ರಸ್ತೆ, ವಿದ್ಯುತ್ ಸಮಸ್ಯೆ ಮಹತ್ವದ್ದಲ್ಲ, ಈ ಚುನಾವಣೆಯಲ್ಲಿ ರಾಷ್ಟ್ರೀಯ ಸುರಕ್ಷತೆ ಎಲ್ಲಕ್ಕಿಂತ ಮಿಗಿಲು: ಆದಿತ್ಯನಾಥ್

Update: 2019-05-11 08:28 GMT

ಲಕ್ನೋ : ಈ ಚುನಾವಣೆಯಲ್ಲಿ ರಸ್ತೆ, ವಿದ್ಯುತ್, ಒಳಚರಂಡಿ ಮುಂತಾದ ವಿಚಾರಗಳು ಮಹತ್ವದ್ದಲ್ಲ, ರಾಷ್ಟ್ರೀಯ ಭದ್ರತೆ ಹಾಗೂ ಸಮರ್ಥ ನಾಯಕನನ್ನು ಆರಿಸುವುದು ಹೆಚ್ಚು ಮಹತ್ವದ್ದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.

`ಯೇ ದೇಶ್ ಕಾ ಚುನಾವ್ ಹೈ, ಕಿಸೀ ವ್ಯಕ್ತೀ ಕಾ ನಹೀ, ಯಶಸ್ವೀ ನೇತೃತ್ವ ದೇನೇ ಕೇ ಲಿಯೇ ಚುನಾವ್...ಔರ್ ಇಸ್ ಚುನಾವ್ ಮೆ ನಾಲಿ, ಖದಂಜ, ಸಡಕ್, ಬಿಜ್ಲಿ ಯೇ ಮುದ್ದೇ ಬಹುತ್ ಮಾಯ್ನೆ ನಹೀ ರಖ್ತೇ, ಇಸ್ಕೆ ಲಿಯೆ ದೇಶ್ ಕಿ ಸುರಕ್ಷಾ ಮಹತ್ವಪೂರ್ಣ್ ಹೈ'' (ಇದು ದೇಶದ ಚುನಾವಣೆ ಹಾಗೂ ಒಬ್ಬ ವ್ಯಕ್ತಿಯ ಚುನಾವಣೆಯಲ್ಲ. ಸಮರ್ಥ ನಾಯಕನ್ನು ಆರಿಸುವ ಚುನಾವಣೆಯಿದು. ಈ ಚುನಾವಣೆಯಲ್ಲಿ ಒಳಚರಂಡಿ, ರಸ್ತೆ ಯಾ ವಿದ್ಯುತ್ ಸಮಸ್ಯೆ ಮಹತ್ವದ್ದಲ್ಲ. ಈ ಚುನಾವಣೆಯಲ್ಲಿ ರಾಷ್ಟ್ರೀಯ ಸುರಕ್ಷತೆ ಅತ್ಯಂತ ಮಹತ್ವದ್ದು) ಎಂದು ದೊಮರಿಯಾಗಂಜ್ ಎಂಬಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ್ ಹೇಳಿದ್ದಾರೆ.

ತಮ್ಮ ಭಾಷಣದಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಟೀಕಿಸಿದ  ಆದಿತ್ಯನಾಥ್, ``ಅವರು ಈ ಹಿಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ರೈತರಿಗೆ ಹಾಗೂ ಬಡವರಿಗೆ ಕೆಲಸ ಮಾಡುವ ಬದಲು ಉಗ್ರರ ವಿರುದ್ದ  ಪ್ರಕರಣಗಳನ್ನು ಕೈಬಿಟ್ಟರು,'' ಎಂದರು.

“ಉಗ್ರವಾದದ ಬಗ್ಗೆ ಕಾಂಗ್ರೆಸ್, ಎಸ್‍ಪಿ ಹಾಗೂ ಬಿಎಸ್‍ಪಿ ಮೃದು ಧೋರಣೆ ಹೊಂದಿವೆ ಇದು ದೇಶದ್ರೋಹಕ್ಕಿಂತ ಕಡಿಮೆಯಲ್ಲ,'' ಎಂದೂ ಅವರು ಹೇಳಿದರು.

“ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಬಬುವಾ (ಅಖಿಲೇಶ್) ರೌಡಿಗಳ ಮುಖ್ಯಸ್ಥ ಎಂದು ಬುವಾ (ಮಾಯಾವತಿ) ಹೇಳಿದರೆ ಬುವಾ ಭ್ರಷ್ಟಾಚಾರದ ಚಿಹ್ನೆ ಎಂದು ಬಬುವಾ ಹೇಳಲಿದ್ದಾರೆ,'' ಎಂದು ಹೇಳಿದ ಆದಿತ್ಯನಾಥ್ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಮತ ಪೋಲು ಮಾಡಬೇಡಿ ಎಂದು ಜನರಿಗೆ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News