ಸರಿಯೋ, ತಪ್ಪೋ ನಿರ್ಧಾರ ಕೈಗೊಳ್ಳಲಾಗಿದೆ: ಮೋದಿ, ಶಾಗೆ ಕ್ಲೀನ್ ಚಿಟ್ ಪ್ರಶ್ನಿಸಿದ್ದ ಅಪೀಲು ತಿರಸ್ಕರಿಸಿದ ಸುಪ್ರೀಂ

Update: 2019-05-08 08:43 GMT

ಹೊಸದಿಲ್ಲಿ, ಮೇ 8: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂಬ ದೂರುಗಳನ್ನು ಪರಿಶೀಲಿಸಿ ಅವರಿಬ್ಬರಿಗೂ ಕ್ಲೀನ್ ಚಿಟ್ ನೀಡಿರುವ ಚುನಾವಣಾ ಆಯೋಗದ ವಿರುದ್ಧ ಕ್ರಮ ಕೋರಿ ಕಾಂಗ್ರೆಸ್ ಸಂಸದೆ ಸುಷ್ಮಿತಾ ದೇವ್ ಸಲ್ಲಿಸಿದ್ದ ಅಪೀಲಿನ ಮೇಲೆ ಯಾವುದೇ ಆದೇಶ ಹೊರಡಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, “ಸರಿಯೋ, ತಪ್ಪೋ  ಒಂದು ನಿರ್ಧಾರ ಕೈಗೊಳ್ಳಲಾಗಿದೆ, ಅದನ್ನು ಹೊಸ ಅಪೀಲಿನ ಮೂಲಕ ಪ್ರಶ್ನಿಸಬಹುದು” ಎಂದು ಹೇಳಿ ಅಪೀಲನ್ನು ತಿರಸ್ಕರಿಸಿದೆ.

ಮೋದಿ ಮತ್ತು ಶಾಗೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿ ಹೊರಡಿಸಿದ ಆದೇಶಗಳ ದಾಖಲೆಗಳನ್ನು ಪ್ರಸ್ತುತಪಡಿಸುವಂತೆ ಇದಕ್ಕೂ ಮೊದಲು ನ್ಯಾಯಾಲಯ ಕಾಂಗ್ರೆಸ್ ಸಂಸದೆಗೆ ಸೋಮವಾರ ಸೂಚಿಸಿತ್ತು. ಇಬ್ಬರು ಬಿಜೆಪಿ ನಾಯಕರೂ ದ್ವೇಷದ ಭಾಷಣ ಹಾಗೂ ಸೇನಾ ಕಾರ್ಯಾಚರಣೆಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಆರೋಪ ಎದುರಿಸುತ್ತಿದ್ದರೂ ಅವರ ವಿರುದ್ಧದ ದೂರುಗಳ ಕುರಿತಂತೆ ಚುನಾವಣಾ ಆಯೋಗ ನಿಷ್ಕ್ರಿಯತೆ ತೋರಿದೆ ಎಂದು ಆಕೆ ಆರೋಪಿಸಿದ ನಂತರ ನ್ಯಾಯಾಲಯ ಮೇಲಿನಂತೆ ಸೂಚಿಸಿತ್ತು.

ಯಾವುದೇ ಕಾರಣ ನೀಡದೆ ಚುನಾವಣಾ ಆಯೋಗ ರಹಸ್ಯ ರೀತಿಯಲ್ಲಿ ಆದೇಶ ನೀಡಿದೆ ಎಂದು ಸುಷ್ಮಿತಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಚುನಾವಣಾ ಆಯೋಗವು ಮೋದಿ, ಶಾ ಹೇಳಿಕೆಗಳಿಗೆ ಹೋಲಿಕೆಯಾಗುವ ಹೇಳಿಕೆಗಳನ್ನು ನೀಡಿದ್ದ ಕೇಂದ್ರ ಸಚಿವೆ ಮೇನಕಾ ಗಾಂಧಿ, ಉತ್ತರ ಪ್ರದೇಶ ಸೀಎಂ ಆದಿತ್ಯನಾಥ್, ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ಬಿಜೆಪಿಯ ಭೋಪಾಲ್ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಖುರ್ ವಿರುದ್ದ ಕ್ರಮ ಕೈಗೊಂಡಿದೆ ಎಂದು ಹೇಳಿದ ಅವರು ಮೋದಿ, ಶಾ ಕುರಿತಂತೆ ಚುನಾವಣಾ ಆಯೋಗ ತಾರತಮ್ಯ ನೀತಿ ಅನುಸರಿಸಿದೆ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News