ನೀರವ್‌ಗೆ ಮೂರನೇ ಬಾರಿ ಜಾಮೀನು ನಿರಾಕರಿಸಿದ ಲಂಡನ್ ನ್ಯಾಯಾಲಯ

Update: 2019-05-09 15:17 GMT

ಲಂಡನ್, ಮೇ 9: ಬ್ರಿಟನ್‌ನ ನ್ಯಾಯಾಲಯವೊಂದು ಬುಧವಾರ ಪಂಜಾಬ್ ನ್ಯಾಶನಲ್ ಬ್ಯಾಂಕ್ (ಪಿಎನ್‌ಬಿ)ಗೆ ಸುಮಾರು 14,000 ಕೋಟಿ ರೂಪಾಯಿ ವಂಚಿಸಿ ಪರಾರಿಯಾಗಿರುವ ವಜ್ರೋದ್ಯಮಿ ನೀರವ್ ಮೋದಿಗೆ ಜಾಮೀನು ನೀಡಲು ಮೂರನೇ ಬಾರಿಗೆ ನಿರಾಕರಿಸಿತು.

20 ಲಕ್ಷ ಪೌಂಡ್ (ಸುಮಾರು 18 ಕೋಟಿ ರೂಪಾಯಿ) ಭದ್ರತಾ ಠೇವಣಿ ನೀಡುವೆ ಹಾಗೂ 24 ಗಂಟೆ ಕರ್ಫ್ಯೂ ಮುಂತಾದ ಕಠಿಣ ಶರತ್ತುಗಳನ್ನು ಪಾಲಿಸುವೆ ಎಂಬ ಕೊಡುಗೆಗಳನ್ನು ನೀರವ್ ಮೋದಿ ನೀಡಿದರೂ ನ್ಯಾಯಾಲಯಕ್ಕೆ ತೃಪ್ತಿಯಾಗಲಿಲ್ಲ.

 ವಂಚಕ ನೀರವ್ ಮೋದಿಯನ್ನು ಭಾರತಕ್ಕೆ ಗಡಿಪಾರು ಮಾಡಬೇಕು ಎಂದು ಕೋರಿ ಭಾರತ ಇಲ್ಲಿನ ವೆಸ್ಟ್‌ಮಿನ್‌ಸ್ಟರ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ. ಅವರನ್ನು ಮಾರ್ಚ್‌ನಲ್ಲಿ ಲಂಡನ್ ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಈಗಾಗಲೇ ಎರಡು ಬಾರಿ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದೆ.

ಮೋದಿಯನ್ನು ಇಡಲಾಗಿರುವ ವಾಂಡ್ಸ್‌ವರ್ತ್ ಜೈಲಿನ ಪರಿಸ್ಥಿತಿಯನ್ನು ‘‘ಕಠಿಣ ಹಾಗೂ ಹಾನಿಕಾರಕ’’ ಎಂಬುದಾಗಿ ಮೋದಿ ಪರ ವಕೀಲೆ ಕ್ಲೇರ್ ಮೊಂಟ್‌ಗೊಮರಿ ಬಣ್ಣಿಸಿದರು.

ಆದರೆ, ಜಾಮೀನು ಪಡೆಯಲು ಒದಗಿಸಲಾದ ಕಾರಣಗಳನ್ನು ಮುಖ್ಯ ಮ್ಯಾಜಿಸ್ಟ್ರೇಟ್ ಎಮ್ಮಾ ಅರ್ಬತ್‌ನಾಟ್ ತಳ್ಳಿ ಹಾಕಿದರು. ಮೋದಿಗೆ ಜಾಮೀನು ನೀಡುವ ವಿಷಯದಲ್ಲಿ ತನ್ನ ಆತಂಕಗಳು ದೂರವಾಗಿಲ್ಲ ಎಂದು ಹೇಳಿದರು.

ಈ ಮೊದಲು, ಮಾರ್ಚ್ 20 ಮತ್ತು 29 ರಂದು ಮೋದಿಯ ಜಾಮೀನು ಅರ್ಜಿಗಳು ವಿಚಾರಣೆಗೆ ಬಂದಿದ್ದಾಗ, ಜಾಮೀನಿಗೆ 10 ಲಕ್ಷ ಪೌಂಡ್ (ಸುಮಾರು 9 ಕೋಟಿ ರೂಪಾಯಿ) ಭದ್ರತಾ ಠೇವಣಿಯ ಕೊಡುಗೆಯನ್ನು ನೀಡಲಾಗಿತ್ತು. ಆದರೆ, ಎರಡೂ ಸಂದರ್ಭಗಳಲ್ಲಿ ಜಾಮೀನನ್ನು ನ್ಯಾಯಾಲಯ ತಿರಸ್ಕರಿಸಿತ್ತು.

421 ಕೋಟಿ ರೂ. ಮೇಲೆ ನಿಯಂತ್ರಣ; ಬ್ರಿಟನ್‌ನೊಂದಿಗೆ ನಂಟಿನ ಕೊರತೆ...

ಮೋದಿ ‘ಅಪಹರಿಸಿದ’ ಸುಮಾರು 60 ಮಿಲಿಯ ಡಾಲರ್ (ಸುಮಾರು 421 ಕೋಟಿ ರೂಪಾಯಿ)ಮೇಲೆ ಇನ್ನೂ ಅವರಿಗೆ ನಿಯಂತ್ರಣ ಇರುವುದು ಹಾಗೂ ಬ್ರಿಟನ್‌ನೊಂದಿಗೆ ಅವರಿಗೆ ನಂಟು ಇಲ್ಲದಿರುವುದು ತನ್ನ ಆತಂಕಕ್ಕೆ ಕಾರಣಗಳು ಎಂಬುದಾಗಿ ನ್ಯಾಯಾಧೀಶೆ ಹೇಳಿದರು. ಮೋದಿ ಅಥವಾ ಅವರ ಜನರು ಸಾಕ್ಷಿಗಳನ್ನು ಹೆದರಿಸುವ ಹಾಗೂ ಸಾಕ್ಷಗಳನ್ನು ನಾಶಪಡಿಸುವ ಸಾಧ್ಯತೆಯೂ ಇಲ್ಲದಿಲ್ಲ ಎಂದರು.

ನೀರವ್ ಮೋದಿ 2017ರ ಕೊನೆಯಿಂದ ಬ್ರಿಟನ್‌ನಲ್ಲಿ ನೆಲೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News