ಶೇ.100 ವಿವಿಪ್ಯಾಟ್ ಸ್ಲಿಪ್‌ಗಳ ಎಣಿಕೆಗೆ ನಾಗರಿಕ ಸಂಘಟನೆಯ ಆಗ್ರಹ

Update: 2019-05-07 17:30 GMT

ಹೊಸದಿಲ್ಲಿ,ಮೇ 7: ಶೇ.50ರಷ್ಟು ವಿವಿಪ್ಯಾಟ್ ಸ್ಲಿಪ್‌ಗಳನ್ನು ಇವಿಎಮ್‌ಗಳೊಂದಿಗೆ ತಾಳೆ ಹಾಕುವಂತೆ ಕೋರಿ 21 ರಾಜಕೀಯ ಪಕ್ಷಗಳು ಸಲ್ಲಿಸಿದ್ದ ಮರುಪರಿಶೀಲನೆ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ತಿರಸ್ಕರಿಸಿದೆಯಾದರೂ, ಹಲವಾರು ವ್ಯಕ್ತಿಗಳು ಮತ್ತು ನಾಗರಿಕ ಗುಂಪುಗಳ ಒಕ್ಕೂಟವಾಗಿರುವ ‘ಜನ್ ಸರೋಕಾರ್ 2019 ’ ಮೇ 23ರಂದು ಮತ ಎಣಿಕೆ ವೇಳೆ ಶೇ.100ರಷ್ಟು ವಿವಿಪ್ಯಾಟ್ ಸ್ಲಿಪ್‌ಗಳನ್ನು ತಾಳೆ ಹಾಕುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖರು,ನಾವು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುತ್ತಿಲ್ಲ. ನಾವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆೆಯನ್ನು ನಡೆಸುವ ಸಾಂವಿಧಾನಿಕ ಹೊಣೆಗಾರಿಕೆಯನ್ನು ಹೊಂದಿರುವ ಚುನಾವಣಾ ಆಯೋಗವನ್ನು ಆಗ್ರಹಿಸುತ್ತಿದ್ದೇವೆ. ಮೇ 23ರಂದು ಶೇ.100ರಷ್ಟು ವಿವಿಪ್ಯಾಟ್ ಸ್ಲಿಪ್‌ಗಳ ಎಣಿಕೆಗಾಗಿ ನಾವು ಒತ್ತಾಯಿಸುತ್ತಿದ್ದೇವೆ. ಈ ಬಗ್ಗೆ ರಾಷ್ಟ್ರವ್ಯಾಪಿ ಸಹಿ ಅಭಿಯಾನವನ್ನೂ ನಾವು ನಡೆಸುತ್ತಿದ್ದೇವೆ. ನಾವು ಯಾವುದೇ ರಾಜಕಿಯ ಪಕ್ಷವನ್ನು ಪ್ರತಿನಿಧಿಸುತ್ತಿಲ್ಲ ಎಂದು ತಿಳಿಸಿದರು.

ವಿವಿಪ್ಯಾಟ್ ಸ್ಲಿಪ್‌ಗಳು ವಾಸ್ತವದಲ್ಲಿ ಮತಪತ್ರಗಳೇ ಆಗಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಅವುಗಳ ಎಣಿಕೆ ನಡೆಯಲೇಬೇಕು ಎಂಬ ವಾದ ಜನ್ ಸರೋಕಾರದ ‘ಪ್ರತಿ ಮತಕ್ಕೂ ಬೆಲೆಯಿದೆ,ಪ್ರತಿ ಮತವನ್ನೂ ಎಣಿಸಿ’ ಎಂಬ ಅಭಿಯಾನಕ್ಕೆ ಆಧಾರವಾಗಿದೆ.

 ತಾವು ಯಾವುದಕ್ಕೆ ಮತ ಚಲಾಯಿಸಿದ್ದೇವೋ ಅದು(ವಿವಿಪ್ಯಾಟ್ ಸ್ಲಿಪ್) ಎಣಿಕೆಯಾಗಬೇಕೇ ಹೊರತು ಯಂತ್ರದಲ್ಲಿರುವುದಲ್ಲ ಎಂದು ಆಗ್ರಹಿಸಲು ಪ್ರತಿ ಮತದಾರರಿಗೂ ಹಕ್ಕು ಇದೆ. ವಿವಿ ಪ್ಯಾಟ್ ಸ್ಲಿಪ್‌ಗಳ ಎಣಿಕೆ ಪಾರದರ್ಶಕತೆಗೆ ಅಗತ್ಯ ಎಂದು ಸರ್ವೋಚ್ಚ ನ್ಯಾಯಾಲಯವೂ ಒಪ್ಪಿಕೊಂಡಿದೆ. ಇವಿಎಮ್‌ಗಳು ಸಂಪೂರ್ಣ ಸುರಕ್ಷಿತ ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಇರಬಹುದು, ಆದರೆ ಹಾಗೆ ಜನರು ಅದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಪ್ರಜೆಯ ಮೂಲಭೂತ ಹಕ್ಕು ಆಗಿರುವುದರಿಂದ ಮತದಾರರ ವಿಶ್ವಾಸ ಮುಖ್ಯವಾಗಿದೆ ಎಂದು ಅಭಯಾನದ ನೇತೃತ್ವ ವಹಿಸಿರುವ ನಿಖಿಲ್ ಡೇ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News