ಅಫ್ರಿದಿ ಹೇಳಿಕೆಗೆ ಅಖ್ತರ್ ಬೆಂಬಲ

Update: 2019-05-10 14:41 GMT

ಕರಾಚಿ, ಮೇ 9: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ತನ್ನ ಆತ್ಮಚರಿತ್ರೆ ‘ಗೇಮ್ ಚೇಂಜರ್’ನಲ್ಲಿ ಪ್ರಸ್ತುತಪಡಿಸಿರುವ ವಿಷಯಗಳನ್ನು ಅವರೊಂದಿಗೆ ತಂಡದಲ್ಲಿ ಸಹ ಆಟಗಾರನಾಗಿದ್ದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ಬೆಂಬಲಿಸಿದ್ದಾರೆ.

ತಂಡದ ಪರ ಆಡುತ್ತಿದ್ದ ಸಂದರ್ಭ ಹಿರಿಯ ಆಟಗಾರರು ತನ್ನೊಡನೆ ಒರಟಾಗಿ ವರ್ತಿಸಿದ್ದರು ಎಂದು ಅಫ್ರಿದಿ ಹೇಳಿದ್ದರು. 1999ರಲ್ಲಿ ಚೆನ್ನೈಯಲ್ಲಿ ಭಾರತ ದೆದುರು ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಆಗ ಪಾಕ್ ತಂಡದ ಕೋಚ್ ಆಗಿದ್ದ ಜಾವೇದ್ ಮಿಯಾಂದಾದ್ ಬ್ಯಾಟಿಂಗ್ ಪ್ರಾಕ್ಟೀಸ್‌ನಲ್ಲಿ ಪಾಲ್ಗೊಳ್ಳಲು ತನಗೆ ಅವಕಾಶ ನೀಡಿರಲಿಲ್ಲ ಎಂದು ಅಫ್ರಿದಿ ಉದಾಹರಣೆ ನೀಡಿದ್ದರು. ಮಿಯಾಂದಾದ್ ಬಗ್ಗೆ ಬರೆದಿರುವ ಅಫ್ರಿದಿ, ಪಂದ್ಯ ಮುಗಿದ ಬಳಿಕ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ತನ್ನನ್ನು ಹೊಗಳಬೇಕೆಂದು ಮಿಯಾಂದಾದ್ ತನ್ನ ಮೇಲೆ ಒತ್ತಡ ಹೇರಿದ್ದರು. ಇದರಿಂದ ಮಿಯಾಂದಾದ್ ಬಗ್ಗೆ ತನ್ನಲ್ಲಿದ್ದ ಎಲ್ಲಾ ಗೌರವವೂ ನಾಶವಾಯಿತು ಎಂದು ಹೇಳಿದ್ದಾರೆ.

ಈ ಹೇಳಿಕೆಯನ್ನು ಬೆಂಬಲಿಸಿರುವ ಅಖ್ತರ್, ತಂಡದ ಪರ ಆಡುತ್ತಿದ್ದ ಸಂದರ್ಭ ತನಗೂ ಇಂತಹ ಅನುಭವವಾಗಿದೆ ಎಂದಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಒಮ್ಮೆ ನಾಲ್ವರು ಆಟಗಾರರು ತನ್ನನ್ನು ಥಳಿಸುವ ಉದ್ದೇಶದಿಂದ ಬ್ಯಾಟ್ ಹಿಡಿದುಕೊಂಡು ಬಂದಿದ್ದರು ಎಂದೂ ಅಖ್ತರ್ ಹೇಳಿದ್ದಾರೆ. ಆಡುತ್ತಿದ್ದ ದಿನದಲ್ಲಿ ತನಗೆ ಹಿರಿಯ ಆಟಗಾರರಿಂದ ಆಗಿರುವ ಕೆಟ್ಟ ಅನುಭವದ ಬಗ್ಗೆ ಅಫ್ರಿದಿ ಎಲ್ಲವನ್ನೂ ಹೇಳಿಲ್ಲ ಎಂದು ನನಗನಿಸುತ್ತದೆ. ಇಂತಹ ಕೆಲವು ಘಟನೆಗಳನ್ನು ನಾನು ಕಣ್ಣಾರೆ ಕಂಡಿದ್ದು ಅವರ ಹೇಳಿಕೆಗೆ ಸಂಪೂರ್ಣ ಸಹಮತವಿದೆ ಎಂದು ಸ್ಥಳೀಯ ಟಿವಿ ಚಾನೆಲ್‌ನ ಕ್ರೀಡಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅಖ್ತರ್ ಹೇಳಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ. ಹಲವು ವರ್ಷದ ಬಳಿಕ ತಂಡದ 10 ಹಿರಿಯ ಆಟಗಾರರು ಉಮ್ರಾಕ್ಕೆ ತೆರಳುವ ಮೊದಲು ತಮ್ಮಿಬ್ಬರ ಬಳಿ ಬಂದು ತಮ್ಮ ಒರಟು ವರ್ತನೆಗಾಗಿ ಕ್ಷಮೆ ಕೋರಿದ್ದರು ಎಂದು ಅಖ್ತರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News