ಚೀನಾ ಸರಕಿನ ಮೇಲೆ ಅಮೆರಿಕದ 25 ಶೇ. ಆಮದು ತೆರಿಗೆ ಜಾರಿ

Update: 2019-05-10 18:19 GMT

 ವಾಶಿಂಗ್ಟನ್, ಮೇ 10: ಚೀನಾದ 200 ಬಿಲಿಯ ಡಾಲರ್ (ಸುಮಾರು 14 ಲಕ್ಷ ಕೋಟಿ ರೂಪಾಯಿ) ಸರಕಿನ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ 25 ಶೇಕಡ ಆಮದು ತೆರಿಗೆಯು ಶುಕ್ರವಾರ ಜಾರಿಗೆ ಬಂದಿದೆ. ಅದೇ ವೇಳೆ, ಇದಕ್ಕೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಚೀನಾ ಪಣ ತೊಟ್ಟಿದೆ.

ಅಮೆರಿಕ ತೆಗೆದುಕೊಂಡಿರುವ ನಿರ್ಧಾರಕ್ಕೆ ‘ತೀವ್ರ ವಿಷಾದ’ ವ್ಯಕ್ತಪಡಿಸುವುದಾಗಿ ಚೀನಾದ ವಾಣಿಜ್ಯ ಸಚಿವಾಲಯ ಹೇಳಿದೆ ಹಾಗೂ ಇದಕ್ಕೆ ಅಗತ್ಯ ಪ್ರತಿ ಕ್ರಮಗಳನ್ನು ತೆಗೆದುಕೊಳ್ಳುವುದಾಗಿಯೂ ಅದು ತಿಳಿಸಿದೆ. ಆದರೆ, ವಿವರಗಳನ್ನು ನೀಡಿಲ್ಲ.

ಜಗತ್ತಿನ ಎರಡು ಬೃಹತ್ ಆರ್ಥಿಕತೆಗಳ ನಡುವಿನ 10 ತಿಂಗಳ ವ್ಯಾಪಾರ ಸಮರವನ್ನು ಕೊನೆಗೊಳಿಸುವ ಉದ್ದೇಶದ ಮಾತುಕತೆಗಳಲ್ಲಿ ಪ್ರಗತಿ ಸಾಧಿಸಲು ಅಮೆರಿಕ ಮತ್ತು ಚೀನಾಗಳ ಸಂಧಾನಕಾರರು ವಿಫಲರಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಚೀನಾದ ಉಪ ಪ್ರಧಾನಿ ಲಿಯು ಹೆ, ಅಮೆರಿಕದ ವಾಣಿಜ್ಯ ಪ್ರತಿನಿಧಿ ರಾಬರ್ಟ್ ಲೈಟ್‌ಹೈಝರ್ ಮತ್ತು ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಟೀವನ್ ಮನುಚಿನ್ ಗುರುವಾರ 90 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಅವರು ಶುಕ್ರವಾರ ಮಾತುಕತೆಗಳನ್ನು ಪುನರಾರಂಭಿಸುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News