1979: ವೆಸ್ಟ್ ಇಂಡೀಸ್ ಗೆ ಎರಡನೇ ಬಾರಿ ಕಪ್

Update: 2019-05-10 18:56 GMT

ಲಾರ್ಡ್ಸ್, ಮೇ 10: 1979ರಲ್ಲಿ ಎರಡನೇ ವಿಶ್ವಕಪ್ ಮೊದಲ ವಿಶ್ವಕಪ್‌ಗೆ ಹೋಲಿಸಿದರೆ ಕೆಲವು ಬದಲಾವಣೆಯನ್ನು ಕಾಣುವಂತಾದರೂ ವಿಶ್ವಚಾಂಪಿಯನ್ ಬದಲಾಗಲಿಲ್ಲ. ವೆಸ್ಟ್ ಇಂಡೀಸ್ ತನ್ನ ಪ್ರಭುತ್ವವನ್ನು ಮುಂದುವರಿಸಿಕೊಂಡು ಮತ್ತೊಮ್ಮೆ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ವೆಸ್ಟ್ ಇಂಡೀಸ್ ಚೊಚ್ಚಲ ವಿಶ್ವಕಪ್‌ನಲ್ಲಿ ನಾಯಕ ಕ್ಲೈವ್ ಲಾಯ್ಡ್ ನೇತೃತ್ವದಲ್ಲಿ ಆಡಿದ್ದ ತಂಡವನ್ನೇ ಉಳಿಸಿಕೊಂಡು ಇನ್ನೊಮ್ಮೆ ವಿಶ್ವಚಾಂಪಿಯನ್ ಪಟ್ಟಕ್ಕೇರಿತು. ಶ್ರೀಲಂಕಾ ಮತ್ತು ಕೆನಡಾ ಸೇರಿದಂತೆ ಒಟ್ಟು 8 ತಂಡಗಳು ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ್ದವು. ಮೊದಲ ಹಂತ: 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಆಟಗಾರರ ವಸ್ತ್ರದ ಬಣ್ಣ ಬಿಳಿ, ಪಂದ್ಯಗಳು 60 ಓವರ್‌ನದಾಗಿತ್ತು.ವೆಸ್ಟ್ ಇಂಡೀಸ್ ತಂಡ ಎರಡು ಗೆಲುವಿನೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು. ಶ್ರೀಲಂಕಾ ವಿರುದ್ಧ ಮೂರನೇ ಪಂದ್ಯ ರದ್ದಾಗಿತ್ತು. ಬಲಿಷ್ಠ ಮಧ್ಯಮ ವೇಗದ ಬೌಲರ್‌ಗಳನ್ನು ಹೊಂದಿದ್ದ ನ್ಯೂಝಿಲ್ಯಾಂಡ್ ಉತ್ತಮ ಪ್ರದರ್ಶನದೊಂದಿಗೆ ಶ್ರೀಲಂಕಾ ಮತ್ತು ಭಾರತದ ವಿರುದ್ಧ ಗೆಲುವು ಸಾಧಿಸಿತ್ತು.

►ಸೆಮಿಫೈನಲ್: ಟೂರ್ನ ಮೆಂಟ್‌ನಲ್ಲಿ ವೆಸ್ಟ್ ಇಂಡೀಸ್, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ನ್ಯೂಝಿಲ್ಯಾಂಡ್ ಸೆಮಿಫೈನಲ್ ಪ್ರವೇಶಿಸಿದರೆ, ಮೊದಲ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿ ಪ್ರಶಸ್ತಿಯಿಂದ ವಂಚಿತಗೊಂಡ ಆಸ್ಟ್ರೇಲಿಯ ಗ್ರೂಪ್ ಹಂತದಲ್ಲೇ ನಿರ್ಗಮಿಸಿರುವುದು ವಿಶೇಷ. ಓಲ್ಡ್ ಟ್ರಾಫೋರ್ಡ್‌ನಲ್ಲಿ ನಡೆದ ಇಂಗ್ಲೆಂಡ್ ಮತ್ತು ನ್ಯೂಝಿಲ್ಯಾಂಡ್ ನಡುವಿನ ಸೆಮಿಫೈನಲ್ ರೋಚಕವಾಗಿತ್ತು. ಟಾಸ್ ಗೆದ್ದ ನ್ಯೂಝಿಲ್ಯಾಂಡ್ ತಂಡವು ಇಂಗ್ಲೆಂಡ್‌ನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. 98 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್‌ಗೆ ಗ್ರಹಾಮ್ ಗೂಚ್ ಮತ್ತು ಮೈಕ್ ಬ್ರೇರ್ಲಿ ತಲಾ 1 ಅರ್ಧ ಶತಕ ದಾಖಲಿಸಿ 8 ವಿಕೆಟ್ ನಷ್ಟದಲ್ಲಿ 221 ರನ್ ದಾಖಲಿಸಲು ನೆರವಾದರು. ಆದರೆ ನ್ಯೂಝಿಲ್ಯಾಂಡ್‌ಗೆ ಗೆಲ್ಲಲು 222 ರನ್ ಗಳಿಸಲಾಗದೆ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 212 ರನ್ ಗಳಿಸಿ , 9 ರನ್‌ಗಳ ಸೋಲು ಅನುಭವಿಸಿತು. ಓವಲ್‌ನಲ್ಲಿ ನಡೆದ ಇನ್ನೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ 43 ರನ್‌ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿತ್ತು.ವೆಸ್ಟ್‌ಇಂಡೀಸ್ 6 ವಿಕೆಟ್ ನಷ್ಟದಲ್ಲಿ 293 ರನ್ ಮಾಡಿತ್ತು. ಇದಕ್ಕುತ್ತರವಾಗಿ ಪಾಕಿಸ್ತಾನ ಮಜೀದ್ ಖಾನ್(81) ಮತ್ತು ಝಹೀರ್ ಅಬ್ಬಾಸ್ (93) ನೆರವಿನಲ್ಲಿ 250 ರನ್ ಗಳಿಸಲಷ್ಟೇ ಶಕ್ತವಾಯಿತು. ವಿವಿಯನ್ ರಿಚರ್ಡ್ಸ್ 52ಕ್ಕೆ 3 ವಿಕೆಟ್ ಉಡಾಯಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

 ►ಫೈನಲ್ ಸಮರ: ಫೈನಲ್‌ನಲ್ಲಿ 2 ಬಲಿಷ್ಠ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದವು.ಲಾರ್ಡ್ಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ರಿಚರ್ಡ್ಸ್ ಶತಕ(ಔಟಾಗದೆ 138) ಸಹಾಯದಿಂದ ನಿಗದಿತ 60 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 286 ರನ್ ಗಳಿಸಿತ್ತು. ಆದರೆ ಗೆಲ್ಲಲು 287 ರನ್‌ಗಳ ಗುರಿ ಪಡೆದ ಇಂಗ್ಲೆಂಡ್ 51 ಓವರ್‌ಗಳಲ್ಲಿ 194 ರನ್‌ಗಳಿಗೆ ಆಲೌಟ್ ಆಗಿ 92 ರನ್‌ಗಳ ಸೋಲು ಅನುಭವಿಸಿತು.1 ವಿಕೆಟ್‌ಗೆ 129 ರನ್ ಮಾಡಿದ್ದ ಇಂಗ್ಲೆಂಡ್ ಬಳಿಕ 183 ರನ್ ಮಾಡುವ ಹೊತ್ತಿಗೆ ಇನ್ನೆರಡು ವಿಕೆಟ್‌ಗಳನ್ನು ಕೈ ಚೆಲ್ಲಿತ್ತು. ಜೆ.ಗಾರ್ನೆರ್ (5-38), ಕ್ರಾಫ್ಟ್(3-42) ಮತ್ತು ಹೋಲ್ಡಿಂಗ್(2-16) ದಾಳಿಗೆ ಸಿಲುಕಿ 194 ರನ್ ಮಾಡುವಷ್ಟರಲ್ಲಿ ಆಲೌಟಾಯಿತು.

►ವಿಶ್ವಕಪ್‌ನಲ್ಲಿ ಭಾರತ

ಭಾರತ ಈ ಕೂಟದಲ್ಲಿ ತಾನಾಡಿದ್ದ ಮೂರು ಪಂದ್ಯಗಳಲ್ಲೂ ಸೋಲು ಅನುಭವಿಸಿತ್ತು. ಇನ್ನೂ ಟೆಸ್ಟ್ ಮಾನ್ಯತೆ ಪಡೆಯದ ಶ್ರೀಲಂಕಾ ಎದುರು 47 ರನ್‌ಗಳ ಸೋಲು ಅನುಭವಿಸಿತ್ತು. ವೆಸ್ಟ್ ಇಂಡೀಸ್ ಎದುರು 9 ವಿಕೆಟ್‌ಗಳ ಅಂತರದಿಂದ ಮತ್ತು ನ್ಯೂಝಿಲ್ಯಾಂಡ್ ಎದುರು 8 ವಿಕೆಟ್‌ಗಳ ಸೋಲು ಅನುಭವಿಸಿತ್ತು.

►ಮುಖ್ಯಾಂಶಗಳು

1979ರ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ನಡುವಿನ ಐದನೇ ಪಂದ್ಯ ಮಳೆಗಾಹುತಿಯಾಗಿತ್ತು. ಮೀಸಲು ದಿನಕ್ಕೆ ಪಂದ್ಯವನ್ನು ಮುಂದೂಡಲಾಗಿದ್ದರೂ ಆ ದಿನ ಮತ್ತೆ ಮಳೆ ಅಡ್ಡಪಡಿಸಿತು. ಮೂರನೇ ದಿನಕ್ಕೆ ಮುಂದೂಡಲಾಗಿದ್ದರೂ ಪಂದ್ಯ ನಡೆಯಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News