರಿ ಪೊಲೀಸ್ ಮುಖ್ಯಸ್ಥ ಚಂದನ ವಿಕ್ರಮರತ್ನೆ ಹೇಳಿದ್ದಾರೆ.

ಭವಿಷ್ಯದ ಬಳಕೆಗಾಗಿ ತೆಗೆದಿಡಲಾಗಿದ್ದ ಬಾಂಬ್ ತಯಾರಿಕಾ ವಸ್ತುಗಳನ್ನೂ ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ ಎಂದು ಉಸ್ತುವಾರಿ ಪೊಲೀಸ್ ಇನ್‌ಸ್ಪೆಕ್ಟರ್ ಜನರಲ್ ಚಂದನ ವಿಕ್ರಮರತ್ನೆ ಧ್ವನಿಮುದ್ರಿತ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News