×
Ad

ವೆನೆಝುವೆಲ: ಪ್ರತಿಪಕ್ಷ ನಾಯಕನ ಬಂಧನ

Update: 2019-05-09 23:07 IST

ಕ್ಯಾರಕಸ್ (ವೆನೆಝುವೆಲ), ಮೇ 9: ವೆನೆಝುವೆಲದ ಗುಪ್ತಚರ ಅಧಿಕಾರಿಗಳು ಬುಧವಾರ ಸಂಸತ್ತಿನ ಪ್ರತಿಪಕ್ಷ ಉಪನಾಯಕ ಎಡ್ಗರ್ ಝಂಬ್ರಾನೊರನ್ನು ಬಂಧಿಸಿದ್ದಾರೆ. ಅವರು ಕಾರಿನ ಒಳಗೆ ಇರುವಂತೆಯೇ, ಕಾರನ್ನು ಟ್ರಕ್ಕೊಂದು ಎಳೆದುಕೊಂಡು ಹೋಗಿದೆ.

ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಅಮೆರಿಕ, ಪ್ರತಿಪಕ್ಷ ನಿಯಂತ್ರಣದ ನ್ಯಾಶನಲ್ ಅಸೆಂಬ್ಲಿಯ ಉಪಾಧ್ಯಕ್ಷರೂ ಆಗಿರುವ ಝಂಬ್ರಾನೊರನ್ನು ಬಿಡುಗಡೆ ಮಾಡದಿದ್ದರೆ, ವೆನೆಝುವೆಲ ಸರಕಾರವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದಾಗಿ ಅಮೆರಿಕ ಎಚ್ಚರಿಸಿದೆ.

ಪ್ರತಿಪಕ್ಷ ನಾಯಕ ಜುವಾನ್ ಗ್ವಾಯಿಡು ನ್ಯಾಶನಲ್ ಅಸೆಂಬ್ಲಿಯ ಅಧ್ಯಕ್ಷರಾಗಿದ್ದಾರೆ.

ಅಧ್ಯಕ್ಷ ನಿಕೊಲಸ್ ಮಡುರೊ ಸರಕಾರವನ್ನು ಉರುಳಿಸಲು ಕಳೆದ ವಾರ ಸೇನೆ ಬಂಡಾಯ ಏಳುವಂತೆ ಮಾಡಲು ಜುವಾನ್ ಪ್ರಯತ್ನಿಸಿದ ಬಳಿಕ, ಸರಕಾರವು ಇದೇ ಮೊದಲ ಬಾರಿಗೆ ಸಂಸದರೊಬ್ಬರನ್ನು ಬಂಧಿಸಿದೆ.

ಝಂಬ್ರಾನೊರ ‘ಸ್ವೇಚ್ಛಾಚಾರದ ಬಂಧನ’ವು ‘ಕಾನೂನುಬಾಹಿರ ಹಾಗೂ ಅಕ್ಷಮ್ಯ’ ಎಂದು ಅಮೆರಿಕದ ವೆನೆಝುವೆಲ ರಾಯಭಾರ ಕಚೇರಿ ಬಣ್ಣಿಸಿದೆ. ಈ ರಾಯಭಾರ ಕಚೇರಿಯು ಈಗ ವಾಶಿಂಗ್ಟನ್‌ನಲ್ಲೇ ಕಾರ್ಯಾಚರಿಸುತ್ತಿದೆ.

ಕಳೆದ ವಾರ ಗ್ವಾಯಿಡು ನೇತೃತ್ವದಲ್ಲಿ ನಡೆದ ಬಂಡಾಯ ಯತ್ನವೊಂದು ನಡೆಯಿತಾದರೂ, ಮಡುರೊ ಸರಕಾರವನ್ನು ಉರುಳಿಸಲು ಅದಕ್ಕೆ ಸಾಧ್ಯವಾಗಲಿಲ್ಲ.

ಗ್ವಾಯಿಡು ವೆನೆಝುವೆಲ ಸರಕಾರದ ಮುಖ್ಯಸ್ಥ ಎಂಬುದಾಗಿ ಅಮೆರಿಕ ಮತ್ತು ಪಾಶ್ಚಾತ್ಯ ದೇಶಗಳು ಅಂಗೀಕರಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News