ಭಾರತೀಯ ಮೂಲದ ವೈದ್ಯನ ದುಬಾರಿ ಡೈವೋರ್ಸ್

Update: 2019-05-08 05:48 GMT

ಸಿಂಗಾಪುರ, ಮೇ 8: ಭಾರತೀಯ ಮೂಲದ ನರರೋಗ ತಜ್ಞ ಗೋಪಿನಾಥನ್ ದೇವದಾಸನ್ (69) ಎಂಬವರ ಮಾಜಿ ಪತ್ನಿ ಬ್ರಿಟಿಷ್ ಕೊಲಂಬಿಯಾ ಕೋರ್ಟ್ ಮೂಲಕ 25 ದಶಲಕ್ಷ ಡಾಲರ್ ಪರಿಹಾರ ಪಡೆದಿದ್ದು, ಇದು ಅತಿದೊಡ್ಡ ಡೈವೋರ್ಸ್ ಪರಿಹಾರಗಳಲ್ಲೊಂದು ಎನಿಸಿದೆ.

ವಿಚಾರಣೆ ವೇಳೆ ಗೋಪಿನಾಥನ್‌ನ ನಡತೆ ಖಂಡನೀಯ ಎಂದು ಹೇಳಿರುವ ನ್ಯಾಯಾಲಯ, ಎ. 29ರಂದು ಮಾಜಿ ಪತ್ನಿ ಕ್ರಿಸ್ಟಿ ದೇವದಾಸನ್‌ಗೆ 54.98 ಲಕ್ಷ ಕೆನಡಿಯನ್ ಡಾಲರ್ ಜೀವನಾಂಶ ಮತ್ತು 6.12 ಲಕ್ಷ ಡಾಲರ್ ಮಕ್ಕಳ ಪೋಷಣೆ ನೆರವು ನೀಡುವಂತೆ ಸೂಚಿಸಿದೆ.

ಪ್ರಕರಣ ವಿಚಾರಣೆ ನಡೆಯುತ್ತಿರುವ ವೇಳೆ ದೇವದಾಸನ್ ಅವರ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಿದ್ದರೂ, ಸಿಂಗಾಪುರ ಬ್ಯಾಂಕ್ ಖಾತೆಯಲ್ಲಿ ವಹಿವಾಟು ನಡೆಸಿದ್ದರು. ಜತೆಗೆ ಆಸ್ತಿ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಲ್ಲದೇ, ಮಗಳಿಗೆ ಉದ್ದೇಶಪೂರ್ವಕವಾಗಿ ಮುಜುಗರ ಉಂಟು ಮಾಡಿದ್ದರು. ಜತೆಗೆ ಕ್ಲೇಮ್ ಸಲ್ಲಿಸಿದ ಮಾಜಿ ಪತ್ನಿಯ ವಕೀಲನ ಜತೆ ನ್ಯಾಯಾಧೀಶೆ ಅಕ್ರಮ ಸಂಪರ್ಕ ಹೊಂದಿದ್ದಾರೆ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದನ್ನು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿರುವ ಈ ವೈದ್ಯ ಕ್ರಿಸ್ಟಿಯನ್ನು 1997ರಲ್ಲಿ ವಿವಾಹವಾಗಿದ್ದರು. 2016ರಲ್ಲಿ ಆಕೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದಳು. ಅಪಾರ ಸಂಪತ್ತನ್ನು ಈ ದಂಪತಿ ಹೊಂದಿದ್ದು, ದುಬಾರಿ ಕಾರು, ಆಭರಣ, ಕಲಾಕೃತಿ ಮತ್ತು ಮನೆಗಳಿವೆ. ಕೆನಡಾ, ಅಮೆರಿಕ, ಸಿಂಗಾಪುರ, ಥಾಯ್ಲೆಂಡ್ ಮತ್ತು ಮಲೇಷ್ಯಾದಲ್ಲಿ ಆಸ್ತಿಗಳಿವೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಕ್ರಿಸ್ಟಿ ತನ್ನ ಮೊದಲ ಪತಿಗೆ 1996ರಲ್ಲಿ ವಿಚ್ಛೇದನ ನೀಡಿದ್ದರೆ, ದೇವದಾಸನ್ ಇಬ್ಬರು ಮಕ್ಕಳನ್ನು ಹೊಂದಿದ್ದ ಮೊದಲ ಪತ್ನಿಗೆ 1997ರಲ್ಲಿ ವಿಚ್ಛೇದನ ನೀಡಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News